ಸದ್ಯ ಎಲ್ಲೆಡೆ ಐಪಿಎಲ್ ಹವಾ ಜೋರಾಗಿದೆ. ಕ್ರಿಕೆಟ್ ಪ್ರೇಮಿಗಳು ಟಿವಿ ಮುಂದೆ ಕೂತು ತಮ್ಮ ನೆಚ್ಚಿನ ತಂಡಕ್ಕೆ ಜೈಕಾರ ಹಾಕ್ತಿದ್ದಾರೆ. ಇಂತಹ ಹೊತ್ತಲ್ಲೇ ನಮ್ಮ ಸ್ಯಾಂಡಲ್‌ವುಡ್ 'ಡಾಲಿ' ಧನಂಜಯ್ ಆರ್‌ಸಿಬಿ ಫ್ಯಾನ್ಸ್‌ಗಾಗಿ ಒಂದು ಕಿಕ್ಕೇರಿಸುವ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಅವರ ನಿರ್ಮಾಣದ 'ಮದರ್ ಪ್ರಾಮಿಸ್' ಸಿನಿಮಾದ ಈ ಆರ್‌ಸಿಬಿ ರೋಸ್ಟ್ ಸಾಂಗ್ ಈಗ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗ್ತಿದೆ.
'ಉರ್ಕೊಳೋರ್ ಉರ್ಕೊಳಿ.. ಬಡ್ಕೊಳೋರ್ ಬಡ್ಕೊಳಿ.. ಕಿತ್ಕಳಕ್ಕೆ ಆಗದಿಲ್ಲ ಏನೂ.. ಸೋತಾಗ್ಲೇ ಬುಡ್ಲಿಲ್ಲ ಗೆದ್ದಾಗ ಬುಡ್ತೀವಾ..ಇನ್ನು ಮುಂದೆ ಫುಲ್ಲು ನಮ್ದೇ ಸೀನು' ಎಂಬ ಪಕ್ಕಾ ಲೋಕಲ್ ಸ್ಟೈಲ್ ಸಾಲುಗಳು ಆರ್‌ಸಿಬಿ ಅಭಿಮಾನಿಗಳಿಗೆ ಹೊಸ ಜೋಶ್ ನೀಡಿವೆ. ಈ ಹಾಡನ್ನು ಆರ್‌ಸಿಬಿ ಅಭಿಮಾನಿಗಳ ಹೊಸ ಆಂಥೆಮ್ ಎಂದೇ ಕರೆಯಲಾಗುತ್ತಿದೆ.
'ವೆನಿ ವಿಡಿ ವಿಸಿ' (Veni Vidi Vici) ಅಂತ ಶುರುವಾಗುವ ಈ ಹಾಡಿಗೆ ಖ್ಯಾತ ಗಾಯಕ ಗುರುಕಿರಣ್ ಧ್ವನಿ ನೀಡಿದ್ದಾರೆ. ನವನೀತ್ ಶ್ಯಾಮ್ ಅವರ ಮ್ಯೂಸಿಕ್ ಹಾಗೂ ನಿರ್ದೇಶಕ ಶಶಾಂಕ್ ಸೊಗ್ಗಾಲ್ ಅವರ ಸಾಹಿತ್ಯ ಈ ಸಾಂಗ್‌ಗೆ ಒಂದು ತೂಕ ತಂದಿದೆ. ಕಲರ್‌ಫುಲ್ ಸೆಟ್‌ನಲ್ಲಿ ಭೂಷಣ್ ಮಾಸ್ಟರ್ ಕಂಪೋಸ್ ಮಾಡಿರೋ ಡ್ಯಾನ್ಸ್‌ಗೆ ಡಾಲಿ ಧನಂಜಯ್ ಮತ್ತು ತಂಡ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ.
ಕಳೆದ ವರ್ಷ ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮದ ರಾತ್ರಿ 'ಮದರ್ ಪ್ರಾಮಿಸ್' ಸಿನಿಮಾದ ಕಥೆ ಶುರುವಾಯ್ತಂತೆ. "ಕಳೆದ ಬಾರಿ ನಮ್ಮ ತಂಡ ಕಪ್ ಗೆದ್ದ ಸಂಭ್ರಮದಲ್ಲೇ ಈ ಸಿನಿಮಾ ಶುರು ಮಾಡಿದ್ದೀವಿ. ಈ ಸಲವೂ ಕಪ್ ನಮ್ದೇ" ಎಂದು ಧನಂಜಯ್ ಬಹಳ ಕಾನ್ಫಿಡೆಂಟ್ ಆಗಿ ಪೋಸ್ಟ್ ಹಾಕಿದ್ದಾರೆ.
ಕಳೆದ ಬಾರಿಯ ಚಾಂಪಿಯನ್ ಆಗಿರುವ ಆರ್‌ಸಿಬಿ, ಈ ಸೀಸನ್‌ನಲ್ಲೂ ಭರ್ಜರಿಯಾಗಿ ಶುರು ಮಾಡಿದೆ. ಈಗಾಗಲೇ ಆಡಿರೋ ಎರಡು ಪಂದ್ಯಗಳನ್ನು ಗೆದ್ದಿರುವ ತಂಡ, ಇವತ್ತು (ಏಪ್ರಿಲ್ 10) ರಾಜಸ್ಥಾನ್ ರಾಯಲ್ಸ್ ವಿರುದ್ಧ ತನ್ನ ಮೂರನೇ ಪಂದ್ಯವನ್ನು ಆಡಲು ಸಜ್ಜಾಗಿದೆ. ಇಂತಹ ಕ್ರೂಷಿಯಲ್ ಟೈಮ್‌ನಲ್ಲಿ ಈ ಹಾಡು ಬಂದಿರೋದು ಅಭಿಮಾನಿಗಳ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.
ಧನಂಜಯ್ ಅವರ ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ಧನು ಅವರ ಆತ್ಮೀಯ ಗೆಳೆಯ ಪೂರ್ಣಚಂದ್ರ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. "ಫಾದರ್ ಆಫ್ ಆಲ್ ಪ್ರಾಮಿಸಸ್" ಅನ್ನೋ ಟ್ಯಾಗ್‌ಲೈನ್ ಕೂಡ ಈ ಚಿತ್ರಕ್ಕಿದೆ. ಇನ್ನು ತಾರಾಗಣದಲ್ಲಿ ಗೀತಾ, ವಿನಯಾ ಪ್ರಸಾದ್, ಗುರುದತ್ ಮತ್ತು ನಾಗಭೂಷಣ್ ಅವರಂತಹ ಸ್ಟಾರ್ ಕಲಾವಿದರ ದಂಡೇ ಇದೆ. ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.
Good morning. #MotherPromise ಚಿತ್ರದ ಮೊದಲ ಹಾಡು ನಿಮ್ಮ ಮುಂದೆ.
— Dhananjaya (@Dhananjayaka) April 10, 2026
“ನೇಚರ್ರೆ ಹೇಳೈತಿ ಫ್ಯೂಚರೂ ನಮ್ದೈತಿ”https://t.co/LKRcpLg369#VeniVidiVici ✌🏼@PoornaMysore @ShashankSoghal @NavaneethSham @realgurukiran pic.twitter.com/ALOjBDatfZ
ಧನಂಜಯ್ ಅವರ ಈ ಆರ್‌ಸಿಬಿ ರೋಸ್ಟ್ ಸಾಂಗ್ ಈಗ ಯೂಟ್ಯೂಬ್ ಮತ್ತು ರೀಲ್ಸ್‌ಗಳಲ್ಲಿ ಟ್ರೆಂಡಿಂಗ್‌ನಲ್ಲಿದೆ. ಆರ್‌ಸಿಬಿ ಗೆಲ್ಲಲಿ ಅನ್ನೋ ಹಾರೈಕೆಯ ಜೊತೆಗೆ, ಡಾಲಿ ಅವರ ಈ ಹೊಸ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ ಸಿಗುತ್ತಿದೆ.