ಆಂಧ್ರದ ಸರಳ, ಸಜ್ಜನಿಕೆಯ ರಾಜಕಾರಣಿ ಗುಮ್ಮಡಿ ನರಸಯ್ಯ ಅವರ ಜೀವನದ ಮೇಲೆ ಆಧಾರಿತ ಬಯೋಪಿಕ್ ಸಿನಿಮಾದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಈ ಕಾರ್ಯಕ್ರಮವು ಅವರ ಹುಟ್ಟೂರಾದ ಪಲ್ವಂಚಾದಲ್ಲಿ ನಡೆಯಿತು. ಮುಹೂರ್ತ ಸಮಾರಂಭದಲ್ಲಿ ನಟ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ದಂಪತಿಗಳು ವಿಶೇಷ ಆಕರ್ಷಣೆಯಾಗಿದ್ದರು. ಇಡೀ ಊರು ಜಮಾಯಿಸಿ ಅವರನ್ನು ಸ್ವಾಗತಿಸಿತು. ಗೀತಾ ಶಿವರಾಜ್ ಕುಮಾರ್ ಕ್ಲ್ಯಾಪ್ ಮಾಡುವ ಮೂಲಕ ಸಿನಿಮಾಗೆ ಅಧಿಕೃತ ಚಾಲನೆ ನೀಡಿದರು.
ಮುಹೂರ್ತಕ್ಕೂ ಮುಂಚೆ ಶಿವಣ್ಣ ದಂಪತಿ ಗುಮ್ಮಡಿ ನರಸಯ್ಯರ ಕುಟುಂಬವನ್ನು ಭೇಟಿಯಾಗಿ ಅವರ ಯೋಗಕ್ಷೇಮ ವಿಚಾರಿಸಿದರು. ಕುಟುಂಬದೊಂದಿಗೆ ಸಿನಿಮಾ ಕುರಿತು ಚರ್ಚೆ ನಡೆಸಿ, ನೈಜ ಘಟನೆಗಳನ್ನೇ ಸಿನಿಮಾದಲ್ಲಿ ತೋರಿಸಲಾಗುವುದು ಎಂಬ ಭರವಸೆ ನೀಡಿದರು. ಗುಮ್ಮಡಿ ನರಸಯ್ಯರ ಜೀವನದ ಮೇಲೆ ಸಿನಿಮಾ ಬರಬೇಕೆಂಬ ಮಾತುಗಳು ಹಲವು ವರ್ಷಗಳಿಂದ ಕೇಳಿಬರುತ್ತಿದ್ದವು. ಆದರೆ ಆರಂಭದಲ್ಲಿ ನರಸಯ್ಯರು ತಮ್ಮ ಜೀವನದ ಕಥೆಯನ್ನು ಸಿನಿಮಾ ರೂಪದಲ್ಲಿ ತರುವುದಕ್ಕೆ ಒಪ್ಪಿಗೆ ನೀಡಿರಲಿಲ್ಲ. ನಂತರ ಶಿವರಾಜ್ ಕುಮಾರ್ ಅವರೇ ತಮ್ಮ ಪಾತ್ರದಲ್ಲಿ ನಟಿಸುತ್ತಾರೆ ಎಂಬ ಮಾಹಿತಿ ಹಾಗೂ ನೈಜ ಘಟನೆಗಳನ್ನು ಸಿನಿಮಾದಲ್ಲಿ ತೋರಿಸಲಾಗುವುದು ಎಂಬ ಭರವಸೆ ನೀಡಿದ ಬಳಿಕ ಅವರು ಗ್ರೀನ್ ಸಿಗ್ನಲ್ ನೀಡಿದರು.
ಈ ಬಯೋಪಿಕ್ ಸಿನಿಮಾವನ್ನು ಪ್ರಶಾಂತ್ ಹಿರ್ವಾಲೆ ನಿರ್ದೇಶನ ಮಾಡುತ್ತಿದ್ದು, ಪ್ರವಲ್ಲಿಕಾ ಆರ್ಟ್ಸ್ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದೆ. ಇಷ್ಟರಲ್ಲೇ ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು, ಆಂಧ್ರದ ಜನಪ್ರಿಯ ರಾಜಕಾರಣಿ ಗುಮ್ಮಡಿ ನರಸಯ್ಯರ ಸರಳತೆ, ನ್ಯಾಯಪರತೆ ಮತ್ತು ಜನಸೇವೆಯ ಬದುಕು ಬೆಳ್ಳಿತೆರೆಯಲ್ಲಿ ಮೂಡಿಬರಲಿದೆ.