Mar 26, 2026 Languages : ಕನ್ನಡ | English

ನಿಜವೋ ಅಥವಾ ಎಐ ಮೋಸವೋ? ವೈರಲ್ ಫೋಟೋ ಬಗ್ಗೆ ಪ್ರೇಕ್ಷಕರಿಗೆ ನಿರ್ದೇಶಕ ಆದಿತ್ಯ ಧರ್ ನೀಡಿರುವ ಎಚ್ಚರಿಕೆ ಇಲ್ಲಿದೆ!!

ಸದ್ಯ ಸಿನಿಮಾ ಲೋಕದಲ್ಲಿ ‘ಧುರಂಧರ್ 2’ ಭರ್ಜರಿ ಸದ್ದು ಮಾಡುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಗೆದ್ದು ಬೀಗುತ್ತಿದ್ದರೆ, ಇನ್ನೊಂದೆಡೆ ಸೋಶಿಯಲ್ ಮೀಡಿಯಾದಲ್ಲಿ ಚಿತ್ರದ ಕುರಿತಾದ ಚರ್ಚೆಗಳು, ಪರ-ವಿರೋಧದ ಮಾತುಗಳು ಜೋರಾಗಿವೆ. ಇದರ ಬೆನ್ನಲ್ಲೇ ಒಂದು ವಿವಾದಾತ್ಮಕ ಫೋಟೋ ನೆಟ್ಟಿಗರ ನಡುವೆ ಕಿಡಿ ಹೊತ್ತಿಸಿತ್ತು.

ಧುರಂಧರ್ 2 ವಿವಾದಕ್ಕೆ ಫುಲ್ ಸ್ಟಾಪ್
ಧುರಂಧರ್ 2 ವಿವಾದಕ್ಕೆ ಫುಲ್ ಸ್ಟಾಪ್

ಸಾಮಾಜಿಕ ಜಾಲತಾಣಗಳಲ್ಲಿ ರಣ್ವೀರ್ ಸಿಂಗ್ ಸಿಖ್ ವೇಷದಲ್ಲಿ, ಪೇಟ ಧರಿಸಿ ಸಿಗರೇಟು ಸೇದುತ್ತಿರುವ ಫೋಟೋವೊಂದು ಭಾರಿ ವೈರಲ್ ಆಗಿತ್ತು. ಈ ಚಿತ್ರವನ್ನು ನೋಡಿದ ಸಿಖ್ ಧರ್ಮೀಯರು, "ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ" ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಸಿನಿಮಾ ತಂಡದ ವಿರುದ್ಧ ಎಲ್ಲೆಡೆ ಟೀಕೆಗಳು ಕೇಳಿಬಂದವು.

ಈ ಬಗ್ಗೆ ಗೊಂದಲ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡ ನಿರ್ದೇಶಕ ಆದಿತ್ಯ ಧರ್, ತಕ್ಷಣವೇ ಸ್ಪಷ್ಟನೆ ನೀಡಿದ್ದಾರೆ. "ವೈರಲ್ ಆಗಿರುವ ಆ ಫೋಟೋ ಸಂಪೂರ್ಣ ಸುಳ್ಳು ಮತ್ತು ಕಪೋಲಕಲ್ಪಿತ. ಎಐ (AI) ತಂತ್ರಜ್ಞಾನವನ್ನು ಬಳಸಿ ಯಾರೋ ಕಿಡಿಗೇಡಿಗಳು ಈ ಚಿತ್ರವನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ" ಎಂದು ಅವರು ಖಡಕ್ಕಾಗಿ ಹೇಳಿದ್ದಾರೆ.

"ನಮಗೆ ಸಿಖ್ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಅಪಾರ ಗೌರವವಿದೆ. ಚಿತ್ರದಲ್ಲಿನ ಪ್ರತಿಯೊಂದು ಪಾತ್ರವನ್ನೂ ನಾವು ತುಂಬಾನೇ ಎಚ್ಚರಿಕೆಯಿಂದ ಮತ್ತು ಜವಾಬ್ದಾರಿಯಿಂದ ಚಿತ್ರಿಸಿದ್ದೇವೆ. ಹರಿದಾಡುತ್ತಿರುವ ಆ ಫೋಟೋ ನಮ್ಮ ಸಿನಿಮಾದ ಭಾಗವೂ ಅಲ್ಲ, ಪ್ರಚಾರದ ಭಾಗವೂ ಅಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಎಚ್ಚರಿಕೆ

ಸುಮ್ಮನೆ ಜನರನ್ನು ದಾರಿ ತಪ್ಪಿಸಲು ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲು ಇಂತಹ ದುರುದ್ದೇಶದ ಕೆಲಸಗಳನ್ನು ಮಾಡಲಾಗುತ್ತಿದೆ. ದಯವಿಟ್ಟು ಪ್ರೇಕ್ಷಕರು ಇಂತಹ ನಕಲಿ ಫೋಟೋಗಳನ್ನು ನಂಬಬೇಡಿ, ಅಧಿಕೃತ ಮೂಲಗಳಿಂದ ಬರುವ ಮಾಹಿತಿಯನ್ನು ಮಾತ್ರ ನಂಬಿ ಎಂದು ಆದಿತ್ಯ ಧರ್ ವಿನಂತಿಸಿದ್ದಾರೆ. ಅಷ್ಟೇ ಅಲ್ಲ, ಇಂತಹ ಕೃತ್ಯಗಳನ್ನು ಸುಮ್ಮನೆ ಬಿಡುವುದಿಲ್ಲ, ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.

ಸಿನಿಮಾದ ಯಶಸ್ಸು ಮತ್ತು ಟ್ರೋಲ್ಸ್

‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸಕ್ಸಸ್ ಕಂಡಿದೆ. ಗೆಲುವು ಸಿಕ್ಕಾಗ ವಿರೋಧಿಗಳು ಹುಟ್ಟಿಕೊಳ್ಳುವುದು ಸಹಜವಲ್ಲವೇ? ಸಿನಿಮಾದ ಕುರಿತು ಹಲವು ಟ್ರೋಲ್ ವಿಡಿಯೋಗಳು, ಮೀಮ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅಷ್ಟೇ ಅಲ್ಲ, ಸಿನಿಮಾದ ಕೆಲವು ದೃಶ್ಯಗಳನ್ನು ಕೆಲವರು ರಸ್ತೆ ಸುರಕ್ಷತೆ ಮತ್ತಿತರ ಜಾಗೃತಿ ಕಾರ್ಯಕ್ರಮಗಳಿಗೂ ಬಳಸಿಕೊಳ್ಳುತ್ತಿದ್ದಾರೆ.

ಸಿನಿಮಾ ಗೆದ್ದ ಖುಷಿಯಲ್ಲಿದ್ದ ತಂಡಕ್ಕೆ ಈ ಫೋಟೋ ವಿವಾದ ತಲೆನೋವಾಗಿ ಪರಿಣಮಿಸಿತ್ತು. ಈಗ ನಿರ್ದೇಶಕರ ಸ್ಪಷ್ಟನೆಯಿಂದ ವಿಷಯ ತಿಳಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯಾವುದನ್ನೇ ನೋಡಿದರೂ, ಅದು ಸತ್ಯವೋ ಅಥವಾ ಎಐ ತಂತ್ರಜ್ಞಾನದ ತಂತ್ರವೋ ಅಂತ ಪರಿಶೀಲಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ.

Latest News