Apr 16, 2026 Languages : ಕನ್ನಡ | English

ಬಾಕ್ಸ್ ಆಫೀಸ್‌ನಲ್ಲಿ ರಣವೀರ್ ಅಬ್ಬರ - KGF 2 ದಾಖಲೆಯನ್ನೇ ಅಳಿಸಿ ಹಾಕಿದ ಧುರಂಧರ್ 2!!

ಸದ್ಯ ಸಿನಿಮಾ ಪ್ರೇಮಿಗಳ ಬಾಯಲ್ಲಿ ಒಂದೇ ಹೆಸರು, ಅದುವೇ ‘ಧುರಂಧರ್ 2’. ರಣವೀರ್ ಸಿಂಗ್ ಮತ್ತು ನಿರ್ದೇಶಕ ಆದಿತ್ಯ ಧರ್ ಕಾಂಬಿನೇಷನ್‌ನ ಈ ಸಿನಿಮಾ ಈಗ ಭಾರತೀಯ ಚಿತ್ರರಂಗದ ಹೊಸ ಇತಿಹಾಸ ಬರೆಯುತ್ತಿದೆ. ಬಿಡುಗಡೆಯಾದ ದಿನದಿಂದಲೂ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿರುವ ಈ ಚಿತ್ರ, ಈಗ ಬರೋಬ್ಬರಿ 1,000 ಕೋಟಿ ರೂಪಾಯಿ ಗಳಿಕೆಯ ಹೊಸ್ತಿಲಲ್ಲಿ ಬಂದು ನಿಂತಿದೆ.

ಕೇವಲ 17 ದಿನಗಳಲ್ಲಿ 985 ಕೋಟಿ
ಕೇವಲ 17 ದಿನಗಳಲ್ಲಿ 985 ಕೋಟಿ

ದಾಖಲೆಗಳನ್ನೆಲ್ಲ ಉಡೀಸ್ ಮಾಡಿದ ರಣವೀರ್

ರಣವೀರ್ ಸಿಂಗ್ ಅವರ ಕೆರಿಯರ್‌ನಲ್ಲೇ ಇದೊಂದು ಮೈಲಿಗಲ್ಲು ಎನ್ನಬಹುದು. ಲೇಟೆಸ್ಟ್ ರಿಪೋರ್ಟ್‌ಗಳ ಪ್ರಕಾರ, ಈ ಸಿನಿಮಾ ಕೇವಲ 17 ದಿನಗಳಲ್ಲಿ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 985 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿಶೇಷ ಅಂದ್ರೆ, ಮೂರನೇ ವಾರಾಂತ್ಯದಲ್ಲೂ (ವೀಕೆಂಡ್) ಜನ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಶನಿವಾರವೊಂದೇ (ಏಪ್ರಿಲ್ 4) ಈ ಚಿತ್ರ 25.65 ಕೋಟಿ ರೂಪಾಯಿ ಬಾಚಿಕೊಂಡಿದೆ.

ನಮ್ಮ ಕನ್ನಡದ ಹೆಮ್ಮೆ ‘ಕೆಜಿಎಫ್: ಚಾಪ್ಟರ್ 2’ (859 ಕೋಟಿ), ರಾಜಮೌಳಿ ಅವರ ‘ಆರ್​ಆರ್​ಆರ್​’ (782 ಕೋಟಿ) ಮತ್ತು ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾಗಳ ಲೈಫ್‌ಟೈಮ್ ಕಲೆಕ್ಷನ್ ದಾಖಲೆಯನ್ನು ಈ ಸಿನಿಮಾ ಈಗಾಗಲೇ ಅಳಿಸಿ ಹಾಕಿದೆ.

ಈ ಸಿನಿಮಾದಲ್ಲಿ ರಣವೀರ್ ಸಿಂಗ್ ‘ಹಮ್ಜಾ’ ಎಂಬ ಗೂಢಚಾರಿಯ (Indian Spy) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಾಕಿಸ್ತಾನದ ಕುಖ್ಯಾತ ಲಿಯಾರಿ ಗ್ಯಾಂಗ್‌ಗಳ ಅಡಗುತಾಣಕ್ಕೆ ನುಗ್ಗಿ, ಅಲ್ಲಿನ ಭೂಗತ ಲೋಕದ ಜಾಲವನ್ನು ಧ್ವಂಸ ಮಾಡುವ ಸಾಹಸದ ಕಥೆ ಇಲ್ಲಿದೆ. ಮೊದಲ ಭಾಗವೇ ವಿಶ್ವಾದ್ಯಂತ 1,300 ಕೋಟಿ ಗಳಿಸಿ ಭಾರಿ ಸದ್ದು ಮಾಡಿತ್ತು, ಈಗ ಎರಡನೇ ಭಾಗ ಅದನ್ನೂ ಮೀರಿಸುವಂತೆ ಕಾಣುತ್ತಿದೆ.

ರಣವೀರ್ ಸಿಂಗ್ ಅವರ ಆಕ್ಷನ್ ಮತ್ತು ಆದಿತ್ಯ ಧರ್ ಅವರ ಅದ್ಭುತ ನಿರ್ದೇಶನಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. ಸ್ಪೈ ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರಿಗೆ ಇದೊಂದು ಹಬ್ಬದಂತಿದೆ.

ಸದ್ಯ ‘ಧುರಂಧರ್ 2’ ಕಣ್ಣು ಭಾರತದ ಅತಿ ದೊಡ್ಡ ದಾಖಲೆಗಳ ಮೇಲಿದೆ. ಈಗಿನ ವೇಗ ನೋಡಿದರೆ ಶೀಘ್ರದಲ್ಲೇ ಇದು ‘ಬಾಹುಬಲಿ 2’ (1,030 ಕೋಟಿ) ದಾಖಲೆಯನ್ನು ಮುರಿಯುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಆದರೆ, ಇತ್ತೀಚೆಗೆ ಧೂಳೆಬ್ಬಿಸಿದ್ದ ‘ಪುಷ್ಪ 2’ ಸಿನಿಮಾದ 1,234 ಕೋಟಿ ರೂಪಾಯಿಗಳ ಬೃಹತ್ ಕಲೆಕ್ಷನ್ ಅನ್ನು ಈ ಚಿತ್ರ ಹಿಂದಿಕ್ಕುತ್ತಾ ಎಂಬುದೇ ಈಗ ಕುತೂಹಲದ ವಿಷಯ.

ಬಾಲಿವುಡ್ ಸಿನಿಮಾ ಮಾರುಕಟ್ಟೆ ಸೊರಗಿದೆ ಎಂದು ಹೇಳುತ್ತಿದ್ದವರಿಗೆ ‘ಧುರಂಧರ್ 2’ ಸರಿಯಾದ ಉತ್ತರ ನೀಡಿದೆ. ರಣವೀರ್ ಸಿಂಗ್ ಅವರ ಖ್ಯಾತಿ ಈ ಸಿನಿಮಾದಿಂದ ಹತ್ತು ಪಟ್ಟು ಹೆಚ್ಚಾಗಿದೆ. ಈ ವಾರವೂ ದೊಡ್ಡ ಸಿನಿಮಾಗಳ ಪೈಪೋಟಿ ಇಲ್ಲದಿರುವುದು ಚಿತ್ರಕ್ಕೆ ವರವಾಗಿದ್ದು, ಸಾವಿರ ಕೋಟಿ ಕ್ಲಬ್ ಸೇರಲು ಇನ್ನು ಕೆಲವೇ ದಿನಗಳು ಬಾಕಿ ಇವೆ.

Latest News