ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) 2026ಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಈ ಮಹಾ ಸಮರದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವು ಬರೋಬ್ಬರಿ 12 ವರ್ಷಗಳ ನಂತರ ಮೂರನೇ ಬಾರಿಗೆ ಐತಿಹಾಸಿಕ ಪ್ರಶಸ್ತಿಯನ್ನು ಗೆದ್ದು, ಚಾಂಪಿಯನ್ಸ್ ಟ್ರೋಫಿಯನ್ನು ತಾಯ್ನಾಡಿಗೆ ಹೊತ್ತು ತಂದಿದೆ. ಕೊಯಂಬತ್ತೂರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ 130 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬುಲ್ಡೋಜರ್ಸ್ ತಂಡವು 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಇತಿಹಾಸ ನಿರ್ಮಿಸಿತು.
ಕಿಚ್ಚ ಸುದೀಪ್ ಅವರ ಭಾವನಾತ್ಮಕ ಪ್ರತಿಕ್ರಿಯೆ
ತಂಡದ ನಾಯಕ ಕಿಚ್ಚ ಸುದೀಪ್ ಈ ಜಯವನ್ನು "ಇದೊಂದು ಎಮೋಷನ್, ನಮಗೆ ಇದು ಕೇವಲ ಒಂದು ಟೂರ್ನಮೆಂಟ್ ಅಲ್ಲ, ಇದೊಂದು ಭಾವನೆ. ಅದ್ಭುತ ಆಟಗಾರರ ಈ ತಂಡವನ್ನು ಮುನ್ನಡೆಸಿ, ದಶಕದ ನಂತರ ಕಪ್ ಅನ್ನು ಮನೆಗೆ ತರುತ್ತಿರುವುದು ಪದಗಳಲ್ಲಿ ವಿವರಿಸಲಾಗದ ಅನುಭವ." ಎಂದರು. ಒತ್ತಡದ ನಡುವೆಯೂ ತಂಡವು ನಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದ ರೀತಿ ಅದ್ಭುತವಾಗಿತ್ತು. ಈ ಗೆಲುವು ಕಷ್ಟದ ದಿನಗಳಲ್ಲೂ ನಮ್ಮನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಅರ್ಪಣೆ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಸುದೀಪ್ ಅವರ ಮಾತುಗಳಲ್ಲಿ ತಂಡದ ಹೋರಾಟ, ಅಭಿಮಾನಿಗಳ ಪ್ರೀತಿ ಮತ್ತು ಜಯದ ಸಂತೋಷ ಸ್ಪಷ್ಟವಾಗಿ ಗೋಚರಿಸಿತು. "ಈ ಸಲ ಕಪ್ ನಮ್ದೆ" ಎಂಬ ಘೋಷಣೆ ಈಗ ಕೇವಲ ಮಾತಲ್ಲ, ಅದು ವಾಸ್ತವವಾಗಿದೆ ಎಂದು ಅವರು ಖುಷಿಪಟ್ಟರು.
ಅಭಿಮಾನಿಗಳಿಗೆ ಅವಕಾಶ
ಸುದೀಪ್ ಮತ್ತೊಂದು ವಿಶೇಷ ಘೋಷಣೆ ಮಾಡಿದರು. "ಸಿಸಿಎಲ್ ಎಂದರೆ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಸೀಮಿತವಲ್ಲ. ಚೆನ್ನಾಗಿ ಕ್ರಿಕೆಟ್ ಆಡುವ ಅಭಿಮಾನಿಗಳಿಗೂ ನಮ್ಮ ತಂಡದಲ್ಲಿ ಅವಕಾಶವಿದೆ. ಯಾರಲ್ಲಿ ನಿಜವಾದ ಪ್ರತಿಭೆ ಇದೆಯೋ ಅವರು ಬಂದು ಸೇರಿಕೊಳ್ಳಬಹುದು." ಈ ಹೇಳಿಕೆ ಅಭಿಮಾನಿಗಳಿಗೆ ಕ್ರಿಕೆಟ್ ಆಡುವ ಅವಕಾಶದ ಬಾಗಿಲು ತೆರೆದಂತಾಗಿದೆ.
ಐತಿಹಾಸಿಕ ಕ್ಷಣ
ಭಾನುವಾರ (ಫೆಬ್ರವರಿ 1) ನಡೆದ ಫೈನಲ್‌ನಲ್ಲಿ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಕರ್ನಾಟಕ ಬುಲ್ಡೋಜರ್ಸ್ ತಂಡವು ತನ್ನ ಮೂರನೇ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದೆ. 12 ವರ್ಷಗಳ ನಿರೀಕ್ಷೆಯ ನಂತರ ಬಂದ ಈ ಜಯ ಅಭಿಮಾನಿಗಳಿಗೆ ಹಬ್ಬದ ಸಂಭ್ರಮವನ್ನು ತಂದಿದೆ. ತಂಡದ ಹೋರಾಟ, ನಾಯಕತ್ವ ಮತ್ತು ಅಭಿಮಾನಿಗಳ ಬೆಂಬಲ ಎಲ್ಲವೂ ಸೇರಿ ಸಿಸಿಎಲ್ ಇತಿಹಾಸದಲ್ಲಿ ಒಂದು ಚಿನ್ನದ ಅಧ್ಯಾಯವನ್ನು ಬರೆಯಿತು ಎನ್ನಬಹದು.