ಕರ್ನಾಟಕಕ್ಕೆ ಹೈ-ಸ್ಪೀಡ್ ರೈಲು ಕಾರಿಡಾರ್‌ಗಳ ವಿಷಯದಲ್ಲಿ ಕೇಂದ್ರ ಸರ್ಕಾರದಿಂದ ಮಹತ್ವದ ಸ್ಪಂದನೆ ಬಂದಿದೆ. ಈಗಾಗಲೇ ರಾಜ್ಯಕ್ಕೆ ಎರಡು ಹೈ-ಸ್ಪೀಡ್ ಕಾರಿಡಾರ್‌ಗಳನ್ನು ಘೋಷಿಸಲಾಗಿತ್ತು. ಅದಕ್ಕೆ ಹೆಚ್ಚುವರಿಯಾಗಿ, ಬೆಂಗಳೂರು–ಪುಣೆ ಹೈ-ಸ್ಪೀಡ್ ರೈಲು ಕಾರಿಡಾರ್ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರು ಸೇರಿ ಪ್ರಮುಖ ನಗರಗಳನ್ನು ಸಂಪರ್ಕಿಸಲು ಏಳು ಹೈ-ಸ್ಪೀಡ್ ಕಾರಿಡಾರ್‌ಗಳನ್ನು ಘೋಷಿಸಲಾಗಿತ್ತು. ಆದರೆ ಕರ್ನಾಟಕದ ಹಲವು ಸಚಿವರು ಬೆಂಗಳೂರು–ಪುಣೆ ನಡುವೆ ಇಂತಹ ಕಾರಿಡಾರ್ ಅಗತ್ಯವಿದೆ ಎಂದು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ಈ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.
ಬಜೆಟ್ ನಂತರ, ಹೆಚ್.ಡಿ. ಕುಮಾರಸ್ವಾಮಿ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ರಾಜ್ಯದ ರೈಲ್ವೆ ಮೂಲಸೌಕರ್ಯ ವೃದ್ಧಿ ಹಾಗೂ ಬಾಕಿ ಉಳಿದಿರುವ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಬೆಂಗಳೂರು–ಪುಣೆ ಹೈ-ಸ್ಪೀಡ್ ಕಾರಿಡಾರ್ ಹುಬ್ಬಳ್ಳಿ ಮತ್ತು ಬೆಳಗಾವಿ ಮೂಲಕ ಹಾದು ಹೋಗಲಿದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ. ಜೊತೆಗೆ, ಬೆಂಗಳೂರು–ಮುಂಬಯಿಗೆ ಹೊಸ ರೈಲು ಆರಂಭಿಸುವುದಾಗಿ ಘೋಷಿಸಿದ್ದಾರೆ. ಹೊಸ ರೈಲು ಸಂಪರ್ಕದ ಜೊತೆಗೆ, ಹಾಲಿ ಮಾರ್ಗಗಳಲ್ಲಿ ವನ್ಯಜೀವಿಗಳ ಅಪಘಾತಗಳನ್ನು ತಡೆಗಟ್ಟಲು ರೈಲ್ವೆ ಬೇಲಿ ಮತ್ತು ಬ್ಲಾಕ್ ಕಾರಿಡಾರ್‌ಗಳ ಅನುಷ್ಠಾನ ಕುರಿತು ಚರ್ಚೆ ನಡೆಯಿತು. ಇದು ಪರಿಸರ ಮತ್ತು ರೈಲು ಸುರಕ್ಷತೆಗೆ ಮಹತ್ವದ ಹೆಜ್ಜೆಯಾಗಲಿದೆ.
ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಡೆಯರ್ ಎಕ್ಸ್‌ಪ್ರೆಸ್ ರಾಮನಗರದಲ್ಲಿ ನಿಲುಗಡೆ ನೀಡುವಂತೆ ಮನವಿ ಮಾಡಲಾಗಿದೆ. ಅಲ್ಲದೆ, ಮಂಡ್ಯ ಜಿಲ್ಲೆಯಲ್ಲಿ ಸುಧಾರಿತ ಆಧಾರ್ ಸೇವೆಗಳು ಮತ್ತು ಮೂಲಸೌಕರ್ಯ ಒದಗಿಸುವ ಬಗ್ಗೆ ಸಹ ಮನವರಿಕೆ ಮಾಡಲಾಗಿದೆ. ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಪ್ರಕಾರ, ಈ ಮಾತುಕತೆ ಫಲಪ್ರದವಾಗಿದ್ದು, ಕೇಂದ್ರ ರೈಲ್ವೆ ಸಚಿವಾಲಯವು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದೆ. ಮಾಜಿ ಸಚಿವ ಸಾ.ರಾ. ಮಹೇಶ್, ಸಂಸದ ಮಲ್ಲೇಶ್ ಬಾಬು ಹಾಗೂ ವಿಧಾನ ಪರಿಷತ್ ಸದಸ್ಯ ಮಂಜೇಗೌಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕರ್ನಾಟಕಕ್ಕೆ ಮತ್ತೊಂದು ಹೈ-ಸ್ಪೀಡ್ ರೈಲು ಕಾರಿಡಾರ್ ದೊರೆತಿರುವುದು ಪ್ರಯಾಣಿಕರಿಗೆ ಸಿಹಿ ಸುದ್ದಿ. ಇದು ರಾಜ್ಯದ ರೈಲ್ವೆ ಸಂಪರ್ಕ ಮತ್ತು ಮೂಲಸೌಕರ್ಯವನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ.