Feb 16, 2026 Languages : ಕನ್ನಡ | English

ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಸಾಕೇತ್ ಶ*ವಾಗಿ ಪತ್ತೆ!!

ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಆರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಶವವಾಗಿ ಪತ್ತೆಯಾಗಿರುವ ದುಃಖದ ಸುದ್ದಿ ಹೊರಬಂದಿದೆ. ಈ ಘಟನೆ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿ ಸಮುದಾಯದಲ್ಲಿ ತೀವ್ರ ಆತಂಕ ಮೂಡಿಸಿದೆ. 22 ವರ್ಷದ ಸಾಕೇತ್, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿನಲ್ಲಿ ರಾಸಾಯನಿಕ ಹಾಗೂ ಜೈವಿಕ ಅಣು ಎಂಜಿನಿಯರಿಂಗ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು.

ಅಮೆರಿಕದಲ್ಲಿ ಕನ್ನಡಿಗ ವಿದ್ಯಾರ್ಥಿ ದುರ್ಮರಣ: ಆರು ದಿನಗಳ ಹುಡುಕಾಟದ ಬಳಿಕ ಸಾಕೇತ್ ಶವವಾಗಿ ಪತ್ತೆ!
ಅಮೆರಿಕದಲ್ಲಿ ಕನ್ನಡಿಗ ವಿದ್ಯಾರ್ಥಿ ದುರ್ಮರಣ: ಆರು ದಿನಗಳ ಹುಡುಕಾಟದ ಬಳಿಕ ಸಾಕೇತ್ ಶವವಾಗಿ ಪತ್ತೆ!

ಫೆಬ್ರವರಿ 9ರಂದು ಕ್ಯಾಂಪಸ್‌ನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಸಾಕೇತ್ ಅವರನ್ನು ಕೊನೆಯ ಬಾರಿ ನೋಡಲಾಗಿತ್ತು. ಆ ಬಳಿಕ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಕುಟುಂಬದವರು ಹಾಗೂ ಸ್ನೇಹಿತರು ತಕ್ಷಣವೇ ಪೊಲೀಸರಿಗೆ ದೂರು ನೀಡಿದ ನಂತರ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು. ಲೇಕ್ ಅಂಜಾ, ಬರ್ಕ್ಲಿ ಹಿಲ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಹಾಗೂ ಸ್ವಯಂಸೇವಕರು ವ್ಯಾಪಕವಾಗಿ ಹುಡುಕಾಟ ನಡೆಸಿದರು.

ತನಿಖೆಯ ವೇಳೆ ಟಿಲ್ಡೆನ್ ಪ್ರಾದೇಶಿಕ ಉದ್ಯಾನ ಸಮೀಪದ ಮನೆಯ ಬಳಿ ಸಾಕೇತ್ ಅವರ ಪಾಸ್‌ಪೋರ್ಟ್ ಮತ್ತು ಲ್ಯಾಪ್‌ಟಾಪ್ ಹೊಂದಿದ್ದ ಬ್ಯಾಗ್ ಪತ್ತೆಯಾದುದು ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿತು. ಬಳಿಕ ಸಾಕೇತ್ ಅವರ ಮೃತದೇಹ ಪತ್ತೆಯಾದುದನ್ನು ಭಾರತದ ಕಾನ್ಸುಲೇಟ್ ಜನರಲ್, ಸ್ಯಾನ್ ಫ್ರಾನ್ಸಿಸ್ಕೋ ದೃಢಪಡಿಸಿದೆ. ಮೃತದೇಹವನ್ನು ಭಾರತಕ್ಕೆ ತ್ವರಿತವಾಗಿ ರವಾನಿಸಲು ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲಾಗುವುದು ಎಂದು ದೂತಾವಾಸ ತಿಳಿಸಿದೆ. ಕುಟುಂಬದೊಂದಿಗೆ ತಮ್ಮ ಸಂತಾಪವನ್ನು ಸಹ ವ್ಯಕ್ತಪಡಿಸಿದೆ.

ಸಾಕೇತ್ ಅವರು ಈ ಹಿಂದೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ ನಲ್ಲಿ ಅಭ್ಯಾಸ ಮಾಡಿದ್ದು, ಹೈಪರ್‌ಲೂಪ್ ತಂತ್ರಜ್ಞಾನ ಸಂಬಂಧಿತ ಪೇಟೆಂಟ್ ಪ್ರಾಜೆಕ್ಟ್‌ನ ಭಾಗವಾಗಿದ್ದರು ಎಂಬುದು ತಿಳಿದುಬಂದಿದೆ. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅವರ ಅಕಾಲಿಕ ನಿಧನ ಕುಟುಂಬ ಹಾಗೂ ಸ್ನೇಹಿತರಲ್ಲಿ ಆಘಾತ ಮೂಡಿಸಿದೆ.

ಈ ಘಟನೆ ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಮತ್ತೊಮ್ಮೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಲೋಕಸಭೆಯಲ್ಲಿ ಅಸಾದುದ್ದೀನ್ ಓವೈಸಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, ವಿದೇಶಾಂಗ ಸಚಿವಾಲಯವು ಭಾರತೀಯ ರಾಯಭಾರ ಕಚೇರಿಗಳು ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯ ಮಾರ್ಗದರ್ಶನ ನೀಡುತ್ತಿವೆ ಎಂದು ಸ್ಪಷ್ಟಪಡಿಸಿದೆ.

ಇದು ಅಪಘಾತವೋ, ಮಾನಸಿಕ ಒತ್ತಡದ ಪರಿಣಾಮವೋ ಅಥವಾ ಬೇರೆ ಕಾರಣವೋ ಎಂಬುದು ತನಿಖೆಯ ಬಳಿಕವೇ ತಿಳಿಯಲಿದೆ. ಆದರೆ ಈ ದುರ್ಘಟನೆ ವಿದೇಶದಲ್ಲಿ ಓದುತ್ತಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದೆ. ಸುರಕ್ಷತೆ, ಮಾನಸಿಕ ಆರೋಗ್ಯ ಹಾಗೂ ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ನೆರವು ಪಡೆಯುವ ವ್ಯವಸ್ಥೆಗಳ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ಒತ್ತಿಹೇಳುತ್ತಿದೆ.

Latest News