ಬಿಗ್ ಬಾಸ್ ಕನ್ನಡ ಸೀಸನ್ 12 ತನ್ನ ಅಂತಿಮ ಹಂತಕ್ಕೆ ತಲುಪಿದ್ದು, ಕಿಚ್ಚ ಸುದೀಪ್ ನಿರೂಪಣೆಯ ಈ ಶೋ ಮತ್ತೊಮ್ಮೆ ಭಾರೀ ಯಶಸ್ಸು ಕಂಡಿದೆ. ಕಳೆದ ಸೀಸನ್‌ಗಿಂತ ಹೆಚ್ಚು ಜನಪ್ರಿಯತೆಯನ್ನು ಗಳಿಸಿರುವ ಕಾರ್ಯಕ್ರಮ ಈ ಬಾರಿ, ಆರಂಭದಿಂದಲೇ ಕಿರುತೆರೆ ವೀಕ್ಷಕರನ್ನು ಸೆಳೆಯುತ್ತಾ, ಮನರಂಜನೆ ಜೊತೆಗೆ ವಿವಾದಗಳಿಗೂ ಕಾರಣವಾಗಿತ್ತು. ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಶೋ ಇತರ ಭಾಷೆಗಳಿಗಿಂತ ಹೆಚ್ಚು ಜನಪ್ರಿಯತೆ ಪಡೆದಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಹೌದು ಈ ಬಾರಿ ಫಿನಾಲೆ ಅಖಾಡದಲ್ಲಿ ಆರು ಮಂದಿ ಸ್ಪರ್ಧಿಗಳು ಉಳಿದಿದ್ದಾರೆ.
ಅವರು ಗಿಲ್ಲಿ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಕಾವ್ಯಾ, ಧನುಷ್ ಹಾಗೂ ರಘು ಅಂತಿಮ ಹಂತದಲ್ಲಿ ಪೈಪೋಟಿ ನೀಡುತ್ತಿದ್ದಾರೆ. ಧನುಷ್ ಹೊರ ಬಂದಿದ್ದಾರೆ ಎಂದು ಕೇಳಿ ಬಂದಿದೆ. ಇವರಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಶೈಲಿಯಲ್ಲಿ ಮನರಂಜನೆ ನೀಡಿದ್ದು, ವೀಕ್ಷಕರ ಮನ ಗೆದ್ದಿದ್ದಾರೆ. ಆದರೆ, ಸದ್ಯದ ವರದಿಗಳ ಪ್ರಕಾರ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಪ್ರಬಲ ಸ್ಪರ್ಧಿಗಳಾಗಿ ಹೊರಹೊಮ್ಮಿದ್ದಾರೆ. ಇವರಿಬ್ಬರಿಗೂ ವೀಕ್ಷಕರಿಂದ ಭಾರೀ ಬೆಂಬಲ ದೊರೆತಿದ್ದು, ಫಿನಾಲೆಯ ತೀವ್ರ ಪೈಪೋಟಿ ಇವರ ಸುತ್ತ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಜ್ಯೋತಿಷಿ ಪ್ರಶಾಂತ್ ಕಿಣಿ ಆರಂಭದಲ್ಲಿ ಮಹಿಳಾ ಸ್ಪರ್ಧಿಯೇ ಗೆಲ್ಲುತ್ತಾರೆ ಎಂದು ಹೇಳಿದ್ದರೂ, ಇದೀಗ ತಮ್ಮ ಅಭಿಪ್ರಾಯ ಬದಲಿಸಿಕೊಂಡಿದ್ದಾರೆ. ಅವರು ಟ್ವೀಟ್ ಮಾಡಿದ್ದು, “ನಾನು ಗಿಲ್ಲಿ ಬಿಗ್ ಬಾಸ್ ಗೆಲ್ಲುವುದಿಲ್ಲ ಎಂದು ಹೇಳಿದ್ದೆ. ಆದರೆ ಗಿಲ್ಲಿ ಅತ್ಯಂತ ಅರ್ಹ ಸ್ಪರ್ಧಿ. ಹಿಂದಿನ ಸೀಸನ್‌ಗಳಲ್ಲಿ ಅರ್ಹ ಸ್ಪರ್ಧಿಗಳೇ ಕೆಲವರು ಗೆಲ್ಲಲು ಸಾಧ್ಯವಾಗಲಿಲ್ಲ” ಎಂದು. ಈ ಹೇಳಿಕೆ ಅಭಿಮಾನಿಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು 37 ಕೋಟಿ ಮತಗಳ ದಾಖಲೆ ಬಗ್ಗೆ ಮಾತನಾಡಿ, ಅತಿ ಕಡಿಮೆ ಮತಗಳನ್ನು ಪಡೆದ ಸ್ಪರ್ಧಿಯೇ ಮೊದಲ ಎಲಿಮಿನೇಷನ್‌ಗೆ ಒಳಗಾಗಲಿದ್ದಾರೆ ಎಂದು ಘೋಷಿಸಿದ್ದಾರೆ. ಮಿಡ್-ವೀಕ್ ಎಲಿಮಿನೇಷನ್ ನಂತರ ಉಳಿದಿರುವ ಟಾಪ್ 6ರಲ್ಲಿ, ಮೊದಲ ವಿಕೆಟ್ ಪತನದ ಘೋಷಣೆ ಫಿನಾಲೆಯ ಆರಂಭದಲ್ಲೇ ನಡೆಯಲಿದೆ. ಈ ಘೋಷಣೆಯು ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಒಂಟಿಯಾಗಿ ಹಾಗೂ ಜಂಟಿಯಾಗಿ ಈ ಪಯಣ ಬೆಳೆಸಿದ ಸ್ಪರ್ಧಿಗಳಲ್ಲಿ ಯಾರು ಮೊದಲು ವೇದಿಕೆಯಿಂದ ಹೊರಬೀಳುತ್ತಾರೆ ಎಂಬುದು ಇಂದಿನ ಮಹಾ ಸಂಚಿಕೆಯಲ್ಲಿ ಅಧಿಕೃತವಾಗಿ ಬಯಲಾಗಲಿದೆ. ಪ್ರತಿಯೊಬ್ಬ ಸ್ಪರ್ಧಿಯೂ ತಮ್ಮದೇ ಆದ ಶಕ್ತಿ, ದುರ್ಬಲತೆಗಳನ್ನು ತೋರಿಸಿದ್ದು, ವೀಕ್ಷಕರ ಹೃದಯದಲ್ಲಿ ತಮ್ಮ ಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ. ಅಂತಿಮ ಘಟ್ಟದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ನಿರ್ಧರಿಸುವುದು ವೀಕ್ಷಕರ ಮತದಾನ ಮತ್ತು ಅವರ ಬೆಂಬಲದ ಮೇಲೆ ಅವಲಂಬಿತವಾಗಿದೆ.
ಏನೇ ಆಗಲಿ, ಬಿಗ್ ಬಾಸ್ ಕನ್ನಡ ಸೀಸನ್ 12 ಎಲ್ಲಾ ಭಾಷೆಗಳಿಗಿಂತ ಹೆಚ್ಚು ಯಶಸ್ಸು ಕಂಡು, ಕನ್ನಡದ ಕಿರುತೆರೆ ಇತಿಹಾಸದಲ್ಲಿ ಮತ್ತೊಂದು ದಾಖಲೆ ಮೂಡಿಸಿದೆ. ಈ ಶೋ ಮನರಂಜನೆ, ವಿವಾದ, ಭಾವನೆಗಳ ಮಿಶ್ರಣವಾಗಿದ್ದು, ವೀಕ್ಷಕರಿಗೆ ಮರೆಯಲಾಗದ ಅನುಭವವನ್ನು ನೀಡಿದೆ. ಫಿನಾಲೆಯ ಅಂತಿಮ ಘಟ್ಟದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.