ಬಿಗ್‌ಬಾಸ್ ಮನೆಯಿಂದ ಹೊರಬಂದ ಮೇಲೂ ಸ್ಪರ್ಧಿಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ನಟಿ ಅಶ್ವಿನಿ ಗೌಡ ಅವರು ತಮ್ಮ ಕೈ ಮೇಲಿರುವ ಗಾಯದ ಗುರುತಿನ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಚೈತ್ರಾ ಕುಂದಾಪುರ ಅವರ ಕಾಲೆಳೆದಿದ್ದಾರೆ. ಇದು ಈಗ ಇಬ್ಬರ ನಡುವೆ ದೊಡ್ಡ ಮಟ್ಟದ ವಾಕ್ಸಮರಕ್ಕೆ ಕಾರಣವಾಗಿದೆ. ಅಶ್ವಿನಿ ಗೌಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕೈಮೇಲಿನ ಪರಚಿದ ಗಾಯದ ಫೋಟೋ ಹಾಕಿ, "ಇದು ಯಾವ ಪ್ರಾಣಿ ಪರಚಿರಬಹುದು? ಸರಿಯಾದ ಉತ್ತರ ಮತ್ತು ಉತ್ತಮ ಶೀರ್ಷಿಕೆ ನೀಡಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು" ಎಂದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಪರೋಕ್ಷವಾಗಿ ಚೈತ್ರಾ ಕುಂದಾಪುರ ಅವರನ್ನು ಗುರಿಯಾಗಿಸಿಕೊಂಡಿತ್ತು ಎಂಬುದು ಸ್ಪಷ್ಟವಾಗಿತ್ತು.
ಅಶ್ವಿನಿ ಅವರ ಈ ಪೋಸ್ಟ್‌ಗೆ ಚೈತ್ರಾ ಕುಂದಾಪುರ ಸುಮ್ಮನೆ ಕೂರಲಿಲ್ಲ. ಕೂಡಲೇ ಸುದೀರ್ಘವಾದ ಕಮೆಂಟ್ ಮಾಡುವ ಮೂಲಕ ಅಶ್ವಿನಿಗೆ ತಿರುಗೇಟು ನೀಡಿದ್ದಾರೆ. "ನನ್ನ ದೇಹದ ಮೇಲೂ ಉಗುರಿನ ಗುರುತುಗಳಿವೆ. ನನಗಿಂತ ಹೆಚ್ಚು ತೂಕವಿರುವ ವ್ಯಕ್ತಿ (ಅಶ್ವಿನಿ) ನನ್ನ ಹೊಟ್ಟೆಯ ಮೇಲೆ ಕೂತಿದ್ದರು. ಆ ಸಮಯದಲ್ಲಿ ನಾನು ಪೀರಿಯಡ್ಸ್‌ನಲ್ಲಿದ್ದೆ" ಎಂದು ಅಂದಿನ ಕಹಿ ನೆನಪನ್ನು ಹಂಚಿಕೊಂಡಿದ್ದಾರೆ.
ಅಷ್ಟಕ್ಕೇ ನಿಲ್ಲದ ಚೈತ್ರಾ, "ನನ್ನ ಕತ್ತು ಟ್ವಿಸ್ಟ್ ಮಾಡಿದರು, ಟಿಂಚರ್ ಹಾಕಿದರೂ ನೋವು ಕಡಿಮೆಯಾಗಲಿಲ್ಲ. ಆದರೆ ಇವೆಲ್ಲವನ್ನೂ ಪ್ರಚಾರ ಮಾಡಲು ಅಥವಾ ಸಿಂಪತಿ ಗಳಿಸಲು ನನ್ನ ಬಳಿ ಪಿಆರ್ (PR) ತಂಡ ಇರಲಿಲ್ಲ, ಕ್ಷಮಿಸಿ" ಎಂದು ಅಶ್ವಿನಿ ಅವರಿಗೆ ನೇರವಾಗಿಯೇ ಟಾಂಗ್ ನೀಡಿದ್ದಾರೆ.
ಈ ಇಬ್ಬರು ಸ್ಪರ್ಧಿಗಳ ಕಿತ್ತಾಟ ಈಗ ಇಂಟರ್ನೆಟ್‌ನಲ್ಲಿ ಬೆಂಕಿ ಹಚ್ಚಿದೆ. ಅಶ್ವಿನಿ ಪರ ಕೆಲವರು ಕಮೆಂಟ್ ಮಾಡುತ್ತಿದ್ದರೆ, ಚೈತ್ರಾ ಅವರ ನೇರ ನುಡಿಯನ್ನು ಹಲವರು ಬೆಂಬಲಿಸುತ್ತಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ನಡೆದಿದ್ದ 'ದೈಹಿಕ ಕಿತ್ತಾಟ' ಈಗ ಹೊರಗಡೆ ಕೂಡ ಮುಂದುವರಿಯುತ್ತಿರುವುದು ದುರದೃಷ್ಟಕರ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.