Apr 17, 2026 Languages : ಕನ್ನಡ | English

400 ಸಿನಿಮಾಗಳ ಸುಂದರಿ, ನಿಜ ಜೀವನದಲ್ಲಿ ಮಾತ್ರ ಒಂಟಿ - ಎರಡು ಮದುವೆಯಾದ್ರೂ ತಪ್ಪದ ನರಕಯಾತನೆ!!

ಸಿನಿಮಾ ರಂಗ ಅಂದ್ರೆ ಹಾಗೇನೆ, ಹೊರಗಿನಿಂದ ನೋಡುವವರಿಗೆ ಅದು ಬಣ್ಣದ ಲೋಕ, ಅಲ್ಲಿರೋರೆಲ್ಲಾ ಅದೃಷ್ಟವಂತರು ಅನ್ಸುತ್ತೆ. ಆದ್ರೆ ತೆರೆಮರೆಯ ಕಥೆಯೇ ಬೇರೆ ಇರುತ್ತೆ. ತೆರೆಯ ಮೇಲೆ ಸ್ಟಾರ್ ಆಗಿ ಮಿಂಚಿದ ಎಷ್ಟೋ ನಟಿಯರು, ನಿಜ ಜೀವನದಲ್ಲಿ ಮಾತ್ರ ನರಕಯಾತನೆ ಅನುಭವಿಸಿದ್ದಾರೆ. ಅಂತಹವರ ಪೈಕಿ ಬಹುಭಾಷಾ ನಟಿ, 'ಊರ್ವಶಿ' ಖ್ಯಾತಿಯ ಶಾರದಾ ಅವರ ಜೀವನ ಕಥೆ ಅಕ್ಷರಶಃ ಒಂದು ಸಿನಿಮಾದಂತಿದೆ. ಸುಮಾರು 400 ಸಿನಿಮಾಗಳಲ್ಲಿ ನಟಿಸಿ, ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದ ನಟಿಯ ಬದುಕು ದಾರುಣವಾಗಿ ಸಾಗಿತು ಅಂದ್ರೆ ನಂಬೋಕೆ ಕಷ್ಟವಾಗುತ್ತೆ.

ಮೂರು ರಾಷ್ಟ್ರ ಪ್ರಶಸ್ತಿ, ಆದರೆ ಪ್ರೀತಿ-ಸಂಸಾರದಲ್ಲಿ ಸೋತ ಶಾರದಾ; | Photo Credit: https://www.facebook.com
ಮೂರು ರಾಷ್ಟ್ರ ಪ್ರಶಸ್ತಿ, ಆದರೆ ಪ್ರೀತಿ-ಸಂಸಾರದಲ್ಲಿ ಸೋತ ಶಾರದಾ; | Photo Credit: https://www.facebook.com

6ನೇ ವಯಸ್ಸಿನಲ್ಲೇ ನಟನೆ ಶುರು ಮಾಡಿದ್ದ ಸರಸ್ವತಿ

ನಟಿ ಶಾರದಾ ಅವರ ಮೂಲ ಹೆಸರು ಸರಸ್ವತಿ. 1945ರಲ್ಲಿ ಆಂಧ್ರಪ್ರದೇಶದ ತೆನಾಲಿಯಲ್ಲಿ ಜನಿಸಿದ ಇವರಿಗೆ ಬಾಲ್ಯದಿಂದಲೇ ಕಲೆಯ ಮೇಲೆ ಅಪಾರ ಪ್ರೀತಿ. ಆದ್ರೆ ತಂದೆಗೆ ಮಗಳು ಸಿನಿಮಾಗೆ ಸೇರೋದು ಅಪ್ಪಿತಪ್ಪಿಯೂ ಇಷ್ಟವಿರಲಿಲ್ಲ. ಆದರೂ ಛಲ ಬಿಡದ ಇವರು, ಕೇವಲ 6ನೇ ವಯಸ್ಸಿನಲ್ಲೇ ಬಣ್ಣ ಹಚ್ಚಲು ಶುರು ಮಾಡಿದರು. 1955ರ 'ಕನ್ಯಾಶಲ್ಕಂ' ಚಿತ್ರದ ಮೂಲಕ ಬಾಲನಟಿಯಾಗಿ ಎಂಟ್ರಿ ಕೊಟ್ಟ ಶಾರದಾ, ಮುಂದೆ ತೆಲುಗು, ತಮಿಳು, ಮಲಯಾಳಂ ಮಾತ್ರವಲ್ಲದೆ ಕನ್ನಡದ 'ವಾಲ್ಮೀಕಿ', 'ಮಾತು ತಪ್ಪದ ಮಗ', 'ಸಿಂಹ ಘರ್ಜನೆ'ಯಂತಹ ಸಿನಿಮಾಗಳಲ್ಲೂ ನಟಿಸಿ ಕನ್ನಡಿಗರ ಮನಗೆದ್ದರು.

ಅವರ ಅದ್ಭುತ ನಟನೆಗಾಗಿ ಮೂರು ಬಾರಿ ರಾಷ್ಟ್ರಪ್ರಶಸ್ತಿ ಬಂತು. ಜನ ಪ್ರೀತಿಯಿಂದ ಅವರನ್ನ 'ಊರ್ವಶಿ' ಅಂತಲೇ ಕರೆಯೋಕೆ ಶುರು ಮಾಡಿದ್ರು. ಆದ್ರೆ ವೃತ್ತಿಜೀವನದಲ್ಲಿ ಬೆಟ್ಟದಷ್ಟು ಯಶಸ್ಸು ಕಂಡ ಇವರ ಪಾಲಿಗೆ ವೈಯಕ್ತಿಕ ಜೀವನ ಮಾತ್ರ ಮುಳ್ಳಿನ ಹಾದಿಯಾಗಿತ್ತು.

ಪ್ರೀತಿ ಮತ್ತು ಮದುವೆ ತಂದಿಟ್ಟ ಸಂಕಷ್ಟಗಳು

ಶಾರದಾ ಅವರ ಬದುಕಿನ ಕರಾಳ ಅಧ್ಯಾಯ ಶುರುವಾಗಿದ್ದೇ ನಟ ಚಲಂ ಅವರ ಜೊತೆ ಪ್ರೀತಿಯಲ್ಲಿ ಬಿದ್ದಾಗ. ಚಲಂ ಅವರನ್ನ ಪ್ರೀತಿಸಿ ಮದುವೆಯಾದ ಶಾರದಾ ಅವರಿಗೆ ಆಮೇಲೆ ಗೊತ್ತಾಗಿದ್ದು, ತಾವು ಚಲಂಗೆ ಎರಡನೇ ಹೆಂಡತಿ ಅಂತ! ಚಲಂ ಅವರ ಮೊದಲ ಪತ್ನಿ ರಮಣ ಕುಮಾರಿ, ಪತಿಯು ಶಾರದಾ ಜೊತೆ ಸಂಬಂಧ ಹೊಂದಿದ್ದಾರೆ ಅನ್ನೋ ನೋವಿನಲ್ಲೇ ಆತ್ಮಹ*ತ್ಯೆ ಮಾಡಿಕೊಂಡ್ರು ಅನ್ನೋ ವದಂತಿ ಅಂದು ಗಾಂಧಿನಗರದಿಂದ ಹಿಡಿದು ಎಲ್ಲೆಡೆ ಹರಡಿತ್ತು. ಇದೇ ಕಾರಣಕ್ಕೆ ಶಾರದಾ ಅವರಿಗೆ ರಮಣ ಕುಮಾರಿಯ ಶಾಪ ತಟ್ಟಿದೆ, ಹಾಗಾಗಿಯೇ ಇವರ ಸಂಸಾರ ಚೆನ್ನಾಗಿಲ್ಲ ಅಂತ ಜನ ಮಾತಾಡಿಕೊಳ್ಳುತ್ತಿದ್ದರು.

ವಿಚ್ಛೇದನ ಮತ್ತು ಒಂಟಿತನ

ಒಂದೆಡೆ ಶಾರದಾ ಅವರು ಸ್ಟಾರ್ ನಟಿಯಾಗಿ ಬೆಳೆಯುತ್ತಿದ್ದರೆ, ಪತಿ ಚಲಂ ಅವರ ಕೆರಿಯರ್ ಕುಸಿಯುತ್ತಿತ್ತು. ಅತಿಯಾದ ಕುಡಿತ ಮತ್ತು ಹಣಕಾಸಿನ ವಿಚಾರವಾಗಿ ದಂಪತಿಗಳ ನಡುವೆ ಜಗಳ ಶುರುವಾಯ್ತು. ಸರಿ ಸುಮಾರು 1984ರ ಹೊತ್ತಿಗೆ ಇವರ ಸಂಸಾರ ಸಂಪೂರ್ಣವಾಗಿ ಹದಗೆಟ್ಟಿತ್ತು. ಸಹಿಸಲಾರದೆ ಶಾರದಾ ಅವರು ಮನೆ ಬಿಟ್ಟು ಬಂದು ವಿಚ್ಛೇದನ ಪಡೆದರು. ನಂತರ ಎರಡನೇ ಮದುವೆಯಾದರೂ ಸಹ ಅದು ಕೂಡ ಹೆಚ್ಚು ದಿನ ಉಳಿಯಲಿಲ್ಲ. ಪ್ರೀತಿ ಮತ್ತು ಸಂಸಾರ ಅನ್ನೋದು ಅವರ ಪಾಲಿಗೆ ಮರೀಚಿಕೆಯಾಗೇ ಉಳಿಯಿತು.

ಬದುಕಿದ್ದರೂ ಸತ್ತಳೆಂಬ ಸುಳ್ಳು ಸುದ್ದಿ

ಇತ್ತೀಚಿನ ವರ್ಷಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ನಟಿ ಶಾರದಾ ಅವರು ನಿಧನರಾದರು ಅನ್ನೋ ಸುಳ್ಳು ಸುದ್ದಿಗಳು ಹರಿದಾಡಿದ್ದವು. ಈ ಬಗ್ಗೆ ಅವರು ಪ್ರತಿಕ್ರಿಯಿಸಿ, "ನಾನು ಬದುಕಿದ್ದೇನೆ, ಚೆನ್ನಾಗಿದ್ದೇನೆ" ಅಂತ ಸ್ಪಷ್ಟನೆ ನೀಡಬೇಕಾದ ಪರಿಸ್ಥಿತಿ ಬಂದಿತ್ತು. ಎಂತಹ ಸಾಧಕಿ ಇವತ್ತು ಈ ಮಟ್ಟಕ್ಕೆ ಸುದ್ದಿಯಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.

ಪ್ರಸ್ತುತ ಶಾರದಾ ಅವರಿಗೆ ಮಕ್ಕಳಿಲ್ಲ. ಅವರು ಚೆನ್ನೈನಲ್ಲಿರುವ ತಮ್ಮ ಸಹೋದರನ ಕುಟುಂಬದ ಜೊತೆ ವಾಸಿಸುತ್ತಿದ್ದಾರೆ. ಕೈತುಂಬಾ ಸಂಪತ್ತು, ರಾಷ್ಟ್ರಮಟ್ಟದ ಕೀರ್ತಿ ಇದ್ದರೂ, ಬದುಕಿನ ಸಂಧ್ಯಾಕಾಲದಲ್ಲಿ ಪ್ರೀತಿ ಮತ್ತು ಸುಖ-ಶಾಂತಿಗಾಗಿ ಹಪಹಪಿಸುವಂತಾಗಿರುವುದು ಅವರ ಜೀವನದ ದೊಡ್ಡ ವಿಪರ್ಯಾಸ. 400 ಸಿನಿಮಾಗಳಲ್ಲಿ ನಟಿಸಿ ಜನರನ್ನು ನಗಿಸಿ, ಅಳಿಸಿದ ನಟಿಯ ನಿಜ ಜೀವನ ಮಾತ್ರ ಕಣ್ಣೀರಿನ ಕಥೆಯಾಗಿ ಉಳಿದಿದೆ.

Latest News