ರೈಲಿನಲ್ಲಿ ದೂರದೂರಿಗೆ ಹೋಗುವಾಗ ನಮಗೆಲ್ಲ ಕಾಡುವ ಅತಿದೊಡ್ಡ ತಲೆನೋವು ಅಂದ್ರೆ ಅದು 'ಊಟದ ಸಮಸ್ಯೆ'. ರೈಲ್ವೆ ಸ್ಟೇಷನ್‌ನಲ್ಲಿ ಸಿಗುವ ಎಣ್ಣೆ ಪದಾರ್ಥಗಳು ಅಥವಾ ತರಾತುರಿಯಲ್ಲಿ ಖರೀದಿಸುವ ತಿಂಡಿ ನಮಗೆ ಅಷ್ಟಾಗಿ ಹಿಡಿಸುವುದಿಲ್ಲ. ಆದರೆ ಇನ್ಮುಂದೆ ಅಂತಹ ಚಿಂತೆ ಬೇಡ. ನಿಮ್ಮ ನೆಚ್ಚಿನ 'ಸ್ವಿಗ್ಗಿ' (Swiggy) ಈಗ ನೇರವಾಗಿ ರೈಲಿನ ಸೀಟಿಗೇ ಆಹಾರ ತಲುಪಿಸಲು ಸಜ್ಜಾಗಿದೆ.
ಹೌದು, ರೈಲು ಟಿಕೆಟ್ ಬುಕಿಂಗ್ ಆಪ್‌ಗಳಾದ ಇಕ್ಸಿಗೋ (ixigo) ಮತ್ತು ಕನ್ಫರ್ಮ್ ಟಿಕೆಟ್ (ConfirmTkt) ಈಗ ಸ್ವಿಗ್ಗಿ ಜೊತೆ ಕೈಜೋಡಿಸಿವೆ. ಇದರಿಂದಾಗಿ ನೀವು ಟ್ರೈನ್‌ನಲ್ಲಿ ಕುಳಿತೇ ನಿಮ್ಮ ಇಷ್ಟದ ಹೋಟೆಲ್‌ನಿಂದ ಊಟ ತರಿಸಿಕೊಳ್ಳಬಹುದು.
ಬುಕಿಂಗ್ ಮಾಡುವುದು ಹೇಗೆ?
ಊಟ ಆರ್ಡರ್ ಮಾಡುವುದು ಈಗ ಬಹಳ ಸುಲಭ. ನೀವು ನಿಮ್ಮ ಫೋನ್‌ನಲ್ಲಿರುವ ಇಕ್ಸಿಗೋ ಅಥವಾ ಕನ್ಫರ್ಮ್ ಟಿಕೆಟ್ ಆಪ್ ಓಪನ್ ಮಾಡಿದರೆ ಸಾಕು:
- ಹೋಂಪೇಜ್‌ನಲ್ಲಿರುವ 'Order Food on Train' ಆಯ್ಕೆಯನ್ನು ಕ್ಲಿಕ್ ಮಾಡಿ.
- ನಿಮ್ಮ ಟಿಕೆಟ್‌ನಲ್ಲಿರುವ PNR ಸಂಖ್ಯೆಯನ್ನು ನಮೂದಿಸಿ.
- ಮುಂದಿನ ಯಾವ ನಿಲ್ದಾಣದಲ್ಲಿ ನೀವು ಊಟ ಪಡೆಯಲು ಬಯಸುತ್ತೀರಿ ಎಂಬುದನ್ನು ಆರಿಸಿ.
- ಸ್ವಿಗ್ಗಿಯ ಸಾವಿರಾರು ರೆಸ್ಟೋರೆಂಟ್‌ಗಳ ಪಟ್ಟಿಯಿಂದ ನಿಮಗೆ ಬೇಕಾದ ಬಿರಿಯಾನಿ ಅಥವಾ ತಿಂಡಿಯನ್ನು ಆರ್ಡರ್ ಮಾಡಿ ಆನ್‌ಲೈನ್ ಪಾವತಿ ಮಾಡಿ.
ಹಣ ಮರುಪಾವತಿ ಗ್ಯಾರಂಟಿ!
ಪ್ರಯಾಣಿಕರು ತಮ್ಮ ಪ್ರಯಾಣಕ್ಕೆ 4 ದಿನಗಳ ಮುಂಚಿತವಾಗಿಯೇ ಅಥವಾ ರೈಲು ಸ್ಟೇಷನ್ ತಲುಪುವ ಕೇವಲ 30 ನಿಮಿಷಗಳ ಮೊದಲು ಕೂಡ ಆಹಾರ ಬುಕ್ ಮಾಡಬಹುದು. ವಿಶೇಷ ಅಂದ್ರೆ, ಒಂದು ವೇಳೆ ಕಾರಣಾಂತರಗಳಿಂದ ಸ್ವಿಗ್ಗಿ ಊಟ ತಲುಪಿಸದಿದ್ದರೆ 'ಪೂರ್ಣ ಹಣ ಮರುಪಾವತಿ' ಮಾಡುವ ಭರವಸೆಯನ್ನು ಸ್ವಿಗ್ಗಿ ನೀಡಿದೆ. ಅಷ್ಟೇ ಅಲ್ಲ, ನಿಮ್ಮ ಊಟ ಎಲ್ಲಿಯವರೆಗೆ ಬಂದಿದೆ ಎಂದು ನೀವು ಲೈವ್ ಟ್ರ್ಯಾಕಿಂಗ್ ಕೂಡ ಮಾಡಬಹುದು.
ಮನೆಯವರಿಂದ ಸರ್ಪ್ರೈಸ್ ಅಣ್ಣಾ!
ಸ್ವಿಗ್ಗಿ ನೀಡಿರುವ ಅಂಕಿ-ಅಂಶಗಳ ಪ್ರಕಾರ, ಒಂದು ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. ರೈಲಿನಲ್ಲಿ ಬರುವ ಒಟ್ಟು ಆರ್ಡರ್‌ಗಳಲ್ಲಿ ಶೇ. 14ರಷ್ಟು ಆರ್ಡರ್‌ಗಳನ್ನು ಪ್ರಯಾಣಿಕರು ಮಾಡುತ್ತಿಲ್ಲವಂತೆ, ಬದಲಾಗಿ ಮನೆಯಲ್ಲಿರುವ ಕುಟುಂಬಸ್ಥರು, ಪ್ರಯಾಣಿಸುತ್ತಿರುವ ತಮ್ಮ ಪ್ರೀತಿಪಾತ್ರರಿಗೆ ಮುಂದಿನ ಸ್ಟೇಷನ್‌ನಲ್ಲಿ ಬಿಸಿ ಬಿಸಿ ಊಟ ಸಿಗಲಿ ಎಂದು ಪ್ರೀತಿಯಿಂದ ಆರ್ಡರ್ ಮಾಡುತ್ತಿದ್ದಾರೆ. ಇದು ನಿಜಕ್ಕೂ ಒಂದು ಸುಂದರವಾದ ಬದಲಾವಣೆ ಅಲ್ವಾ?
ರೈಲಿನಲ್ಲಿ 'ಬಿರಿಯಾನಿ'ಯೇ ಕಿಂಗ್!
ರೈಲು ಪ್ರಯಾಣಿಕರು ಅತಿ ಹೆಚ್ಚು ಆರ್ಡರ್ ಮಾಡುವುದು ಯಾವುದಕ್ಕೆ ಗೊತ್ತಾ? ಅದು 'ಬಿರಿಯಾನಿ'ಗೆ! ಇದರ ಜೊತೆಗೆ ವಡಾ ಪಾವ್, ಅಪ್ಪಂ ಮತ್ತು ಲಿಟ್ಟಿ ಚೋಖಾಗಳಿಗೂ ಭಾರಿ ಬೇಡಿಕೆಯಿದೆ. ದೇಶದ 160ಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ ಈ ಸೌಲಭ್ಯ ಸಿಗಲಿದ್ದು, ಸುಮಾರು 40,000 ರೆಸ್ಟೋರೆಂಟ್‌ಗಳಿಂದ ನೀವು ಆಹಾರ ಆಯ್ಕೆ ಮಾಡಬಹುದು.
ಭಾರತೀಯ ರೈಲ್ವೆಯಲ್ಲಿ ಪ್ರತಿದಿನ ಕೋಟ್ಯಂತರ ಜನರು ಪ್ರಯಾಣಿಸುತ್ತಾರೆ. ಇಂತಹ ಹೊಸ ತಂತ್ರಜ್ಞಾನಗಳು ಬಂದಾಗ ಪ್ರಯಾಣಿಕರ ಹಸಿವಿನ ಸಮಸ್ಯೆ ನೀಗುವುದಲ್ಲದೆ, ಪ್ರಯಾಣವೂ ಸುಖಕರವಾಗುತ್ತದೆ. ಇನ್ಮುಂದೆ ಟ್ರೈನ್ ಹತ್ತುವ ಮುನ್ನ ಊಟದ ಬುತ್ತಿ ಗಂಟು ಕಟ್ಟುವ ಚಿಂತೆ ಬೇಡ, ಫೋನ್ ತೆರೆದು ಸ್ವಿಗ್ಗಿ ಮಾಡಿ. ನಿಮ್ಮ ಮುಂದಿನ ರೈಲು ಪ್ರಯಾಣ ಸುಖಕರವಾಗಿರಲಿ, ಹೊಟ್ಟೆ ತುಂಬಾ ಊಟ ಸಿಗಲಿ.