Apr 29, 2026 Languages : ಕನ್ನಡ | English

ಟ್ರೈನ್‌ನಲ್ಲಿ ಸಿಗೋ ಚನ್ನಾ ಮಸಾಲಾ ತಿನ್ನುವ ಮುನ್ನ ಎಚ್ಚರ - ನೆಲದ ಮೇಲೆ ಈರುಳ್ಳಿ ಕತ್ತರಿಸುವ ದೃಶ್ಯ ವೈರಲ್!!

ಟ್ರೈನ್‌ನಲ್ಲಿ ಪ್ರಯಾಣ ಮಾಡೋದು ಅಂದ್ರೆ ಅದೊಂತರ ಮಜಾ. ಕಿಟಕಿ ಪಕ್ಕ ಕೂತು ಹೊರಗಿನ ಪ್ರಕೃತಿ ಸೌಂದರ್ಯ ಸವಿಯುತ್ತಾ, ಬಿಸಿ ಬಿಸಿ ಚಹಾ ಅಥವಾ ಏನಾದ್ರೂ ತಿಂಡಿ ತಿನ್ನೋದು ಎಲ್ಲರಿಗೂ ಇಷ್ಟ. ಆದ್ರೆ, ನೀವು ಟ್ರೈನ್‌ನಲ್ಲಿ ಮಾರೋ ಈ ಕಡಲೆಪುರಿ ಅಥವಾ ಚನ್ನಾ ಮಸಾಲಾ (Chickpeas) ಪ್ರಿಯರಾಗಿದ್ರೆ ಈ ಲೇಖನವನ್ನ ಪೂರ್ತಿ ಓದಿ. ಯಾಕಂದ್ರೆ, ಅಲ್ಲಿ ನಡೆಯೋ ಕೆಲವು ದೃಶ್ಯಗಳು ನಿಮ್ಮ ಹೊಟ್ಟೆ ತಳಮಳಿಸುವಂತೆ ಮಾಡೋದು ಗ್ಯಾರಂಟಿ!

ಗಲೀಜು ನೆಲದಲ್ಲಿ ತಯಾರಿಸಿದ ತಿಂಡಿ – ಟ್ರೈನ್ ಘಟನೆ ವೈರಲ್!! | Photo Credit: https://x.com/Iamkirti2026
ಗಲೀಜು ನೆಲದಲ್ಲಿ ತಯಾರಿಸಿದ ತಿಂಡಿ – ಟ್ರೈನ್ ಘಟನೆ ವೈರಲ್!! | Photo Credit: https://x.com/Iamkirti2026

ಇತ್ತೀಚೆಗೆ ಟ್ರೈನ್‌ನಲ್ಲಿ ನಡೆದ ಒಂದು ಘಟನೆ ಬೆಚ್ಚಿಬೀಳಿಸಿತು. ಒಬ್ಬ ವ್ಯಕ್ತಿ ಟ್ರೈನ್‌ನಲ್ಲಿ ಚನ್ನಾ ಮಸಾಲಾ ಮಾರುತ್ತಿದ್ದ. ಆದ್ರೆ ಆತ ಅದಕ್ಕೆ ಬೇಕಾದ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಯನ್ನು ಎಲ್ಲಿ ಕತ್ತರಿಸುತ್ತಿದ್ದ ಗೊತ್ತಾ? ಟ್ರೈನ್‌ನ ಗಲೀಜು ನೆಲದ ಮೇಲೆ! ಹೌದು, ಸಾವಿರಾರು ಜನ ಓಡಾಡೋ, ಉಗುಳೋ ಅದೇ ನೆಲದ ಮೇಲೆ ಯಾವುದೇ ಮುಲಾಜಿಲ್ಲದೆ ತರಕಾರಿ ಕತ್ತರಿಸಿ ಜನರಿಗೆ ಕೊಡುತ್ತಿದ್ದ. ಇದನ್ನು ನೋಡಿದ ಮೇಲೆ "ಅಯ್ಯೋ.. ಇದನ್ನೇನಾ ನಾವು ಇಷ್ಟು ಖುಷಿಯಿಂದ ತಿನ್ನೋದು?" ಅಂತ ಅನ್ನಿಸೋದು ಸಹಜ.

ಸಾಮಾನ್ಯವಾಗಿ ಟ್ರೈನ್‌ನಲ್ಲಿ ತಿಂಡಿ ಮಾರುವವರನ್ನ ನೋಡಿದಾಗ ನಮಗೆಲ್ಲ ಒಂದು ಕರುಣೆ ಇರುತ್ತೆ. "ಪಾಪ ಬಡವರು, ಕಷ್ಟಪಟ್ಟು ಕೆಲಸ ಮಾಡಿ ದುಡ್ಡು ಮಾಡ್ತಿದ್ದಾರೆ, ಒಂದು ಪ್ಲೇಟ್ ತಗೊಂಡ್ರೆ ಅವರಿಗೂ ಹೆಲ್ಪ್ ಆಗುತ್ತೆ" ಅಂತ ನಾವು ಅಂದುಕೋತೀವಿ. ಆದ್ರೆ, ಬಡತನ ಇದೆ ಅಂತ ಜನರ ಆರೋಗ್ಯದ ಜೊತೆ ಚೆಲ್ಲಾಟ ಆಡೋದು ಎಷ್ಟು ಸರಿ? ಹಸಿದವರಿಗೆ ಅಥವಾ ಹಾದಿ ಹೋಕರಿಗೆ ವಿಷ ಉಣಿಸಿದಂತಾಗಲ್ವಾ ಇದು? ಕಷ್ಟಪಟ್ಟು ದುಡಿಯೋದ್ರಲ್ಲಿ ತಪ್ಪಿಲ್ಲ, ಆದ್ರೆ ಕನಿಷ್ಠ ಸ್ವಚ್ಛತೆ ಕಾಪಾಡಿಕೊಳ್ಳೋದು ಪ್ರತಿಯೊಬ್ಬ ವ್ಯಾಪಾರಿಯ ಧರ್ಮ.

ಟ್ರೈನ್ ತಿಂಡಿ ಆರೋಗ್ಯಕ್ಕೆ ಕಂಟಕ!

ನಾವು ಟ್ರೈನ್‌ನಲ್ಲಿ ಸಿಗೋ ತಿಂಡಿ ತಿಂದಾಗ ಆಗೋ ಅನಾಹುತಗಳು ಒಂದೆರಡಲ್ಲ:

ಗಲೀಜು ಪರಿಸರ: ಟ್ರೈನ್‌ನ ಕಂಪಾರ್ಟ್‌ಮೆಂಟ್‌ಗಳು ಎಷ್ಟು ಗಲೀಜಾಗಿರುತ್ತವೆ ಅನ್ನೋದು ನಮಗೆಲ್ಲ ಗೊತ್ತೇ ಇದೆ. ಅಂತಹ ಜಾಗದಲ್ಲಿ ತಯಾರಾಗೋ ಆಹಾರದಲ್ಲಿ ಬ್ಯಾಕ್ಟೀರಿಯಾಗಳು ಸುಲಭವಾಗಿ ಸೇರಿಕೊಳ್ಳುತ್ತವೆ.

ನೀರಿನ ಸಮಸ್ಯೆ: ಅವರು ಬಳಸೋ ನೀರು ಎಲ್ಲಿಂದ ಬಂದಿರುತ್ತೆ? ಅದು ಕುಡಿಯಲು ಯೋಗ್ಯವಾಗಿದೆಯಾ? ಅನ್ನೋ ಗ್ಯಾರಂಟಿ ಇರೋದಿಲ್ಲ.

ಸಂಕ್ರಮಿಕ ರೋಗಗಳು: ಇಂತಹ ಅಶುಚಿಯಾದ ಆಹಾರ ತಿಂದ್ರೆ ವಾಂತಿ, ಭೇದಿ ಅಥವಾ ಕಾಲರಾದಂತಹ ರೋಗಗಳು ಬರೋ ಸಾಧ್ಯತೆ ಜಾಸ್ತಿ ಇರುತ್ತೆ.

ನಿಮ್ಮ ಪ್ರಯಾಣ ಸುರಕ್ಷಿತವಾಗಿರಲಿ:

ನಾವು ಟ್ರೈನ್‌ನಲ್ಲಿ ಹೋಗುವಾಗ ಕೆಲವು ಮುಂಜಾಗ್ರತೆ ತಗೋಬೇಕಿರೋದು ತುಂಬಾ ಮುಖ್ಯ:

ಮನೆಯಿಂದಲೇ ತಿಂಡಿ ತಗೊಂಡು ಹೋಗಿ: ಬೆಸ್ಟ್ ಅಂದ್ರೆ ಮನೆಯಲ್ಲೇ ತಯಾರಿಸಿದ ಚಪಾತಿ ಅಥವಾ ಚಿತ್ರಾನ್ನದಂತಹ ಪದಾರ್ಥಗಳನ್ನ ಜೊತೆಯಲ್ಲಿ ಇಟ್ಟುಕೊಳ್ಳಿ. ಇದು ಆರೋಗ್ಯಕ್ಕೂ ಒಳ್ಳೆಯದು, ಹಣವೂ ಉಳಿಯುತ್ತೆ.

ಹಣ್ಣುಗಳು ಸದಾ ಬೆಸ್ಟ್: ಟ್ರೈನ್‌ನಲ್ಲಿ ಏನಾದ್ರೂ ತಿನ್ನಲೇಬೇಕು ಅನ್ನಿಸಿದ್ರೆ, ಸಿಪ್ಪೆ ಸುಲಿದು ತಿನ್ನಬಹುದಾದ ಬಾಳೆಹಣ್ಣು ಅಥವಾ ಕಿತ್ತಳೆಹಣ್ಣುಗಳನ್ನ ಆರಿಸಿಕೊಳ್ಳಿ.

ಬ್ಯಾಕ್ಡ್ ಐಟಮ್ಸ್: ತುಂಬಾ ಅನಿವಾರ್ಯವಾದ್ರೆ ಮಾತ್ರ ಪ್ಯಾಕ್ ಮಾಡಿರೋ ಬಿಸ್ಕತ್ತು ಅಥವಾ ಚಿಪ್ಸ್ ಪ್ಯಾಕೆಟ್‌ಗಳನ್ನ ತಗೊಳ್ಳಿ. ಆದ್ರೆ ಬಿಡಿ ಬಿಡಿಯಾಗಿ ಮಾರೋ ತಿಂಡಿಗಳಿಂದ ದೂರವಿರಿ.

ನಾನು ಈವರೆಗೂ ಟ್ರೈನ್‌ನಲ್ಲಿ ಮಾರೋ ಇಂತಹ ತಿಂಡಿಗಳನ್ನ ತಗೊಂಡಿಲ್ಲ, ಇವತ್ತಿನ ಈ ಘಟನೆ ನೋಡಿದ ಮೇಲಂತೂ ಅಪ್ಪಿತಪ್ಪಿ ಕೈ ಕೂಡ ಹಚ್ಚಲ್ಲ! ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. "ಬಡವರು" ಅನ್ನೋ ಕರುಣೆಗೆ ಬಿದ್ದು ನಿಮ್ಮ ಹೊಟ್ಟೆಯನ್ನ ಹಾಳು ಮಾಡಿಕೊಳ್ಳಬೇಡಿ. ಸೋಷಿಯಲ್ ಮೀಡಿಯಾದಲ್ಲಿ ಇಂತಹ ಎಚ್ಚರಿಕೆ ಸುದ್ದಿಗಳನ್ನ ಶೇರ್ ಮಾಡಿ, ನಿಮ್ಮ ಫ್ರೆಂಡ್ಸ್ ಮತ್ತು ಫ್ಯಾಮಿಲಿ ಮೆಂಬರ್ಸ್ ಕೂಡ ಹುಷಾರಾಗಿರೋ ತರ ನೋಡಿಕೊಳ್ಳಿ.

Latest News