Mar 10, 2026 Languages : ಕನ್ನಡ | English

ಅಂತರಾಷ್ಟ್ರೀಯ ಪ್ರವಾಸಿಗರ ಹಾಟ್ ಫೇವರಿಟ್ ಮಂಗಳೂರು - ಐಷಾರಾಮಿ ಕ್ರೂಸ್ ಹಡಗಿನಲ್ಲಿ ಬಂದಿಳಿದ 600ಕ್ಕೂ ಹೆಚ್ಚು ಅತಿಥಿಗಳು!!

ಕರಾವಳಿ ನಗರ ಮಂಗಳೂರು ಇದೀಗ ಅಂತಾರಾಷ್ಟ್ರೀಯ ಪ್ರವಾಸಿಗರ ನೆಚ್ಚಿನ ತಾಣವಾಗಿ ಬದಲಾಗುತ್ತಿದೆ. ಇತ್ತೀಚೆಗೆ ನವಮಂಗಳೂರು ಬಂದರಿಗೆ (NMPA) 'ಎಂಎಸ್ ಸಿರೆನಾ' ಎಂಬ ಬೃಹತ್ ಮತ್ತು ಐಷಾರಾಮಿ ಪ್ರವಾಸಿ ಹಡಗು ಆಗಮಿಸಿದ್ದು, ಕರಾವಳಿಯ ಪ್ರವಾಸೋದ್ಯಮಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ.

ವಿದೇಶಿ ಪ್ರವಾಸಿಗರಿಗೆ ಸಾಂಪ್ರದಾಯಿಕ ಸ್ವಾಗತದ ಹಬ್ಬ
ವಿದೇಶಿ ಪ್ರವಾಸಿಗರಿಗೆ ಸಾಂಪ್ರದಾಯಿಕ ಸ್ವಾಗತದ ಹಬ್ಬ

ಸಾಂಪ್ರದಾಯಿಕ ಸ್ವಾಗತ ಮತ್ತು ಸಂಭ್ರಮ

ಭಾನುವಾರ ಬೆಳಗ್ಗೆ 9 ಗಂಟೆಗೆ ಕೇರಳದ ಕೊಚ್ಚಿಯಿಂದ ಪ್ರಯಾಣ ಬೆಳೆಸಿದ್ದ 'ಎಂಎಸ್ ಸಿರೆನಾ' ಹಡಗು ನವಮಂಗಳೂರು ಬಂದರನ್ನು ತಲುಪಿತು. ಈ ಹಡಗಿನಲ್ಲಿ ಸುಮಾರು 619 ವಿದೇಶಿ ಪ್ರವಾಸಿಗರು ಮತ್ತು 390 ಸಿಬ್ಬಂದಿ ಇದ್ದರು.

ಮಾರ್ಷಲ್ ದ್ವೀಪಗಳ ಧ್ವಜವನ್ನು ಹೊಂದಿರುವ ಈ ನಾರ್ವೇಜಿಯನ್ ಕ್ರೂಸ್ ಹಡಗು, ತನ್ನ ಅಂತಾರಾಷ್ಟ್ರೀಯ ಪ್ರವಾಸದ ಭಾಗವಾಗಿ ಮಂಗಳೂರಿಗೆ ಆಗಮಿಸಿತು. ಬಂದರಿಗೆ ಆಗಮಿಸುತ್ತಿದ್ದಂತೆಯೇ ಪ್ರವಾಸಿಗರಿಗೆ ಕರಾವಳಿ ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುವ ಸಾಂಪ್ರದಾಯಿಕ ಸ್ವಾಗತವನ್ನು ನೀಡಲಾಯಿತು. ಈ ಆತ್ಮೀಯ ಆತಿಥ್ಯ ವಿದೇಶಿ ಪ್ರವಾಸಿಗರನ್ನು ಸಖತ್ ಖುಷಿಪಡಿಸಿತು.

ಮಂಗಳೂರಿನ ದರ್ಶನ

ಮಂಗಳೂರಿಗೆ ಬಂದಿಳಿದ ಪ್ರವಾಸಿಗರು ನಗರದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ ಪುಳಕಿತರಾದರು. ಅವರು ನಗರದ ಪ್ರಸಿದ್ಧ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಐತಿಹಾಸಿಕ ಕಲೆಗಳಿಗೆ ಹೆಸರಾದ ಸೈಂಟ್ ಅಲೋಶಿಯಸ್ ಚಾಪೆಲ್ ಮತ್ತು ವಾಸ್ತುಶಿಲ್ಪದ ಅದ್ಭುತವಾಗಿರುವ ಸಾವಿರ ಕಂಬದ ಬಸದಿಯನ್ನು ಸಂದರ್ಶಿಸಿದರು.

ಜೊತೆಗೆ, ಇಲ್ಲಿನ ಸ್ಥಳೀಯ ಮಾರುಕಟ್ಟೆಗಳಲ್ಲಿ ಸುತ್ತಾಡಿ ಕರಾವಳಿಯ ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ಕಣ್ತುಂಬಿಕೊಂಡರು. ಸಂಜೆ ವೇಳೆಗೆ, ಮಂಗಳೂರಿನ ಸುಂದರ ನೆನಪುಗಳನ್ನು ಹೊತ್ತು ಪ್ರವಾಸಿಗರು ಗೋವಾದ ಮೊರ್ಮುಗಾವೊ ಬಂದರಿಗೆ ತಮ್ಮ ಮುಂದಿನ ಪಯಣವನ್ನು ಮುಂದುವರಿಸಿದರು.

ಹೆಚ್ಚುತ್ತಿರುವ ಕ್ರೂಸ್ ಪ್ರವಾಸೋದ್ಯಮ

ಈ ಪ್ರಸ್ತುತ ಕ್ರೂಸ್ ಋತುವಿನಲ್ಲಿ ಮಂಗಳೂರಿಗೆ ಬರುತ್ತಿರುವ ಮೂರನೇ ಹಡಗು ಇದಾಗಿದೆ. ಮಂಗಳೂರು ದಿನೇ ದಿನೇ ಪಶ್ಚಿಮ ಕರಾವಳಿಯ ಪ್ರಮುಖ ಕ್ರೂಸ್ ಪ್ರವಾಸೋದ್ಯಮ ತಾಣವಾಗಿ ವೇಗವಾಗಿ ಬೆಳೆಯುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ನವಮಂಗಳೂರು ಬಂದರು ಪ್ರಾಧಿಕಾರ (NMPA), ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಸಂತಸದ ವಿಷಯ ಎಂದು ತಿಳಿಸಿದೆ.

ಪ್ರವಾಸಿಗರಿಗೆ ಉತ್ತಮ ಅನುಭವ ನೀಡಲು ಮತ್ತು ಇಲ್ಲಿನ ಪ್ರವಾಸೋದ್ಯಮದ ಸಾಮರ್ಥ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ವಿಶ್ವ ದರ್ಜೆಯ ಮೂಲಸೌಕರ್ಯಗಳನ್ನು ಒದಗಿಸಲು ಪ್ರಾಧಿಕಾರ ಬದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest News