ಫೆಬ್ರವರಿ 26, ಗುರುವಾರದಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪ್ರಿಯರಿಗೆ ಒಂದು ರೋಚಕ ಪಂದ್ಯ ಕಾದಿದೆ. ಸೂಪರ್ 8 ಹಂತದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೋ ಅವರು ಸೆಮಿಫೈನಲ್ ಪ್ರವೇಶದತ್ತ ಒಂದು ದೊಡ್ಡ ಹೆಜ್ಜೆ ಇಡಲಿದ್ದಾರೆ. ಈ ಪಂದ್ಯದ ಫಲಿತಾಂಶದ ಮೇಲೆ ಭಾರತ ಮತ್ತು ಜಿಂಬಾಬ್ವೆ ತಂಡಗಳ ಭವಿಷ್ಯವೂ ಅಡಗಿದೆ ಎನ್ನಲಾಗುತ್ತಿದೆ.
ನೆಟ್ ರನ್ ರೇಟ್ ಆತಂಕದಲ್ಲಿ ಭಾರತ
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಸೋತ ನಂತರ ಭಾರತದ ನೆಟ್ ರನ್ ರೇಟ್ -3.800 ಗೆ ಕುಸಿದಿದೆ. ಒಂದು ವೇಳೆ ಸೂಪರ್ 8 ಗುಂಪಿನ ಕೊನೆಯಲ್ಲಿ ಮೂರು ತಂಡಗಳು ತಲಾ 6 ಅಂಕಗಳನ್ನು ಹೊಂದಿದ್ದರೆ, ಆಗ ನೆಟ್ ರನ್ ರೇಟ್ ಚೆನ್ನಾಗಿರುವ ತಂಡ ಮಾತ್ರ ಮುಂದಿನ ಹಂತಕ್ಕೆ ಹೋಗುತ್ತದೆ. ಈ ಹಿಂದೆ 2012ರ ವಿಶ್ವಕಪ್‌ನಲ್ಲಿ ಕೂಡ ಭಾರತ ಇಂತಹದೇ ಪರಿಸ್ಥಿತಿಯಲ್ಲಿ ರನ್ ರೇಟ್ ಕೊರತೆಯಿಂದ ಟೂರ್ನಿಯಿಂದ ಹೊರಬಿದ್ದಿತ್ತು. ಹೀಗಾಗಿ, ಇಂದಿನ ಪಂದ್ಯದ ಪ್ರತಿಯೊಂದು ರನ್ ಭಾರತಕ್ಕೂ ಮುಖ್ಯವಾಗಿದೆ.
ದಕ್ಷಿಣ ಆಫ್ರಿಕಾ ತಂಡಕ್ಕೆ ಅಹಮದಾಬಾದ್ ಸ್ಟೇಡಿಯಂ ಎರಡನೇ ಮನೆಯಂತಾಗಿದೆ. ಇಲ್ಲಿ ಅವರು ಆಡಿದ 5 ಪಂದ್ಯಗಳಲ್ಲಿ 4ರಲ್ಲಿ ಜಯಗಳಿಸಿದ್ದಾರೆ. ಸ್ಪಿನ್ನರ್ ಕೇಶವ್ ಮಹಾರಾಜ್ ಹೇಳುವ ಪ್ರಕಾರ, ಈ ಮೈದಾನ ನಮಗೆ ಪರಿಚಿತವಾದರೂ, ಪ್ರತಿ ಪಂದ್ಯದಲ್ಲೂ ಪಿಚ್ ವರ್ತನೆ ಬೇರೆ ಬೇರೆಯಾಗಿರುತ್ತದೆ. ಹಾಗಾಗಿ ನಾವು ಮೈದಾನಕ್ಕೆ ತಕ್ಕಂತೆ ವೇಗವಾಗಿ ಹೊಂದಿಕೊಳ್ಳುವುದು ಮುಖ್ಯ. ಅಫಘಾನಿಸ್ತಾನ ವಿರುದ್ಧ ಸೂಪರ್ ಓವರ್‌ನಲ್ಲಿ ಗೆದ್ದ ನಂತರ ದಕ್ಷಿಣ ಆಫ್ರಿಕಾ ತಂಡದ ಆತ್ಮವಿಶ್ವಾಸ ಗಗನಕ್ಕೇರಿದೆ.
ಇನ್ನೊಂದೆಡೆ, ಎರಡು ಬಾರಿ ಚಾಂಪಿಯನ್ ಆಗಿರುವ ವೆಸ್ಟ್ ಇಂಡೀಸ್ ಕಳೆದ ಕೆಲವು ವಿಶ್ವಕಪ್‌ಗಳಲ್ಲಿ ನಿರಾಶೆ ಅನುಭವಿಸಿತ್ತು. ಆದರೆ ಈ ಬಾರಿ ಅವರು ಪೂರ್ಣ ಶಕ್ತಿಯೊಂದಿಗೆ ಮರಳಿದ್ದಾರೆ. ಸತತ 5 ಪಂದ್ಯಗಳನ್ನು ಗೆದ್ದಿರುವ ಅವರು ಜಿಂಬಾಬ್ವೆ ವಿರುದ್ಧ ಅತಿ ದೊಡ್ಡ ಸ್ಕೋರ್ ಕಲೆಹಾಕಿದ್ದಾರೆ. ಬ್ಯಾಟಿಂಗ್ ಕೋಚ್ ಫ್ಲಾಯ್ಡ್ ರೈಫರ್ ಹೇಳುವಂತೆ, "ನಾವು ಯಾರಿಗೂ ಏನನ್ನೂ ಸಾಬೀತುಪಡಿಸಲು ಇಲ್ಲಿಗೆ ಬಂದಿಲ್ಲ, ಪಂದ್ಯವನ್ನು ಗೆದ್ದು ಚಾಂಪಿಯನ್ ಆಗುವುದು ನಮ್ಮ ಏಕೈಕ ಗುರಿ."
ಅಹಮದಾಬಾದ್ ಪಿಚ್ ಸಾಮಾನ್ಯವಾಗಿ ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ನೆರವಾಗುತ್ತದೆ. ಇಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 191 ರಷ್ಟಿದೆ. ಆದರೆ ದಕ್ಷಿಣ ಆಫ್ರಿಕಾ ಈ ಹಿಂದೆ ಇಲ್ಲಿ ದೊಡ್ಡ ಮೊತ್ತವನ್ನು ಬೆನ್ನಟ್ಟಿ ಗೆದ್ದ ಇತಿಹಾಸ ಹೊಂದಿದೆ. ಇಂದು ಹವಾಮಾನ ಶುಭ್ರವಾಗಿದ್ದು, ಸುಮಾರು 34 ಡಿಗ್ರಿ ಸೆಲ್ಸಿಯಸ್ ತಾಪಮಾನವಿರಲಿದೆ. ಮಳೆಯ ಯಾವುದೇ ಮುನ್ಸೂಚನೆ ಇಲ್ಲ ಎಂದು ಕೇಳಿ ಬಂದಿದೆ.
ತಂಡಗಳ ಮುಖಾಮುಖಿ ಇತಿಹಾಸ
- ಒಟ್ಟು ಪಂದ್ಯಗಳು - 29 (ದ. ಆಫ್ರಿಕಾ - 14, ವೆಸ್ಟ್ ಇಂಡೀಸ್ - 15)
- ಟಿ20 ವಿಶ್ವಕಪ್‌ನಲ್ಲಿ- 5 (ದ. ಆಫ್ರಿಕಾ - 4, ವೆಸ್ಟ್ ಇಂಡೀಸ್ - 1)
ವಿಶ್ವಕಪ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ಬಲಿಷ್ಠವಾಗಿದ್ದರೂ, ಪ್ರಸ್ತುತ ಫಾರ್ಮ್‌ನಲ್ಲಿ ವೆಸ್ಟ್ ಇಂಡೀಸ್ ಅದ್ಭುತವಾಗಿ ಆಡುತ್ತಿದೆ. ಇಂದು ಅಹಮದಾಬಾದ್‌ನಲ್ಲಿ ಒಂದು ಭರ್ಜರಿ ಕ್ರಿಕೆಟ್ ಸಮರ ಆಗೋದಂತೂ ನಿಶ್ಚಿತವಾಗಿದೆ.