2026ರ ಟಿ20 ವಿಶ್ವಕಪ್ ಚದುರಂಗದಾಟ ಈಗ ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದ ಸೂಪರ್-8 ಹಂತದ ಪಂದ್ಯಗಳು ಇಂದಿನಿಂದ (ಫೆಬ್ರವರಿ 21) ಆರಂಭವಾಗುತ್ತಿವೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿದ್ದು, ಎರಡನೇ ದಿನವಾದ ಫೆಬ್ರವರಿ 22 ರಂದು ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಎದುರಿಸುವ ಮೂಲಕ ತನ್ನ ಮುಂದಿನ ಹಂತದ ಪಯಣವನ್ನು ಶುರು ಮಾಡಲಿದೆ. ಈ ಪಂದ್ಯವು ವಿಶ್ವದ ಅತಿ ದೊಡ್ಡ ಕ್ರೀಡಾಂಗಣವಾದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಸೂಪರ್-8 ಹಂತದಲ್ಲಿ ಭಾರತದ ಮೊದಲ ಸವಾಲು ದಕ್ಷಿಣ ಆಫ್ರಿಕಾ. ಈ ಪಂದ್ಯ ಮುಗಿದ ನಂತರ ಟೀಮ್ ಇಂಡಿಯಾ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನು ಎದುರಿಸಬೇಕಿದೆ. ಸೆಮಿಫೈನಲ್ ತಲುಪಲು ಈ ಹಂತದ ಪಂದ್ಯಗಳು ಭಾರತಕ್ಕೆ ಬಹಳ ಮುಖ್ಯವಾಗಿವೆ. ಸೌತ್ ಆಫ್ರಿಕಾ ಬಲಿಷ್ಠ ತಂಡವಾಗಿರುವುದರಿಂದ, ಭಾರತವು ಈ ಪಂದ್ಯವನ್ನು ಗೆದ್ದು ತನ್ನ ಅಭಿಯಾನಕ್ಕೆ ಭರ್ಜರಿ ಆರಂಭ ನೀಡುವ ಗುರಿ ಹೊಂದಿದೆ.
ಅಹಮದಾಬಾದ್‌ನ ಕಣದಲ್ಲಿ ಭಾರತದ ಆಡುವ ಬಳಗ (Playing 11) ಹೇಗಿರಲಿದೆ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ಅದರಲ್ಲೂ ವಿಶೇಷವಾಗಿ ಆರಂಭಿಕ ದಾಂಡಿಗ ಅಭಿಷೇಕ್ ಶರ್ಮಾ ಅವರ ಫಾರ್ಮ್ ಚಿಂತೆಗೆ ಕಾರಣವಾಗಿದೆ. ಕಳೆದ ಮೂರು ಪಂದ್ಯಗಳಲ್ಲಿ ಅವರು ಸತತವಾಗಿ ಶೂನ್ಯಕ್ಕೆ ಔಟ್ ಆಗಿರುವುದು ತಂಡಕ್ಕೆ ಹೊರೆಯಾಗಿದೆ. ಆದರೂ, ತಂಡದ ಆಡಳಿತವು ಅವರಿಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಕಾರಣವೆಂದರೆ, ತಂಡದಲ್ಲಿರುವ ಮತ್ತೋರ್ವ ಪ್ರಮುಖ ಆಟಗಾರ ಸಂಜು ಸ್ಯಾಮ್ಸನ್ ಕೂಡ ಪ್ರಸ್ತುತ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ. ಹೀಗಾಗಿ, ಓಪನಿಂಗ್ ಸ್ಥಾನದಲ್ಲಿ ಬದಲಾವಣೆ ಮಾಡುವ ರಿಸ್ಕ್ ತೆಗೆದುಕೊಳ್ಳಲು ಮ್ಯಾನೇಜ್‌ಮೆಂಟ್ ಇಷ್ಟಪಡುತ್ತಿಲ್ಲ.
ಕಳೆದ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಆಡಿದ ಅದೇ ತಂಡವನ್ನೇ ಸೌತ್ ಆಫ್ರಿಕಾ ವಿರುದ್ಧವೂ ಕಣಕ್ಕಿಳಿಸುವ ಸಾಧ್ಯತೆ ಇದೆ. ಏಕೆಂದರೆ ಅಹಮದಾಬಾದ್‌ನ ಪಿಚ್ ಮತ್ತು ಪರಿಸ್ಥಿತಿಗಳು ಈಗಾಗಲೇ ಭಾರತೀಯ ಆಟಗಾರರಿಗೆ ಪರಿಚಿತವಾಗಿವೆ. ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ಆರಂಭಿಕರಾಗಿ ಬಂದರೆ, ಮೂರನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಜವಾಬ್ದಾರಿ ಹೊರಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಲು ಸೂರ್ಯಕುಮಾರ್ ಯಾದವ್ ಸಿದ್ಧರಾಗಿದ್ದಾರೆ. ಆಲ್-ರೌಂಡರ್‌ಗಳಾಗಿ ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಮತ್ತು ಅಕ್ಷರ್ ಪಟೇಲ್ ತಂಡಕ್ಕೆ ಬಲ ತುಂಬಲಿದ್ದಾರೆ. ಸ್ಲಾಗ್ ಓವರ್‌ಗಳಲ್ಲಿ ಸಿಕ್ಸರ್‌ಗಳ ಮಳೆ ಸುರಿಸಲು ರಿಂಕು ಸಿಂಗ್ ಫಿನಿಶರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ವೇಗದ ದಾಳಿ ನಡೆಸಿದರೆ, ಸ್ಪಿನ್ ಜವಾಬ್ದಾರಿಯನ್ನು ವರುಣ್ ಚಕ್ರವರ್ತಿ ನಿಭಾಯಿಸಲಿದ್ದಾರೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಮಣಿಸಿ ಸೂಪರ್-8 ರಲ್ಲಿ ಶುಭಾರಂಭ ಮಾಡಲು ಸಜ್ಜಾಗಿದೆ.
ಭಾರತದ ಸಂಭಾವ್ಯ ಆಡುವ ಬಳಗ
ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಶಿವಂ ದುಬೆ, ರಿಂಕು ಸಿಂಗ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ.