Apr 18, 2026 Languages : ಕನ್ನಡ | English

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಕ್ರಿಕೆಟ್ ಹಬ್ಬ - ಪಾರ್ಕಿಂಗ್ ಎಲ್ಲಿ ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್!!

ಇವತ್ತು ಸಿಲಿಕಾನ್ ಸಿಟಿಯಲ್ಲಿ ಕ್ರಿಕೆಟ್ ಫೀವರ್ ಜೋರಾಗಿದೆ. ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಇಂದು ಮುಖಾಮುಖಿಯಾಗುತ್ತಿವೆ. ನೀವೇನಾದರೂ ಸ್ಟೇಡಿಯಂಗೆ ಹೋಗಿ ಮ್ಯಾಚ್ ನೋಡೋ ಪ್ಲ್ಯಾನ್‌ನಲ್ಲಿದ್ದರೆ ಅಥವಾ ಆ ಕಡೆ ಆಫೀಸ್ ಮುಗಿಸಿ ಮನೆಗೆ ಹೋಗುವವರಾಗಿದ್ದರೆ ಈ ಲೇಖನ ನಿಮಗಾಗಿ.

ಸ್ಟೇಡಿಯಂ ಸುತ್ತಮುತ್ತ ಪೊಲೀಸರ ಬಿಗಿ ಪಹರೆ
ಸ್ಟೇಡಿಯಂ ಸುತ್ತಮುತ್ತ ಪೊಲೀಸರ ಬಿಗಿ ಪಹರೆ

ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಮತ್ತು ಪಾರ್ಕಿಂಗ್ ಎಲ್ಲಿ ಮಾಡಬೇಕು ಅನ್ನೋದರ ಬಗ್ಗೆ ಬೆಂಗಳೂರು ಸಂಚಾರಿ ಪೊಲೀಸರು ಕಂಪ್ಲೀಟ್ ಗೈಡ್ ನೀಡಿದ್ದಾರೆ.

ಟ್ರಾಫಿಕ್ ಪೊಲೀಸರ ಬಿಗಿ ಪಹರೆ

ಮ್ಯಾಚ್ ಸಮಯದಲ್ಲಿ ಯಾವುದೇ ಗೊಂದಲ ಆಗಬಾರದು ಅಂತ ಸುಮಾರು 2000 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಅಷ್ಟೇ ಅಲ್ಲ, ಸ್ಟೇಡಿಯಂ ಹೊರಗೆ ಅಕ್ರಮವಾಗಿ 'ಬ್ಲ್ಯಾಕ್'ನಲ್ಲಿ ಟಿಕೆಟ್ ಮಾರುವವರನ್ನು ಹಿಡಿಯಲು 7 ಸ್ಪೆಷಲ್ ಟೀಮ್‌ಗಳು ರೌಂಡ್ಸ್ ಹಾಕುತ್ತಿವೆ. ಒಂದು ವೇಳೆ ನಿಮ್ಮ ಹತ್ತಿರ ಟಿಕೆಟ್ ಇಲ್ಲದಿದ್ದರೆ ಸುಮ್ಮನೆ ಸ್ಟೇಡಿಯಂ ಸುತ್ತಮುತ್ತ ಗುಂಪು ಸೇರಬೇಡಿ, ಪೊಲೀಸರು ಕ್ರಮ ಕೈಗೊಳ್ಳಬಹುದು!

ವಾಹನ ಎಲ್ಲಿ ಪಾರ್ಕ್ ಮಾಡಬೇಕು?

ಸ್ಟೇಡಿಯಂ ಸುತ್ತಮುತ್ತ ಎಲ್ಲೂ ಪಾರ್ಕಿಂಗ್ ಸಿಗಲ್ಲ, ಹಾಗಾಗಿ ಪೊಲೀಸರು ಈ ಕೆಳಗಿನ ಜಾಗಗಳನ್ನು ಗುರುತಿಸಿದ್ದಾರೆ:

ಸ್ಕೂಲ್ ಮೈದಾನಗಳು: ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮತ್ತು ಯುರೋಪಿಯನ್ ಶಾಲಾ ಮೈದಾನ.

ಕ್ರೀಡಾಂಗಣ: ಕಂಠೀರವ ಕ್ರೀಡಾಂಗಣದಲ್ಲಿ ಈ ಬಾರಿ ಪಾರ್ಕಿಂಗ್‌ಗೆ ಅವಕಾಶ ನೀಡಲಾಗಿದೆ.

ಮಲ್ಟಿ ಲೆವೆಲ್ ಪಾರ್ಕಿಂಗ್: ಫ್ರೀಡಂ ಪಾರ್ಕ್ ಮತ್ತು ಶಿವಾಜಿನಗರ ಬಸ್ ನಿಲ್ದಾಣದ ಮೊದಲ ಮಹಡಿ.

ಮಾಲ್‌ಗಳು: ಯು.ಬಿ. ಸಿಟಿ ಮತ್ತು ಗರುಡ ಮಾಲ್ ಪಾರ್ಕಿಂಗ್ ಕೂಡ ಬಳಸಬಹುದು.

ಇಲ್ಲಿ ಪಾರ್ಕಿಂಗ್ ಮಾಡಿದ್ರೆ ಫೈನ್ ಫಿಕ್ಸ್!

ಕೆಲವು ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅವುಗಳೆಂದರೆ:

ಕ್ವೀನ್ಸ್ ರಸ್ತೆ ಮತ್ತು ಎಂ.ಜಿ. ರಸ್ತೆ (ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ).

ಕಬ್ಬನ್ ರಸ್ತೆ, ರಾಜಭವನ ರಸ್ತೆ ಮತ್ತು ಮ್ಯೂಸಿಯಂ ರಸ್ತೆ.

ಕಸ್ತೂರಬಾ ರಸ್ತೆ, ಲಾವೆಲ್ಲೆ ರಸ್ತೆ ಮತ್ತು ವಿಟ್ಟಲ್ ಮಲ್ಯ ರಸ್ತೆ.

ಕಬ್ಬನ್ ಪಾರ್ಕ್ ಒಳಗಿನ ಎಲ್ಲಾ ರಸ್ತೆಗಳು.

ಆಟೋ/ಉಬರ್ ಬುಕ್ ಮಾಡೋರಿಗೆ ಗುಡ್ ನ್ಯೂಸ್

ಮ್ಯಾಚ್ ಮುಗಿದ ಮೇಲೆ ಮನೆಗೆ ಹೋಗಲು ಕ್ಯಾಬ್ ಅಥವಾ ಆಟೋ ಸಿಗದೆ ಪರದಾಡೋದು ಸಾಮಾನ್ಯ. ಅದಕ್ಕಾಗಿಯೇ ಪೊಲೀಸರು ಪಿಕ್-ಅಪ್ ಪಾಯಿಂಟ್‌ಗಳನ್ನು ನಿಗದಿ ಮಾಡಿದ್ದಾರೆ:

ಬಿಆರ್‌ವಿ ಮೈದಾನ (ಗೇಟ್ ನಂ. 06ರ ಬಳಿ).

ಮಾಣಿಕ್ ಶಾ ಪರೇಡ್ ಮೈದಾನ (ಗೇಟ್ ನಂ. 03ರ ಬಳಿ).

ಯಾವ ಗೇಟ್ ಮೂಲಕ ಒಳಗೆ ಹೋಗಬೇಕು?

ನಿಮ್ಮ ಟಿಕೆಟ್ ನೋಡಿ ನೀವು ಸರಿಯಾದ ಗೇಟ್ ಹತ್ತಿರ ಹೋಗಿ:

ಗೇಟ್ 11 ರಿಂದ 17: ಲಿಂಕ್ ರಸ್ತೆ ಕಡೆಯಿಂದ ಬರುವವರಿಗೆ.

ಗೇಟ್ E-1 ರಿಂದ E-3 ಮತ್ತು 18 ರಿಂದ 23: ಕಬ್ಬನ್ ರಸ್ತೆ ಕಡೆಯಿಂದ ಪ್ರವೇಶ.

ಗೇಟ್ E-5 ಮತ್ತು E-8: ಕ್ವೀನ್ಸ್ ರಸ್ತೆ ಕಡೆಯಿಂದ ಎಂಟ್ರಿ. (ಗಮನಿಸಿ: ಗೇಟ್ 9 ಮತ್ತು 9A ಕೇವಲ ಹೊರಗೆ ಬರಲು ಮಾತ್ರ!).

ವಿಐಪಿ ಎಂಟ್ರಿ: ಗೇಟ್ ನಂ. E-10 ರಲ್ಲಿ ಆಟಗಾರರು ಮತ್ತು ಗಣ್ಯರಿಗೆ ಮಾತ್ರ ಅವಕಾಶ.

ಪ್ರೇಕ್ಷಕರಿಗೆ ಸಣ್ಣ ಸಲಹೆ: ಸ್ಟೇಡಿಯಂನಲ್ಲಿ ಜನಜಂಗುಳಿ ಇರುವುದರಿಂದ ನಿಮ್ಮ ಮೊಬೈಲ್, ಪರ್ಸ್ ಮತ್ತು ಒಡವೆಗಳ ಬಗ್ಗೆ ಎಚ್ಚರವಿರಲಿ. ಸಾಧ್ಯವಾದಷ್ಟು ನಮ್ಮ ಮೆಟ್ರೋ ಅಥವಾ ಸಾರ್ವಜನಿಕ ಸಾರಿಗೆ ಬಳಸಿ, ಇದರಿಂದ ಪಾರ್ಕಿಂಗ್ ತಲೆನೋವು ತಪ್ಪುತ್ತದೆ.

Latest News