May 1, 2026 Languages : ಕನ್ನಡ | English

ರಣಜಿ ಟ್ರೋಫಿ ಫೈನಲ್ ನಲ್ಲಿ ಗಲಾಟೆ - ಕರ್ನಾಟಕದ ಆಟಗಾರ ಅನೀಶ್ ತಲೆಗೆ ಡಿಕ್ಕಿ ಹೊಡೆದ ಘಟನೆ!!

ಹುಬ್ಬಳ್ಳಿಯ ಕೆಎಸ್‌ಸಿಎ ಮೈದಾನದಲ್ಲಿ ರಣಜಿ ಟ್ರೋಫಿ ಫೈನಲ್ ಪಂದ್ಯವು ರಣರೋಚಕವಾಗಿ ಸಾಗುತ್ತಿದೆ. ಆದರೆ, ಇಲ್ಲಿ ಕೇವಲ ಬ್ಯಾಟ್ ಮತ್ತು ಚೆಂಡಿನ ನಡುವಿನ ಹೋರಾಟ ಮಾತ್ರವಲ್ಲದೆ, ಆಟಗಾರರ ನಡುವಿನ ಅನಿರೀಕ್ಷಿತ ಸಂಘರ್ಷವೂ ಭಾರಿ ಸದ್ದು ಮಾಡುತ್ತಿದೆ. ಕರ್ನಾಟಕ ಮತ್ತು ಜಮ್ಮು ಕಾಶ್ಮೀರ ತಂಡಗಳ ನಡುವಿನ ಪಂದ್ಯದ ಎರಡನೇ ದಿನದಾಟದಲ್ಲಿ ಆಟಗಾರರು ಪರಸ್ಪರ ಮಾತಿನ ಚಕಮಕಿಯಲ್ಲಿ ತೊಡಗಿದ್ದು, ಇದು ದೈಹಿಕ ಜಗಳಕ್ಕೆ ತಿರುಗಿದ್ದು ಕ್ರೀಡಾಭಿಮಾನಿಗಳನ್ನು ದಂಗಾಗಿಸಿದೆ. 

ಪ್ರಸಿದ್ಧ್ ಕೃಷ್ಣ ಓವರ್ ವೇಳೆ ಮೈದಾನದಲ್ಲಿ ಗಲಾಟೆ!!
ಪ್ರಸಿದ್ಧ್ ಕೃಷ್ಣ ಓವರ್ ವೇಳೆ ಮೈದಾನದಲ್ಲಿ ಗಲಾಟೆ!!

ಪಂದ್ಯದ 100ನೇ ಓವರ್ ಪ್ರಸಿದ್ಧ್ ಕೃಷ್ಣ ಅವರ ಕೈಯಲ್ಲಿತ್ತು. ಅವರ ಎಸೆತವನ್ನು ಪರಾಸ್ ಡೋಗ್ರಾ ಗಲ್ಲಿಯತ್ತ ತಳ್ಳಿದಾಗ, ಫೀಲ್ಡರ್ ಎಷ್ಟೇ ಪ್ರಯತ್ನಿಸಿದರೂ ಚೆಂಡು ಬೌಂಡರಿ ಗೆರೆ ತಲುಪಿತು. ಈ ಹಂತದಲ್ಲೇ ಅಸಲಿ ಕಿಡಿ ಹೊತ್ತಿಕೊಂಡಿದ್ದು! ಸಿಲ್ಲಿ ಪಾಯಿಂಟ್‌ನಲ್ಲಿ ನಿಂತಿದ್ದ ಅನೀಶ್ ಕೆವಿ ಮತ್ತು ಬ್ಯಾಟರ್ ಪರಾಸ್ ಡೋಗ್ರಾ ನಡುವೆ ಯಾವುದೋ ಸಣ್ಣ ವಿಷಯಕ್ಕೆ ಶುರುವಾದ ಮಾತಿನ ಚಕಮಕಿ ನೋಡನೋಡುತ್ತಿದ್ದಂತೆ ಮೈದಾನದ ಶಾಂತತೆಯನ್ನು ಕದಡಿತು.

ಮಾತಿನ ಚಕಮಕಿ ಅಷ್ಟಕ್ಕೆ ನಿಲ್ಲಲಿಲ್ಲ, ಕ್ಷಣಾರ್ಧದಲ್ಲಿ ಅದು ವಿಕೋಪಕ್ಕೆ ತಿರುಗಿತು. ಸಹನೆ ಕಳೆದುಕೊಂಡ ಪರಾಸ್ ಡೋಗ್ರಾ ಅವರು ಅನೀಶ್ ಕೆವಿ ಅವರತ್ತ ನುಗ್ಗಿ ತಲೆಯಿಂದ ಡಿಚ್ಚಿ ಹೊಡೆದರು! ಈ ಅನಿರೀಕ್ಷಿತ ದೈಹಿಕ ಸಂಘರ್ಷದಿಂದ ಮೈದಾನದಲ್ಲಿದ್ದ ಪ್ರೇಕ್ಷಕರೆಲ್ಲರೂ ಒಂದು ಕ್ಷಣ ದಂಗಾದರು. ಕೂಡಲೇ ತಂಡದ ಹಿರಿಯ ಆಟಗಾರ ಮಯಾಂಕ್ ಅಗರ್ವಾಲ್ ಅಖಾಡಕ್ಕಿಳಿದು ಡೋಗ್ರಾ ಅವರ ವರ್ತನೆಯನ್ನು ತೀವ್ರವಾಗಿ ಖಂಡಿಸಿದರು. ಜಗಳ ಮಿತಿ ಮೀರುತ್ತಿರುವುದನ್ನು ಕಂಡ ಅಂಪೈರ್‌ಗಳು ತಕ್ಷಣವೇ ಮಧ್ಯಪ್ರವೇಶಿಸಿ ಆಟಗಾರರನ್ನು ದೂರ ಮಾಡಿದರು. 

ಈ ಅಹಿತಕರ ಘಟನೆಯ ನಂತರ, ಅಂಪೈರ್‌ಗಳು ಕರ್ನಾಟಕ ತಂಡದ ನಾಯಕ ದೇವದತ್ ಪಡಿಕ್ಕಲ್ ಅವರನ್ನು ಕರೆಸಿ ತಂಡದ ಶಿಸ್ತಿನ ಬಗ್ಗೆ ಗಂಭೀರವಾಗಿ ಮಾತನಾಡಿದರು. ಫೀಲ್ಡಿಂಗ್ ಮಾಡುವಾಗ ಆಟಗಾರರು ಸಂಯಮ ಕಳೆದುಕೊಳ್ಳಬಾರದು ಎಂದು ಎಚ್ಚರಿಸಿದರು. ಪಂದ್ಯದ ನಂತರ ತನ್ನ ತಪ್ಪಿನ ಅರಿವಾದ ನಾಯಕ ಪರಾಸ್ ಡೋಗ್ರಾ ಅವರು ಅನೀಶ್ ಕೆವಿ ಬಳಿ ಕ್ಷಮೆಯಾಚಿಸಲು ಮುಂದಾದರು. ಆದರೆ, ಘಟನೆಯಿಂದ ಬೇಸರಗೊಂಡಿದ್ದ ಅನೀಶ್ ಅವರು ಕ್ಷಮೆಯಾಚನೆಯನ್ನು ಸ್ವೀಕರಿಸಲು ಆಸಕ್ತಿ ತೋರಿಸಲಿಲ್ಲ. ಅಂತಿಮವಾಗಿ ಅಂಪೈರ್‌ಗಳು ಮತ್ತು ಹಿರಿಯ ಆಟಗಾರರ ಸಂಧಾನದ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಲಾಯಿತು.

ಕ್ರಿಕೆಟ್ ಅನ್ನು 'ಜಂಟಲ್‌ಮನ್ ಗೇಮ್' ಎಂದು ಕರೆಯಲಾಗುತ್ತದೆ. ರಣಜಿ ಟ್ರೋಫಿಯಂತಹ ದೊಡ್ಡ ಟೂರ್ನಿಯ ಫೈನಲ್ ಪಂದ್ಯದಲ್ಲಿ ನಾಯಕರೇ ಇಂತಹ ವರ್ತನೆ ತೋರಿರುವುದು ಹಲವರ ಟೀಕೆಗೆ ಗುರಿಯಾಗಿದೆ. ಜಯದ ಒತ್ತಡ ಎಷ್ಟೇ ಇದ್ದರೂ ಮೈದಾನದಲ್ಲಿ ಸಂಯಮ ಮುಖ್ಯ ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ಈ ಪಂದ್ಯದಲ್ಲಿ ಕರ್ನಾಟಕ ತಂಡವು ತನ್ನ ತವರು ನೆಲದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಬೆನ್ನಲ್ಲೇ ಈ ಗಲಾಟೆ ನಡೆದಿದ್ದು, ಎರಡೂ ತಂಡಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಗಳೂ ಇವೆ.  

Latest News