Apr 12, 2026 Languages : ಕನ್ನಡ | English

ಮೈಸೂರಿನ ಕುಂಬಾರ ಕೊಪ್ಪಲಿಗೆ ಸಿಗಲಿದೆ ಹೊಸ ಕಳೆ - 5 ಕೋಟಿ ವೆಚ್ಚದಲ್ಲಿ ತಲೆ ಎತ್ತಲಿದೆ ಹೈಟೆಕ್ ಸ್ಟೇಡಿಯಂ!!

ಸಾಂಸ್ಕೃತಿಕ ನಗರಿ ಮೈಸೂರು ಅಂದ್ರೆ ಬರೀ ಅರಮನೆ, ದಸರಾ ಮಾತ್ರವಲ್ಲ, ಇಲ್ಲಿನ ಮಣ್ಣಿನ ಕ್ರೀಡೆಗಳಿಗೂ ಒಂದು ಗತ್ತು ಇದೆ. ಈಗ ಆ ಕ್ರೀಡಾ ಇತಿಹಾಸಕ್ಕೆ ಹೊಸದೊಂದು ಕಳೆ ತರಲು ಮೈಸೂರು ಮಹಾನಗರ ಪಾಲಿಕೆ ಭರ್ಜರಿ ಪ್ಲಾನ್ ಮಾಡಿದೆ. ಕುಂಬಾರ ಕೊಪ್ಪಲು ಬಡಾವಣೆಯ ಕ್ರೀಡಾ ಪ್ರೇಮಿಗಳ ದಶಕಗಳ ಕನಸು ಈಗ ನನಸಾಗುವ ಕಾಲ ಹತ್ತಿರ ಬಂದಿದೆ. ಸುಮಾರು 5 ಕೋಟಿ ರೂಪಾಯಿ ವೆಚ್ಚದಲ್ಲಿ ಇಲ್ಲಿ ಒಂದು ಅದ್ಭುತ ಕ್ರೀಡಾಂಗಣ ತಲೆ ಎತ್ತಲಿದೆ

ಮೈಸೂರು ಜನತೆಗೆ ಬಂಪರ್ ಲಾಟರಿ
ಮೈಸೂರು ಜನತೆಗೆ ಬಂಪರ್ ಲಾಟರಿ

ಎಲ್ಲಾ ಅಂದುಕೊಂಡಂತೆ ನಡೆದರೆ, ಇನ್ನು ಕೇವಲ ಎಂಟು ತಿಂಗಳಲ್ಲಿ ಈ ಮೈದಾನ ಬಳಕೆಗೆ ಸಿಗಲಿದೆ. ಮೈಸೂರು ಮಹಾನಗರ ಪಾಲಿಕೆ ಈಗಾಗಲೇ ಈ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಬಜೆಟ್‌ನಲ್ಲಿ 4.95 ಕೋಟಿ ರೂಪಾಯಿ ಹಣವನ್ನೂ ಮೀಸಲಿಟ್ಟಿದೆ.

ಸದ್ಯಕ್ಕೆ ಡಿಪಿಆರ್ (DPR) ಕೆಲಸ ಮುಗಿದಿದ್ದು, ಅಧಿಕಾರಿಗಳು ಟೆಂಡರ್ ಪ್ರಕ್ರಿಯೆಯಲ್ಲಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಗುತ್ತಿಗೆದಾರರಿಗೆ ಜವಾಬ್ದಾರಿ ಹಸ್ತಾಂತರವಾಗಲಿದೆ. ಒಮ್ಮೆ ಕೆಲಸ ಶುರುವಾಯ್ತು ಅಂದ್ರೆ, ಆರು ತಿಂಗಳ ಒಳಗೆ ಇಡೀ ಕ್ರೀಡಾಂಗಣ ರೆಡಿ ಮಾಡಿಕೊಡಬೇಕು ಅನ್ನೋದು ಪಾಲಿಕೆಯ ಕಟ್ಟುನಿಟ್ಟಿನ ಆದೇಶ. ಅಂದ್ರೆ, ಬರುವ ವರ್ಷದ ವೇಳೆಗೆ ಕುಂಬಾರ ಕೊಪ್ಪಲಿನಲ್ಲಿ ಕ್ರೀಡಾಪಟುಗಳ ಸಂಭ್ರಮ ಮುಗಿಲು ಮುಟ್ಟಲಿದೆ.

ಈ ಕ್ರೀಡಾಂಗಣದ ಹೈಲೈಟ್ಸ್ ಏನು?

ಜಾಗದ ವಿಸ್ತೀರ್ಣ: ಕುಂಬಾರ ಕೊಪ್ಪಲಿನ ಆಯಕಟ್ಟಿನ ಜಾಗದಲ್ಲಿರೋ ಸುಮಾರು 2 ಎಕರೆ 0.25 ಗುಂಟೆ ಜಾಗದಲ್ಲಿ ಈ ಸ್ಟೇಡಿಯಂ ನಿರ್ಮಾಣವಾಗುತ್ತಿದೆ. ಕ್ರೀಡಾಪಟುಗಳಿಗೆ ಓಡಾಡಲು ಮತ್ತು ಅಭ್ಯಾಸ ಮಾಡಲು ಸಾಕಷ್ಟು ಜಾಗ ಸಿಗಲಿದೆ.

ಸುಸಜ್ಜಿತ ವ್ಯವಸ್ಥೆ: ಇದೊಂದು 'ಆಲ್ ವೆದರ್' ಅಥವಾ ಸರ್ವಋತು ಕ್ರೀಡಾಂಗಣವಾಗಿರಲಿದೆ. ಅಂದರೆ ಮಳೆಗಾಲದಲ್ಲೂ ಕ್ರೀಡಾ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಆಧುನಿಕ ತಂತ್ರಜ್ಞಾನ ಬಳಸಿ ಮೈದಾನ ರೂಪಿಸಲಾಗುತ್ತಿದೆ.

ಸಂಪೂರ್ಣ ಅನುದಾನ: ಈ ಯೋಜನೆಗೆ ಬೇರೆ ಕಡೆ ಕೈಚಾಚದೆ, ಮೈಸೂರು ಮಹಾನಗರ ಪಾಲಿಕೆಯೇ ತನ್ನ ಸ್ವಂತ ಅನುದಾನದಿಂದ ಹಣ ಭರಿಸುತ್ತಿರುವುದು ವಿಶೇಷ.

ಕುಸ್ತಿ ಮಣ್ಣಿನ ಗುಣ, ಕ್ರೀಡಾಂಗಣದ ಹೊಸ ಲವಲವಿಕೆ
ಕುಂಬಾರ ಕೊಪ್ಪಲು ಅಂದ ತಕ್ಷಣ ಹಿರಿಯರಿಗೆ ನೆನಪಾಗೋದು ಇಲ್ಲಿನ ಕುಸ್ತಿ ಪಂದ್ಯಗಳು. ಮೈಸೂರು ಅರಸರ ಕಾಲದಿಂದಲೂ ಈ ಬಡಾವಣೆ ಕುಸ್ತಿಗೆ ಫೇಮಸ್. ಇಂದಿಗೂ ಇಲ್ಲಿನ ಗರಡಿ ಮನೆಗಳಲ್ಲಿ ಮಣ್ಣಿನ ಮಕ್ಕಳು ತಾಲೀಮು ನಡೆಸೋದನ್ನ ನೋಡಬಹುದು. ದಸರಾ ಸಮಯದಲ್ಲಿ ಅಥವಾ ಹಬ್ಬಗಳ ದಿನ ಇಲ್ಲಿ ನಡೆಯೋ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಗಳನ್ನು ನೋಡೋದೇ ಒಂದು ಕಣ್ಣಿನ ಹಬ್ಬ.

ಆದರೆ, ಕೇವಲ ಕುಸ್ತಿಗೆ ಮಾತ್ರ ಸೀಮಿತವಾಗಿದ್ದ ಈ ಭಾಗದಲ್ಲಿ ಈಗ ಎಲ್ಲಾ ಕ್ರೀಡೆಗಳಿಗೂ ಪ್ರೋತ್ಸಾಹ ಸಿಗಲಿದೆ. ಹೊಸದಾಗಿ ನಿರ್ಮಾಣವಾಗಲಿರೋ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ಫುಟ್ಬಾಲ್, ವಾಲಿಬಾಲ್ ಮತ್ತು ಶಟಲ್ ಬ್ಯಾಡ್ಮಿಂಟನ್‌ನಂತಹ ಕ್ರೀಡೆಗಳಿಗೆ ಬೇಕಾದ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದರಿಂದ ಇಲ್ಲಿನ ಯುವಕ-ಯುವತಿಯರಿಗೆ ತಮ್ಮ ಕ್ರೀಡಾ ಪ್ರತಿಭೆಯನ್ನು ತೋರಿಸಲು ಒಂದು ದೊಡ್ಡ ವೇದಿಕೆ ಸಿಕ್ಕಂತಾಗುತ್ತದೆ.

ಸ್ಥಳೀಯರಿಗೆ ಮತ್ತು ವಿದ್ಯಾರ್ಥಿಗಳಿಗೆ ವರದಾನ
ಕುಂಬಾರ ಕೊಪ್ಪಲು ಸುತ್ತಮುತ್ತ ಸಾಕಷ್ಟು ಶಾಲಾ-ಕಾಲೇಜುಗಳಿವೆ. ಸರಿಯಾದ ಮೈದಾನವಿಲ್ಲದೆ ಕ್ರೀಡಾಕೂಟಗಳನ್ನು ನಡೆಸಲು ಪರದಾಡುತ್ತಿದ್ದ ಆಡಳಿತ ಮಂಡಳಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಈ ಸ್ಟೇಡಿಯಂ ದೊಡ್ಡ ವರದಾನವಾಗಲಿದೆ. ಬೆಳಿಗ್ಗೆ ಮತ್ತು ಸಂಜೆ ಹೊತ್ತು ವಾಯುವಿಹಾರ ಮಾಡುವವರಿಗೂ ಇದು ಒಳ್ಳೆಯ ಜಾಗವಾಗಲಿದೆ.