ಐಪಿಎಲ್ ಅಂದಮೇಲೆ ಅಲ್ಲಿ ಬರೀ ಬ್ಯಾಟ್-ಬಾಲ್ ಸದ್ದು ಇರಲ್ಲ, ಅಭಿಮಾನಿಗಳ ಕ್ರೇಜ್ ಕೂಡ ರೇಂಜ್ ಮೀರಿ ಇರುತ್ತೆ. ಆದರೆ ಮೊನ್ನೆ ನಡೆದ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಪಂದ್ಯದಲ್ಲಿ ನಡೆದ ಒಂದು ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಜಿದ್ದಾಜಿದ್ದಿಗೆ ಕಾರಣವಾಗಿದೆ. ಅದಕ್ಕೆ ಕಾರಣ ಆ ಒಬ್ಬ 'ನಿಂಬೆ ಹಣ್ಣಿನ' ಅಭಿಮಾನಿ!
ಏಪ್ರಿಲ್ 18ರಂದು ಹೈದರಾಬಾದ್ ಮತ್ತು ಚೆನ್ನೈ ನಡುವೆ ಸಖತ್ ಫೈಟ್ ನಡೀತಿತ್ತು. ಸಿಎಸ್‌ಕೆ ತಂಡ 194 ರನ್‌ಗಳ ದೊಡ್ಡ ಗುರಿಯನ್ನು ಬೆನ್ನಟ್ಟುತ್ತಿತ್ತು. ಕೊನೆಯ ಓವರ್‌ಗಳಲ್ಲಿ ಶಿವಂ ದುಬೆ ಕ್ರಿಸ್‌ನಲ್ಲಿದ್ದಾಗ ಚೆನ್ನೈಗೆ ಗೆಲುವಿನ ಭರವಸೆ ಇತ್ತು. 17ನೇ ಓವರ್‌ನಲ್ಲಿ ಹೈದರಾಬಾದ್‌ನ ಸಕೀಬ್ ಹುಸೇನ್ ಬೌಲಿಂಗ್ ಮಾಡಲು ಬಂದರು.
ಸರಿಯಾಗಿ ಅದೇ ಟೈಮ್‌ಗೆ ಸ್ಟೇಡಿಯಂನ ಗ್ಯಾಲರಿಯಲ್ಲಿ ಕುಳಿತಿದ್ದ ಹೈದರಾಬಾದ್ ತಂಡದ ಅಭಿಮಾನಿಯೊಬ್ಬರು ತನ್ನ ಕೈಯಲ್ಲಿದ್ದ ಒಂದು ನಿಂಬೆ ಹಣ್ಣನ್ನು ಬ್ಯಾಟರ್ ಕಡೆ ತೋರಿಸಿ ಮಂತ್ರ ಹಾಕುವ ರೀತಿ ತಿರುಗಿಸುತ್ತಾ ಸನ್ನೆ ಮಾಡಿದ್ದಾರೆ. ವಿಚಿತ್ರ ಅಂದ್ರೆ, ಆತ ನಿಂಬೆ ಹಣ್ಣನ್ನು ತಿರುಗಿಸಿದ ಮುಂದಿನ ಎಸೆತದಲ್ಲೇ ಸಕೀಬ್ ಹುಸೇನ್ ಅವರ ಯಾರ್ಕರ್‌ಗೆ ಶಿವಂ ದುಬೆ ಕ್ಲೀನ್ ಬೌಲ್ಡ್ ಆಗಿದ್ದಾರೆ!
ಈ ಇಡೀ ದೃಶ್ಯವನ್ನು ಆ ಅಭಿಮಾನಿಯ ಪಕ್ಕದಲ್ಲೇ ಕುಳಿತಿದ್ದ ಗೆಳೆಯ ವಿಡಿಯೋ ಮಾಡಿಕೊಂಡಿದ್ದಾನೆ. "ನೋಡಿ ಇವನು ಮಂತ್ರ ಹಾಕಿದ ಕೂಡಲೇ ವಿಕೆಟ್ ಬಿತ್ತು" ಅನ್ನೋ ರೇಂಜ್‌ನಲ್ಲಿ ಈ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡ್ತಿದೆ. ಕ್ರಿಕೆಟ್ ಪ್ರಿಯರು ಇದನ್ನು ನೋಡಿ "ಇದು ಬ್ಲ್ಯಾಕ್ ಮ್ಯಾಜಿಕ್ (ಮಾಟ-ಮಂತ್ರ)" ಅಂತೆಲ್ಲಾ ಕಾಲೆಳೆಯುತ್ತಿದ್ದಾರೆ. ಇನ್ನು ಕೆಲವರು "ಇದು ಬರೀ ಕಾಕತಾಳೀಯ, ಬೌಲರ್‌ನ ಪ್ರತಿಭೆ" ಅಂತ ಸಪೋರ್ಟ್ ಮಾಡ್ತಿದ್ದಾರೆ.
ಈ ಮಧ್ಯೆ ಮತ್ತೊಂದು ಸುದ್ದಿ ಜೋರಾಗಿ ಹಬ್ಬಿದೆ. ಈ ಹಿಂದೆ ಆರ್‌ಸಿಬಿ ಡಿಜೆ ವಿರುದ್ಧ ದೂರು ನೀಡಿದ್ದ ಸಿಎಸ್‌ಕೆ ಮ್ಯಾನೇಜ್‌ಮೆಂಟ್, ಈಗ ಈ ನಿಂಬೆ ಹಣ್ಣಿನ ಅಭಿಮಾನಿಯ ವಿರುದ್ಧವೂ ಬಿಸಿಸಿಐಗೆ ದೂರು ಕೊಟ್ಟಿದೆ ಎನ್ನಲಾಗುವ ಪತ್ರವೊಂದು ವೈರಲ್ ಆಗಿದೆ. ಆದರೆ, ಈ ದೂರಿನ ಬಗ್ಗೆ ಸಿಎಸ್‌ಕೆ ಕಡೆಯಿಂದಾಗಲಿ ಅಥವಾ ಬಿಸಿಸಿಐನಿಂದಾಗಲಿ ಯಾವುದೇ ಅಫೀಶಿಯಲ್ ಕನ್ಫರ್ಮೇಷನ್ ಸಿಕ್ಕಿಲ್ಲ. ಬಹುಶಃ ಇದು ಯಾರೋ ಕಿಡಿಗೇಡಿಗಳು ಸೃಷ್ಟಿಸಿದ ಫೇಕ್ ನ್ಯೂಸ್ ಇರಬಹುದು ಎನ್ನಲಾಗುತ್ತಿದೆ.
ಮೀಮ್ಸ್ ಹಬ್ಬ!
ಟ್ವಿಟರ್ (X) ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಈ ಬಗ್ಗೆ ಮೀಮ್‌ಗಳ ಸುರಿಮಳೆಯೇ ಆಗ್ತಿದೆ. "ಇನ್ಮುಂದೆ ಸ್ಟೇಡಿಯಂಗೆ ಬರುವಾಗ ಬ್ಯಾಗ್ ಚೆಕ್ ಮಾಡೋದು ಬೇಡ, ಕೈಯಲ್ಲಿ ನಿಂಬೆ ಹಣ್ಣು ಇದ್ಯಾ ಅಂತ ಚೆಕ್ ಮಾಡಿ" ಅಂತ ಜನ ಕಾಮೆಂಟ್ ಮಾಡ್ತಿದ್ದಾರೆ. ಹೈದರಾಬಾದ್ ಅಭಿಮಾನಿಗಳು "ನಮ್ಮ ಟೀಮ್ ಹತ್ರ ಬರೀ ಸ್ಕಿಲ್ ಮಾತ್ರವಲ್ಲ, ಸ್ಪಿರಿಚುಯಲ್ ಪವರ್ ಕೂಡ ಇದೆ" ಅಂತ ಕಿಚಾಯಿಸ್ತಿದ್ದಾರೆ.