Mar 29, 2026 Languages : ಕನ್ನಡ | English

ಹೊಸ ನಾಯಕ, ಹೊಸ ಆಟಗಾರರು - ಎಸ್‌ಆರ್‌ಹೆಚ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಚಾಂಪಿಯನ್ RCB!!

ಕ್ರಿಕೆಟ್ ಪ್ರೇಮಿಗಳೇ ಸಜ್ಜಾಗಿ! ಹತ್ತು ತಿಂಗಳ ಸುದೀರ್ಘ ಕಾಯುವಿಕೆಯ ನಂತರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಐಪಿಎಲ್ ಹಬ್ಬ ಶುರುವಾಗಿದೆ. 2026ರ ಐಪಿಎಲ್ ಸೀಸನ್‌ನ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ಮುಖಾಮುಖಿಯಾಗಿವೆ.

ಚಿನ್ನಸ್ವಾಮಿಯಲ್ಲಿ ಐಪಿಎಲ್ ಹಬ್ಬ ಶುರು
ಚಿನ್ನಸ್ವಾಮಿಯಲ್ಲಿ ಐಪಿಎಲ್ ಹಬ್ಬ ಶುರು

ಟಾಸ್ ಗೆದ್ದ ಬೆಂಗಳೂರು, ಮೊದಲು ಬ್ಯಾಟಿಂಗ್ ಆಯ್ಕೆ

ಪಂದ್ಯದ ಆರಂಭದಲ್ಲೇ ಆರ್​ಸಿಬಿ ಅಭಿಮಾನಿಗಳಿಗೆ ಖುಷಿಯ ಸುದ್ದಿ ಸಿಕ್ಕಿದೆ. ಹೊಸ ನಾಯಕ ರಜತ್ ಪಾಟಿದಾರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದ್ದಾರೆ. "ಚಾಂಪಿಯನ್ಸ್ ಅಂದ್ರೆ ಮೊದಲು ರನ್ ಗುಡ್ಡೆ ಹಾಕಿ ಎದುರಾಳಿಗಳಿಗೆ ಪ್ರೆಶರ್ ಹಾಕಬೇಕು" ಅನ್ನೋದು ಪಾಟಿದಾರ್ ಪ್ಲಾನ್ ಇದ್ದಂತಿದೆ. ಹೀಗಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಮೊದಲು ಬೌಲಿಂಗ್ ಮಾಡಲಿದೆ.

ಆರ್‌ಸಿಬಿ ತಂಡದಲ್ಲಿ ಹೊಸಬರ ಹವಾ!

ಈ ಬಾರಿಯ ಮೊದಲ ಪಂದ್ಯದಲ್ಲೇ ಆರ್​ಸಿಬಿ ಇಬ್ಬರು ಹೊಸ ಆಟಗಾರರಿಗೆ ಅವಕಾಶ ನೀಡಿದೆ.

ಜಾಕೋಬ್ ಡಫಿ: ನ್ಯೂಜಿಲೆಂಡ್‌ನ ಈ ವೇಗಿ ಅನುಭವಿ ಜೋಶ್ ಹೇಜಲ್‌ವುಡ್ ಬದಲಿಗೆ ಕಣಕ್ಕಿಳಿಯುತ್ತಿದ್ದಾರೆ. ಇವರ ಸ್ವಿಂಗ್ ಬೌಲಿಂಗ್ ಎದುರಾಳಿಗಳಿಗೆ ನಡುಕ ಹುಟ್ಟಿಸುತ್ತಾ ಎಂದು ಕಾದು ನೋಡಬೇಕು.

ಅಭಿನಂದನ್ ಸಿಂಗ್: ಯುವ ವೇಗಿ ಅಭಿನಂದನ್ ಸಿಂಗ್ ಅವರು ಯಶ್ ದಯಾಳ್ ಅವರ ಜಾಗ ತುಂಬಲು ಸಜ್ಜಾಗಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಸದ್ದು ಮಾಡಿದ್ದ ಈ ಯುವಕನಿಗೆ ಇದು ದೊಡ್ಡ ವೇದಿಕೆ.

ರೆಕಾರ್ಡ್ಸ್ ಪುಸ್ತಕ ತಿರುವಿ ಹಾಕಿದರೆ ಸನ್‌ರೈಸರ್ಸ್ ಹೈದರಾಬಾದ್ ಸ್ವಲ್ಪ ಸ್ಟ್ರಾಂಗ್ ಆಗಿ ಕಾಣಿಸುತ್ತೆ.

ಇವರಿಬ್ಬರ ನಡುವೆ ಈವರೆಗೆ ನಡೆದ 26 ಪಂದ್ಯಗಳಲ್ಲಿ, ಎಸ್‌ಆರ್‌ಹೆಚ್ 13 ಬಾರಿ ಗೆದ್ದಿದ್ದರೆ, ಆರ್​ಸಿಬಿ 11 ಪಂದ್ಯಗಳನ್ನು ಗೆದ್ದಿದೆ. 2 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ.

ಕಳೆದ ಸೀಸನ್‌ನಲ್ಲಿ ಆರ್​ಸಿಬಿ ಕಪ್ ಗೆದ್ದಿದ್ದರೂ, ಹೈದರಾಬಾದ್ ವಿರುದ್ಧ ಸೋತಿತ್ತು. ಹಾಗಾಗಿ ಈ ಬಾರಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ ಬೆಂಗಳೂರು ಟೀಮ್!

ಇತ್ತ ಸನ್‌ರೈಸರ್ಸ್ ಹೈದರಾಬಾದ್ ತಂಡ ಕೂಡ ಹೊಸ ಹುರುಪಿನಲ್ಲಿದೆ. ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಮೊದಲ ಬಾರಿಗೆ ನಾಯಕನಾಗಿ ಕಣಕ್ಕಿಳಿಯುತ್ತಿದ್ದಾರೆ. ಇವರ ತಂಡದಲ್ಲಿ ಟ್ರಾವಿಸ್ ಹೆಡ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರಂತಹ ಬಿರುಸಿನ ಬ್ಯಾಟರ್‌ಗಳಿದ್ದಾರೆ.

ಉಭಯ ತಂಡಗಳ ಪ್ಲೇಯಿಂಗ್ 11 ಹೀಗಿದೆ:

ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (W.K), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ, ಜಾಕೋಬ್ ಡಫಿ, ಅಭಿನಂದನ್ ಸಿಂಗ್.

ಸನ್‌ರೈಸರ್ಸ್ ಹೈದರಾಬಾದ್ (SRH):

ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ನಾಯಕ/W.K), ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಸಲೀಲ್ ಅರೋರಾ, ಹರ್ಷ್ ದುಬೆ, ಹರ್ಷಲ್ ಪಟೇಲ್, ಜಯದೇವ್ ಉನದ್ಕತ್, ಇಶಾನ್ ಮಾಲಿಂಗ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಿಕ್ಸರ್‌ಗಳ ಮಳೆ ಸುರಿಯೋದು ಗ್ಯಾರಂಟಿ. ಮೊದಲ ಪಂದ್ಯದಲ್ಲೇ ಆರ್​ಸಿಬಿ ಗೆಲುವಿನ ನಗೆ ಬೀರಲಿ ಅನ್ನೋದು ಅಭಿಮಾನಿಗಳ ಹಾರೈಕೆ. "ಈ ಸಲ ಕಪ್ ನಮ್ದೇ" ಅನ್ನೋ ಘೋಷಣೆ ಈಗಲೇ ಮೊಳಗುತ್ತಿದೆ!

Latest News