Apr 29, 2026 Languages : ಕನ್ನಡ | English

ಮೌನ ಮುರಿದ ನಾಯಕ ಶ್ರೇಯಸ್‌ ಅಯ್ಯರ್ - ತಂಡದ ಮೊದಲ ಸೋಲಿಗೆ ಯಾರು ಕಾರಣ ಎಂದು ತಿಳಿಸಿದ ಶ್ರೇಯಸ್‌!!

ಐಪಿಎಲ್ 2026ರ ಸೀಸನ್‌ನಲ್ಲಿ ಸತತ ಗೆಲುವಿನಿಂದ ಬೀಗುತ್ತಿದ್ದ ಪಂಜಾಬ್ ಕಿಂಗ್ಸ್ (PBKS) ತಂಡಕ್ಕೆ ಕೊನೆಗೂ ರಾಜಸ್ತಾನ ರಾಯಲ್ಸ್ ಬ್ರೇಕ್ ಹಾಕಿದೆ. ತವರಿನ ಅಂಗಳದಲ್ಲೇ ಆರು ವಿಕೆಟ್‌ಗಳ ಸೋಲು ಕಂಡ ಪಂಜಾಬ್ ತಂಡದ ನಾಯಕ ಶ್ರೇಯಸ್‌ ಅಯ್ಯರ್, ಪಂದ್ಯದ ನಂತರ ಸೋಲಿಗೆ ಅಸಲಿ ಕಾರಣವೇನು ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಬೃಹತ್ ಮೊತ್ತ ಪೇರಿಸಿದರೂ ಪಂದ್ಯ ಕೈತಪ್ಪಿದ್ದಕ್ಕೆ ಅಯ್ಯರ್ ಬೌಲರ್‌ಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

223 ರನ್‌ಗಳ ಗುರಿ ಕೂಡ ಕೈತಪ್ಪಿದ ಪಂಜಾಬ್ – ನಾಯಕನ ಕಹಿ ಮಾತುಗಳು; | Photo Credit: https://sundayguardianlive.com
223 ರನ್‌ಗಳ ಗುರಿ ಕೂಡ ಕೈತಪ್ಪಿದ ಪಂಜಾಬ್ – ನಾಯಕನ ಕಹಿ ಮಾತುಗಳು; | Photo Credit: https://sundayguardianlive.com

ಪಂಜಾಬ್‌ಗೆ ಮೊದಲ ಹೊಡೆತ ಕೊಟ್ಟ ರಾಜಸ್ತಾನ!

ನ್ಯೂ ಚಂಡೀಗಢದ ಮುಲ್ಲನ್ಪುರ್ ಮೈದಾನದಲ್ಲಿ ನಡೆದ 40ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 223 ರನ್‌ಗಳ ದೊಡ್ಡ ಸ್ಕೋರ್ ಕಲೆಹಾಕಿತ್ತು. ಆದರೆ, ಈ ಗುರಿಯನ್ನು ಬೆನ್ನತ್ತಿದ ರಾಜಸ್ತಾನ ರಾಯಲ್ಸ್ ತಂಡಕ್ಕೆ ಓಪನರ್ ಯಶಸ್ವಿ ಜೈಸ್ವಾಲ್ ಮತ್ತು ಮಿಡ್ಲ್ ಆರ್ಡರ್‌ನ ಡೊನೊವನ್ ಫೆರೇರಾ ಅದ್ಭುತ ಆಟದ ಮೂಲಕ ಜಯ ತಂದುಕೊಟ್ಟರು. ಸೋತರೂ ಪಂಜಾಬ್ ಪಾಯಿಂಟ್ಸ್ ಟೇಬಲ್‌ನಲ್ಲಿ ಟಾಪ್‌ನಲ್ಲಿದೆ ಎಂಬುದು ಸಮಾಧಾನದ ಸಂಗತಿ. ಆದರೆ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಬೇಸರ ನಾಯಕ ಅಯ್ಯರ್ ಅವರ ಮಾತಿನಲ್ಲಿ ಎದ್ದು ಕಾಣುತ್ತಿತ್ತು.

"ಬ್ಯಾಟಿಂಗ್ ಚೆನ್ನಾಗಿತ್ತು, ಆದ್ರೆ ಬೌಲಿಂಗ್‌ ಫೇಲ್ ಆಯ್ತು!"

ಪಂದ್ಯ ಮುಗಿದ ಬಳಿಕ ಮಾತನಾಡಿದ ಶ್ರೇಯಸ್‌ ಅಯ್ಯರ್, ತಮ್ಮ ತಂಡದ ಬ್ಯಾಟ್ಸ್‌ಮನ್‌ಗಳ ಬೆನ್ನು ತಟ್ಟಿದ್ದಾರೆ. "223 ರನ್ ಎನ್ನುವುದು ನಿಜಕ್ಕೂ ದೊಡ್ಡ ಮೊತ್ತ. ನಮ್ಮ ಬ್ಯಾಟ್ಸ್‌ಮನ್‌ಗಳು ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡಿದ್ದು ನೋಡಲು ಖುಷಿಯಾಯಿತು. ಎಲ್ಲರೂ ಜವಾಬ್ದಾರಿಯಿಂದ ಆಡಿದರು" ಎಂದಿದ್ದಾರೆ.

ಆದರೆ, ಇದೇ ವೇಳೆ ಬೌಲರ್‌ಗಳ ಕಡೆಗೆ ಬೆರಳು ಮಾಡಿದ ಅಯ್ಯರ್, "ಬೌಲರ್‌ಗಳು ತಾವು ಹಾಕಿಕೊಂಡಿದ್ದ ಪ್ಲಾನ್‌ಗಳನ್ನು ಮೈದಾನದಲ್ಲಿ ಸರಿಯಾಗಿ ಉಪಯೋಗಿಸಲಿಲ್ಲ. ನಾವು ಪಂದ್ಯಕ್ಕೂ ಮೊದಲೇ ಸಾಕಷ್ಟು ಚರ್ಚೆ ಮಾಡಿದ್ದೇವು. ಸ್ಲೋ ಬಾಲ್‌ಗಳು, ಆಫ್-ಪೇಸ್ ಮತ್ತು ನಿಖರವಾದ ಯಾರ್ಕರ್‌ಗಳನ್ನು ಹಾಕಬೇಕೆಂದು ಅಂದುಕೊಂಡಿದ್ದೆವು. ಆದರೆ ಬೌಲರ್‌ಗಳು ಅದನ್ನು ಎಕ್ಸಿಕ್ಯೂಟ್ ಮಾಡುವಲ್ಲಿ ವಿಫಲರಾದರು. ರಾಜಸ್ತಾನದ ಫೆರೇರಾ ಮತ್ತು ಶುಭಮ್ ದುಬೆ ಕೊನೆಯಲ್ಲಿ ಅಬ್ಬರಿಸಿದ್ದು ನಮಗೆ ವಿಳವಾಯಿತು" ಎಂದು ನೇರವಾಗಿ ಹೇಳಿದ್ದಾರೆ.

ನಾಯಕರಿಗೆ ಯಾಕೆ ಕಷ್ಟವಾಗುತ್ತಿದೆ?

ಇಂದಿನ ಕಾಲದ ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳು ಮೊದಲ ಬಾಲ್‌ನಿಂದಲೇ ಅಟ್ಯಾಕ್ ಮಾಡುತ್ತಿದ್ದಾರೆ. "ಬ್ಯಾಟರ್‌ಗಳು ತಮ್ಮ ಆಟದ ಶೈಲಿಯನ್ನು ಬದಲಿಸಿಕೊಂಡಿದ್ದಾರೆ. ಅವರು ಮೊದಲ ಎಸೆತದಿಂದಲೇ ಬೌಂಡರಿ ಬಾರಿಸಲು ನೋಡುತ್ತಿರುವುದರಿಂದ ನಾಯಕರಿಗೆ ಫೀಲ್ಡ್ ಸೆಟ್ ಮಾಡುವುದು ಅಥವಾ ಪ್ಲಾನ್ ರೂಪಿಸುವುದು ಸವಾಲಾಗಿದೆ. ನಮ್ಮ ಎಲ್ಲ ಪ್ಲಾನ್‌ಗಳು ಪೇಪರ್ ಮೇಲೆ ಚೆನ್ನಾಗಿದ್ದವು, ಆದ್ರೆ ಗ್ರೌಂಡ್‌ನಲ್ಲಿ ಅನ್ವಯಿಸಲಿಲ್ಲ. ಇವತ್ತು ರಾಜಸ್ತಾನ ರಾಯಲ್ಸ್‌ಗೆ ಅದೃಷ್ಟವಿತ್ತು, ನಮಗಿರಲಿಲ್ಲ" ಎಂದು ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ.

ಪಾಸಿಟಿವ್ ಆಗಿರಲು ಕರೆ

ಇದು ಈ ಸೀಸನ್‌ನಲ್ಲಿ ಪಂಜಾಬ್‌ಗೆ ಎದುರಾದ ಮೊದಲ ಸೋಲು. ಈ ಬಗ್ಗೆ ತಂಡದ ಸದಸ್ಯರಿಗೆ ಸಂದೇಶ ನೀಡಿರುವ ಅಯ್ಯರ್, "ಈ ಸೋಲಿನಿಂದ ನಾವು ಸಾಕಷ್ಟು ಕಲಿಯಬೇಕಿದೆ. ಈ ಸೀಸನ್‌ನಲ್ಲಿ ನಾವು ಈಗಾಗಲೇ 200 ಪ್ಲಸ್ ಸ್ಕೋರ್ ಮಾಡಿದ್ದೇವೆ ಮತ್ತು ಅದನ್ನು ಡಿಫೆಂಡ್ ಕೂಡ ಮಾಡಿಕೊಂಡಿದ್ದೇವೆ. ಇದೊಂದು ಬ್ಯಾಡ್ ಡೇ ಅಷ್ಟೇ. ಮುಂದಿನ ಪಂದ್ಯಗಳಲ್ಲಿ ಇಂತಹ ತಪ್ಪುಗಳು ಆಗದಂತೆ ನೋಡಿಕೊಳ್ಳುತ್ತೇವೆ. ಎಲ್ಲರೂ ಪಾಸಿಟಿವ್ ಆಗಿರಿ, ಮುಂದಿನ ಪಂದ್ಯದ ಕಡೆಗೆ ಗಮನ ಕೊಡೋಣ" ಎಂದು ಹುರಿದುಂಬಿಸಿದ್ದಾರೆ.

ಶ್ರೇಯಸ್ ಅಯ್ಯರ್ ಅವರ ಮಾತುಗಳನ್ನು ಗಮನಿಸಿದರೆ, ತಂಡದ ಬೌಲಿಂಗ್ ವಿಭಾಗದ ಮೇಲೆ ಅವರಿಗೆ ಹೆಚ್ಚಿನ ನಿರೀಕ್ಷೆಯಿತ್ತು ಎಂಬುದು ಅರ್ಥವಾಗುತ್ತದೆ. 223 ರನ್ ಗಳಿಸಿದರೂ ಸೋಲುತ್ತೇವೆ ಎಂದರೆ ಅದು ಬೌಲಿಂಗ್ ವಿಭಾಗದ ವೈಫಲ್ಯವೇ ಸರಿ. ರಾಜಸ್ತಾನದ ಬ್ಯಾಟರ್‌ಗಳ ಅಬ್ಬರದ ಮುಂದೆ ಪಂಜಾಬ್‌ನ ಬೌಲಿಂಗ್ ಯೋಜನೆಗಳು ಮಂಕಾಗಿದ್ದವು. ಮುಂದಿನ ಪಂದ್ಯಗಳಲ್ಲಿ ಪಂಜಾಬ್ ಬೌಲರ್‌ಗಳು ಹೇಗೆ ಕಮ್‌ಬ್ಯಾಕ್ ಮಾಡುತ್ತಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.

ಐಪಿಎಲ್‌ನ ಇಂತಹ ಇಂಟರೆಸ್ಟಿಂಗ್ ಅಪ್‌ಡೇಟ್‌ಗಳಿಗಾಗಿ ನಮ್ಮ ಚಾನೆಲ್ ನೋಡ್ತಾ ಇರಿ! 

Latest News