Mar 9, 2026 Languages : ಕನ್ನಡ | English

ಅಹಮದಾಬಾದ್‌ನಲ್ಲಿ ಅಬ್ಬರಿಸಿದ ಅಭಿಷೇಕ್-ಸಂಜು ಜೋಡಿ - ಪವರ್ ಪ್ಲೇನಲ್ಲಿ ವಿಶ್ವ ದಾಖಲೆ ಬರೆದ ಟೀಂ ಇಂಡಿಯಾ!!

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ಬ್ಯಾಟರ್‌ಗಳು ಅಕ್ಷರಶಃ ಅಬ್ಬರಿಸುತ್ತಿದ್ದಾರೆ. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ತಂಡದ ನಿರ್ಧಾರವನ್ನು ಭಾರತೀಯ ಆರಂಭಿಕರಾದ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ತಲೆಕೆಳಗಾಗಿಸಿದ್ದಾರೆ.

ಟಿ20 ವಿಶ್ವಕಪ್ ಫೈನಲ್‌ನಲ್ಲಿ ರನ್ ಮಳೆ
ಟಿ20 ವಿಶ್ವಕಪ್ ಫೈನಲ್‌ನಲ್ಲಿ ರನ್ ಮಳೆ

ಪಂದ್ಯದ ಮೊದಲ ಎರಡು ಓವರ್‌ಗಳಲ್ಲಿ ಭಾರತ ಕೇವಲ 12 ರನ್ ಗಳಿಸಿ ನಿಧಾನಗತಿಯ ಆರಂಭ ಪಡೆದಿತ್ತು. ಆದರೆ, ಆ ನಂತರದ ನಾಲ್ಕು ಓವರ್‌ಗಳಲ್ಲಿ ನ್ಯೂಜಿಲೆಂಡ್ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಈ ಜೋಡಿ ಬರೊಬ್ಬರಿ 80 ರನ್‌ಗಳನ್ನು ಚಚ್ಚುವ ಮೂಲಕ ಕ್ರೀಡಾಂಗಣದಲ್ಲಿ ರನ್ ಮಳೆ ಸುರಿಸಿತು.

ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ಪವರ್ ಪ್ಲೇ ಅವಧಿಯಲ್ಲಿ (ಮೊದಲ 6 ಓವರ್‌ಗಳು) ಯಾವುದೇ ವಿಕೆಟ್ ನಷ್ಟವಿಲ್ಲದೆ 92 ರನ್ ಕಲೆಹಾಕಿತು. ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲೇ ಪವರ್ ಪ್ಲೇನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ವಿಶ್ವ ದಾಖಲೆಯನ್ನು ಭಾರತ ಸರಿಗಟ್ಟಿದೆ. ಈ ಹಿಂದೆ 2024ರಲ್ಲಿ ವೆಸ್ಟ್ ಇಂಡೀಸ್ ತಂಡವು ಅಫ್ಘಾನಿಸ್ತಾನ ವಿರುದ್ಧ 92 ರನ್ ಗಳಿಸಿ ನಿರ್ಮಿಸಿದ್ದ ದಾಖಲೆಯನ್ನು ಇಂದು ಭಾರತದ ಯುವ ಬ್ಯಾಟರ್‌ಗಳು ಪುನರಾವರ್ತಿಸಿದ್ದಾರೆ. ಈ ಭರ್ಜರಿ ಆರಂಭವು ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಮೇಲುಗೈ ತಂದುಕೊಟ್ಟಿದೆ.

ವಿಶೇಷವಾಗಿ ಯುವ ಆಟಗಾರ ಅಭಿಷೇಕ್ ಶರ್ಮಾ ಅವರು ಟೀಕಾಕಾರರ ಬಾಯಿ ಮುಚ್ಚಿಸುವಂತಹ ಆಟ ಪ್ರದರ್ಶಿಸಿದರು. ಫೈನಲ್‌ನಂತಹ ಒತ್ತಡದ ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ಮತ್ತು 6 ಬೌಂಡರಿಗಳ ಸಹಾಯದಿಂದ 52 ರನ್ ಸಿಡಿಸಿ ಅರ್ಧಶತಕ ಪೂರೈಸಿದರು.

ಇವರಿಗೆ ಸಾಥ್ ನೀಡಿದ ಸಂಜು ಸ್ಯಾಮ್ಸನ್ ಕೂಡ ಅತ್ಯಂತ ಸಂಯಮದಿಂದ ಹಾಗೂ ಅಷ್ಟೇ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದರು. ಈ ಜೋಡಿಯು ಮೊದಲ ವಿಕೆಟ್‌ಗೆ ಕೇವಲ 43 ಎಸೆತಗಳಲ್ಲಿ 98 ರನ್‌ಗಳ ಅಮೂಲ್ಯ ಜೊತೆಯಾಟವಾಡಿತು. ಭಾರತದ ಈ ಅಬ್ಬರದ ಬ್ಯಾಟಿಂಗ್ ನೋಡಿದ ಅಭಿಮಾನಿಗಳು ಅಹಮದಾಬಾದ್ ಮೈದಾನದಲ್ಲಿ ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದಾರೆ.

ಪವರ್ ಪ್ಲೇನಲ್ಲಿ ಭಾರತದ ಈ ಸಾಧನೆಯು ಟಿ20 ವಿಶ್ವಕಪ್‌ನ ಶ್ರೇಷ್ಠ ಪ್ರದರ್ಶನಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 2024ರಲ್ಲಿ ವೆಸ್ಟ್ ಇಂಡೀಸ್ 92 ರನ್ ಗಳಿಸಿದ್ದರೆ, 2014ರಲ್ಲಿ ನೆದರ್ಲೆಂಡ್ಸ್ 91 ರನ್ ಮತ್ತು 2016ರಲ್ಲಿ ಇಂಗ್ಲೆಂಡ್ 89 ರನ್ ಗಳಿಸಿದ ದಾಖಲೆಗಳಿವೆ. ಈಗ ಭಾರತವು ನ್ಯೂಜಿಲೆಂಡ್ ವಿರುದ್ಧ ಫೈನಲ್ ಹಂತದಲ್ಲೇ 92 ರನ್ ಗಳಿಸಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಈ ಭದ್ರ ಬುನಾದಿಯು ಭಾರತವು ಬೃಹತ್ ಮೊತ್ತವನ್ನು ಪೇರಿಸಲು ನೆರವಾಗಲಿದ್ದು, ವಿಶ್ವಕಪ್ ಟ್ರೋಫಿ ಗೆಲ್ಲುವ ಹಾದಿಯನ್ನು ಸುಗಮಗೊಳಿಸಿದೆ.

Latest News