Mar 10, 2026 Languages : ಕನ್ನಡ | English

ತವರಿನಲ್ಲಿ ತಲೆ ಎತ್ತಿದ ಟ್ರೋಫಿ - ಮೋದಿ ಸ್ಟೇಡಿಯಂನಲ್ಲಿ ಮಿಂಚಿದ ಟೀಮ್ ಇಂಡಿಯಾಕ್ಕೆ ಜಯಭೇರಿ!!

ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಇಂದು ಹಬ್ಬದ ದಿನ! ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ರೋಚಕ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಧೂಳೀಪಟ ಮಾಡಿದ ಟೀಮ್ ಇಂಡಿಯಾ, ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.

ಚಾಂಪಿಯನ್ಸ್ ಆಫ್ ದಿ ವರ್ಲ್ಡ್
ಚಾಂಪಿಯನ್ಸ್ ಆಫ್ ದಿ ವರ್ಲ್ಡ್

ಅಬ್ಬರಿಸಿದ ಭಾರತೀಯ ಬ್ಯಾಟರ್‌ಗಳು

ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಮ್ ಇಂಡಿಯಾ ಆರಂಭದಿಂದಲೇ ಕಿವೀಸ್ ಬೌಲರ್‌ಗಳ ಮೇಲೆ ಸವಾರಿ ಮಾಡಿತು. ಸಂಜು ಸ್ಯಾಮ್ಸನ್ ಅವರ ಅಬ್ಬರದ 89 ರನ್, ಇಶಾನ್ ಕಿಶನ್ ಅವರ ಬಿರುಸಿನ 54 ರನ್ ಹಾಗೂ ಅಭಿಷೇಕ್ ಶರ್ಮಾ ಅವರ 52 ರನ್ ನೆರವಿನಿಂದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಬೃಹತ್ 255 ರನ್ ಪೇರಿಸಿತು.

ಮಾರಕ ಬೌಲಿಂಗ್ ದಾಳಿಗೆ ನಲುಗಿದ ಕಿವೀಸ್

256 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಭಾರತದ ಬೌಲಿಂಗ್ ದಾಳಿಯನ್ನು ಎದುರಿಸುವಲ್ಲಿ ಸಂಪೂರ್ಣ ವಿಫಲವಾಯಿತು. ವಿಶೇಷವಾಗಿ ಜಸ್‌ಪ್ರೀತ್ ಬುಮ್ರಾ ಅವರ ಮಾರಕ ಬೌಲಿಂಗ್ ಎದುರು ಕಿವೀಸ್ ಆಟಗಾರರು ಪರದಾಡಿದರು. ಬುಮ್ರಾ ಪ್ರಮುಖ 4 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಅಂತಿಮವಾಗಿ ನ್ಯೂಜಿಲೆಂಡ್ ತಂಡ 19 ಓವರ್‌ಗಳಲ್ಲಿ ಕೇವಲ 159 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತ 96 ರನ್‌ಗಳ ಭರ್ಜರಿ ಜಯ ಸಾಧಿಸಿತು.

ನಾಯಕರುಗಳ ಅಭಿನಂದನಾ ಸುರಿಮಳೆ

ಟೀಮ್ ಇಂಡಿಯಾದ ಈ ಐತಿಹಾಸಿಕ ಗೆಲುವಿನ ಬಗ್ಗೆ ದೇಶದ ಪ್ರಮುಖ ನಾಯಕರು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ

ಪ್ರಧಾನಿ ನರೇಂದ್ರ ಮೋದಿ - ಚಾಂಪಿಯನ್ಸ್! ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆದ್ದ ಭಾರತಕ್ಕೆ ಅಭಿನಂದನೆಗಳು. ಈ ಗೆಲುವು ತಂಡದ ಅದ್ಭುತ ಕೌಶಲ್ಯ, ದೃಢನಿಶ್ಚಯ ಮತ್ತು ಒಗ್ಗಟ್ಟಿನ ಪ್ರತೀಕವಾಗಿದೆ. ಟೂರ್ನಿಯುದ್ದಕ್ಕೂ ಟೀಮ್ ಇಂಡಿಯಾ ತೋರಿದ ಧೈರ್ಯ ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆ ತಂದಿದೆ, ಎಂದು ಸೋಷಿಯಲ್ ಮೀಡಿಯಾದಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ - ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಂಜು ಸ್ಯಾಮ್ಸನ್ ಮತ್ತು ಜಸ್‌ಪ್ರೀತ್ ಬುಮ್ರಾ ಅವರ ವೈಯಕ್ತಿಕ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ತವರಿನಲ್ಲಿ ಟ್ರೋಫಿ ಉಳಿಸಿಕೊಂಡು ಭಾರತೀಯರಿಗೆ ಮರೆಯಲಾಗದ ಕ್ಷಣಗಳನ್ನು ನೀಡಿದ ಇಡೀ ತಂಡಕ್ಕೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅಪ್ರತಿಮ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ತವರಿನಲ್ಲಿ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಗೆಲುವು ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಎಂದೆಂದಿಗೂ ಮರೆಯಲಾಗದ ಕ್ಷಣವಾಗಿ ಉಳಿಯಲಿದೆ.

Latest News