Mar 14, 2026 Languages : ಕನ್ನಡ | English

ಗೆಲುವಿನ ಸಂಭ್ರಮದ ನಡುವೆ ಹಾರ್ದಿಕ್ ಪಾಂಡ್ಯಗೆ ಸಂಕಷ್ಟ - ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ದೂರು ದಾಖಲು!!

ಭಾರತೀಯ ಕ್ರಿಕೆಟ್ ತಂಡವು ಇತ್ತೀಚೆಗೆ ಟಿ20 ವಿಶ್ವಕಪ್ ಗೆದ್ದು ಇತಿಹಾಸ ಬರೆದಿದೆ. ಇಡೀ ದೇಶವೇ ಈ ಸಂಭ್ರಮದಲ್ಲಿ ಮುಳುಗಿರುವಾಗ, ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಹೊಸದೊಂದು ಕಾನೂನು ವಿವಾದಕ್ಕೆ ಸಿಲುಕಿದ್ದಾರೆ ಎನ್ನಲಾಗುತ್ತಿದೆ. ಮೈದಾನದಲ್ಲಿ ಗೆಲುವನ್ನು ಆಚರಿಸುವಾಗ ರಾಷ್ಟ್ರಧ್ವಜದ ವಿಷಯದಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಗಂಭೀರ ಆರೋಪ ಅವರ ಮೇಲೆ ಕೇಳಿಬಂದಿದೆ.

ಮಹಿಕಾ ಶರ್ಮಾ ಜೊತೆಗಿನ ವಿಡಿಯೋ ವೈರಲ್!!
ಮಹಿಕಾ ಶರ್ಮಾ ಜೊತೆಗಿನ ವಿಡಿಯೋ ವೈರಲ್!!

ಈ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಹಾರ್ದಿಕ್ ಪಾಂಡ್ಯ ವಿರುದ್ಧ ದೂರು ದಾಖಲಾಗಿದೆ. ವಕೀಲರಾದ ವಜೀದ್ ಖಾನ್ ಅವರು ಈ ದೂರನ್ನು ಸಲ್ಲಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ಆಧಾರವಾಗಿಟ್ಟುಕೊಂಡು ಈ ಕ್ರಮ ಕೈಗೊಂಡಿದ್ದಾರೆ. ರಾಷ್ಟ್ರಧ್ವಜವು ಭಾರತದ ಅಸ್ಮಿತೆಯಾಗಿದ್ದು, ಅದರ ಗೌರವ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮೈದಾನದಲ್ಲಿ ಭಾರತದ ಗೆಲುವು ಖಚಿತವಾದಾಗ ಆಟಗಾರರೆಲ್ಲರೂ ಸಂಭ್ರಮದಲ್ಲಿ ಮುಳುಗಿದ್ದರು. ಈ ವೇಳೆ ಹಾರ್ದಿಕ್ ಪಾಂಡ್ಯ ಅವರು ರಾಷ್ಟ್ರಧ್ವಜವನ್ನು ತಮ್ಮ ಭುಜದ ಮೇಲೆ ಹೊದ್ದುಕೊಂಡಿದ್ದರು. ಆದರೆ, ಅದೇ ಸಮಯದಲ್ಲಿ ನಡೆದ ಕೆಲವು ಘಟನೆಗಳು ಈಗ ವಿವಾದಕ್ಕೆ ನಾಂದಿ ಹಾಡಿವೆ. 

ಗೆಲುವಿನ ಖುಷಿಯಲ್ಲಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ನಟಿ ಮಹಿಕಾ ಶರ್ಮಾ ಅವರು ಅಪ್ಪಿಕೊಂಡು ಮುತ್ತು ನೀಡಿದ್ದಾರೆ. ರಾಷ್ಟ್ರಧ್ವಜವನ್ನು ಮೈಮೇಲೆ ಹಾಕಿಕೊಂಡಿರುವಾಗಲೇ ಇಂತಹ ವರ್ತನೆ ತೋರುವುದು ಧ್ವಜಕ್ಕೆ ಮಾಡುವ ಅವಮಾನ ಎಂದು ದೂರುದಾರರು ಆರೋಪಿಸಿದ್ದಾರೆ.

ವಿಶ್ವಕಪ್ ಪ್ರಶಸ್ತಿ ಪ್ರದಾನ ಮಾಡುವ ವೇದಿಕೆಯ ಮೇಲೆ ಹಾರ್ದಿಕ್ ಮತ್ತು ಮಹಿಕಾ ಶರ್ಮಾ ಇಬ್ಬರೂ ಒಟ್ಟಿಗೆ ಮಲಗಿ ವಿಶ್ರಮಿಸಿದ್ದಾರೆ. ಈ ಸಂದರ್ಭದಲ್ಲೂ ಹಾರ್ದಿಕ್ ಮೈಮೇಲೆ ತ್ರಿವರ್ಣ ಧ್ವಜವಿತ್ತು. ಭಾರತೀಯ ಧ್ವಜ ಸಂಹಿತೆಯ ಪ್ರಕಾರ ಧ್ವಜಕ್ಕೆ ಕೆಲವು ನಿಯಮಗಳಿದ್ದು, ಇಂತಹ ವರ್ತನೆ ಆ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂಬ ಚರ್ಚೆ ಶುರುವಾಗಿದೆ. ಇಬ್ಬರೂ ಒಬ್ಬರ ಭುಜದ ಮೇಲೆ ಒಬ್ಬರು ಕೈಹಾಕಿಕೊಂಡು ಕುಣಿದಾಡಿರುವುದು ಕೂಡ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಎರಡು ಭಾಗವಾಗಿ ವಿಭಜನೆಯಾಗಿದ್ದಾರೆ. ಕೆಲವರು "ಗೆಲುವಿನ ಅತಿರೇಕದ ಸಂಭ್ರಮದಲ್ಲಿ ಹಾರ್ದಿಕ್ ರಾಷ್ಟ್ರಧ್ವಜದ ಘನತೆಯನ್ನು ಮರೆತಿದ್ದಾರೆ, ಇದು ಖಂಡನೀಯ" ಎಂದು ಟೀಕಿಸುತ್ತಿದ್ದಾರೆ. ಇನ್ನೂ ಕೆಲವರು "ಇದು ಕೇವಲ ಸಂಭ್ರಮಾಚರಣೆಯಷ್ಟೇ, ಇದರಲ್ಲಿ ಧ್ವಜಕ್ಕೆ ಅಪಚಾರ ಮಾಡುವ ಯಾವುದೇ ಉದ್ದೇಶವಿರಲಿಲ್ಲ" ಎಂದು ಪಾಂಡ್ಯ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ರಾಷ್ಟ್ರಧ್ವಜವನ್ನು ಗೌರವಿಸುವುದು ಸಂವಿಧಾನಬದ್ಧ ಕರ್ತವ್ಯವಾಗಿದೆ. ಯಾವುದೇ ಕಾರಣಕ್ಕೂ ಧ್ವಜ ನೆಲಕ್ಕೆ ತಾಗಬಾರದು ಅಥವಾ ಅಸಭ್ಯ ವರ್ತನೆಯ ವೇಳೆ ಅದನ್ನು ಬಳಸಬಾರದು ಎಂಬ ನಿಯಮವಿದೆ. ಈ ಹಿನ್ನೆಲೆಯಲ್ಲಿ ಹಾರ್ದಿಕ್ ಪಾಂಡ್ಯ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಕೀಲರು ಪೊಲೀಸರಿಗೆ ಒತ್ತಾಯಿಸಿದ್ದಾರೆ. ವಿಶ್ವಕಪ್ ಹೀರೋ ಎನಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಈಗ ಈ ವಿವಾದದಿಂದ ಹೇಗೆ ಹೊರಬರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. 

Latest News