ದೀಪಿಕಾ ಟಿ.ಸಿ. ಕರ್ನಾಟಕದವರು. ಅವರು ಭಾರತೀಯ ಮಹಿಳಾ ಅಂಧ ಕ್ರಿಕೆಟ್ ತಂಡದ ನಾಯಕಿ ಆಗಿದ್ದಾರೆ. ದೃಷ್ಟಿ ಸಮಸ್ಯೆ ಇದ್ದರೂ, ತಮ್ಮ ಧೈರ್ಯ ಮತ್ತು ಕ್ರೀಡಾ ಪ್ರತಿಭೆಯಿಂದ ಅವರು ದೇಶದ ಹೆಮ್ಮೆ ಆಗಿದ್ದಾರೆ. ಅವರು B3 ವರ್ಗದ ಆಟಗಾರ್ತಿ (ಭಾಗಶಃ ದೃಷ್ಟಿ ಹೊಂದಿರುವವರು). ತಮ್ಮ ಕ್ರಿಕೆಟ್ ಪಯಣವನ್ನು ಶ್ರೀ ರಾಮಣ ಮಹರ್ಷಿ ಅಕಾಡೆಮಿ ಫಾರ್ ದಿ ಬ್ಲೈಂಡ್ ನಲ್ಲಿ ಆರಂಭಿಸಿದರು. ಅಲ್ಲಿ ಕ್ರಿಕೆಟ್ ಅವರ ಆತ್ಮವಿಶ್ವಾಸ, ಸ್ವಾತಂತ್ರ್ಯ ಮತ್ತು ಕನಸುಗಳನ್ನು ಬೆಳೆಸಿದ ಕ್ರೀಡೆ ಆಯಿತು.
ದೀಪಿಕಾ ಅವರ ನಾಯಕತ್ವದಲ್ಲಿ ಭಾರತವು ಮಹಿಳಾ ಅಂಧ ಕ್ರಿಕೆಟ್ ಟಿ20 ವಿಶ್ವಕಪ್ ಗೆದ್ದಿತು. ಇದು ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದ ವಿಶ್ವಕಪ್ ಆಗಿದ್ದು, ಭಾರತವು ಎಲ್ಲಾ ಪಂದ್ಯಗಳಲ್ಲಿ ಅಜೇಯವಾಗಿ ಆಡಿತು ಮತ್ತು ಅಂತಿಮದಲ್ಲಿ ನೇಪಾಳವನ್ನು ಸೋಲಿಸಿತು. ಇದಾದ ಬಳಿಕ ದೀಪಿಕಾ ಟಿಸಿ ಅವರು ತವರು ನೆಲಕ್ಕೆ ಬಂದಮೇಲೆ ಏನೆಲ್ಲಾ ಸನ್ಮಾನ ಮಾಡಿದರು, ಎಲ್ಲಿಲ್ಲಿ ಅವರು ಪಟ್ಟ ಶ್ರಮಕ್ಕೆ ಮಾನ್ಯತೆ ದೊರಕಿತು ಎನ್ನುವ ವಿಚಾರ ಸಾಕಷ್ಟು ಜನರಿಗೆ ಗೊತ್ತಿಲ್ಲ. ಅದು ಇದೀಗ ಹೆಚ್ಚು ಚರ್ಚೆ ಆಗಬೇಕು.
ಹೌದು, ದೀಪಿಕಾ ಟಿಸಿ ಅವರು ಇತ್ತೀಚಿಗೆ ನಮ್ಮ ಸಪ್ತಾಶ್ವ ಕನ್ನಡ ಟಿವಿ ಜೊತೆ ನೇರ ಸಂಪರ್ಕ ಮಾಡಿದರು. ಎಕ್ಸ್ಕ್ಲೂಸಿವ್ ಆಗಿ ಕ್ರಿಕೆಟ್ ವೃತ್ತಿ ಬಗ್ಗೆ, ಆರಂಭದ ದಿನಗಳಲ್ಲಿ ಅವರಿಗೆ ಆದ ನೋವಿನ ಸಂಗತಿಗಳ ಬಗ್ಗೆ ಮುಕ್ತವಾಗಿ ಹೇಳಿಕೊಂಡರು. ಇಂಡಿಯನ್ ಬಾಯ್ಸ್ ತಂಡದ ಕ್ರಿಕೆಟ್ ಬಗ್ಗೆ ಹಾಗೂ ಐಪಿಎಲ್ ಹುಡುಗ, ಹುಡುಗಿಯರ ತಂಡದ ಬಗ್ಗೆ ಅದೆಷ್ಟು ಅಪಾರ ಕ್ರಿಕೆಟ್ ಕ್ರೇಜ್ ಇಟ್ಟುಕೊಂಡಿರುತ್ತಾರೆ, ಆದರೆ ಅಂಧ ಕ್ರಿಕೆಟ್ ಅಂತ ಬಂದಾಗ ಯಾಕೆ ನಿಮಗೆ ಅಷ್ಟು ಕ್ರೇಜ್ ಇರೋಲ್ಲ,ನಿಮಗೆ ಯಾಕೆ ಅಷ್ಟು ಜನಪ್ರಿಯತೆ ಸಿಗಲ್ಲ ಎಂಬ ಪ್ರಶ್ನೆಗೆ ಪ್ರತಿಯೊಂದು ಅಂಶವನ್ನು ನಮ್ಮ ಸಪ್ತಾಶ್ವ ಟಿವಿ ಚಾನೆಲ್ ಮೂಲಕ ದೀಪಿಕಾ ಅವರು ಉತ್ತರಿಸಿದ್ದಾರೆ.
ದೀಪಿಕಾ ಟಿಸಿ ಅವರು ಹೇಳಿದಂತೆ ' ನಾವು ವಿಶ್ವಕಪ್ ಗೆದ್ದು ಬರುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಅವರು ಕರೆದು ಸನ್ಮಾನ ಮಾಡಿದರು. ಜೊತೆಗೆ ಕರ್ನಾಟಕದ ಅಂಧ ಕ್ರಿಕೆಟ್ ಆಡಿದ ನಮಗೆ ಹತ್ತು ಲಕ್ಷ ಕೊಡುತ್ತೇವೆ ಜೊತೆಗೆ ಒಂದು ಜಾಬ್ ಸಹ ಕೊಡುತ್ತೇವೆ ಎಂದರು. ಆದರೆ ಇನ್ನೂ ಸಹ ಆ ಹತ್ತು ಲಕ್ಷ ಬಂದಿಲ್ಲ, ಜಾಬ್ ಬಗ್ಗೆ ಕೂಡ ಯಾವ ಅಪ್ಡೇಟ್ ಬಂದಿಲ್ಲ. ಅದೇ ಮಧ್ಯಪ್ರದೇಶ, ಯುಪಿ ಅವರು ಒಬ್ಬೊಬ್ಬರಿಗೂ ಇಪ್ಪತ್ತೈದು ಲಕ್ಷ ಹಣ ನೀಡಿ ಜಾಬ್ ಸಹ ಈಗಾಗಲೇ ಕೊಟ್ಟರು' ಎಂದು ಹೇಳಿ ಕಣ್ಣೀರು ಸುರಿಸಿದರು ದೀಪಿಕಾ.
ಸಿದ್ದರಾಮಯ್ಯ ಸರ್ ಅವ್ರು ನಮಗೂ ಕೊಡುತ್ತಾರೆ ಎನ್ನುವ ನಂಬಿಕೆ ಇಟ್ಟಿದ್ದೇವೆ, ಕೊಟ್ಟರೆ ತುಂಬಾ ಸಹಾಯ ಆಗುತ್ತದೆ ಎಂದು ಕ್ಯಾಪ್ಟನ್ ಕಣ್ಣೀರು ಹಾಕಿದ್ದಾರೆ. ಮುಂದುವರೆದ ದೀಪಿಕಾ ಅವರು 'ಅತ್ತ ಪವನ್ ಕಲ್ಯಾಣ್ ಅವ್ರು ಕರೆದು ಏನ್ ಬೇಕಮ್ಮ ದೀಪಿಕಾ ಎಂದು ಕೇಳಿದ ವಿಷ್ಯ ಬಿಚ್ಚಿಟ್ಟರು. ಒಂದು ರಸ್ತೆ ಮಾಡಿಕೊಡಿ ಸರ್ ನಮ್ಮ ಊರಿಗೆ ಎಂದ ತಕ್ಷಣ ಸಾಯಂಕಾಲ ಆ ಕೆಲಸ ಆರಂಭ ಆಯಿತು. ಅವರ ಸಹಾಯ ನಾವು ಮರೆಯುವುದಿಲ್ಲ, ಊರಿಗೆ ಹೆಮ್ಮೆ ತಂದಿರುವುದು ನನಗೆ ಖುಷಿ ಇದೆ. ಆದರೆ ನಮ್ಮ ರಾಜ್ಯದ ರಾಜಕಾರಣಿಗಳು ನಮಗೆ ಸಹಾಯ ಮಾಡಬೇಕು ಎಂದು ಕಣ್ಣೀರು ಹಾಕಿದ್ದಾರೆ.
ಅವರ ಕುಟುಂಬ ಎಷ್ಟು ಸಂಕಟದಲ್ಲಿದೆ, ಅವರು ತಮ್ಮಂದಿರು ಏನು ಮಾಡುತ್ತಿದ್ದಾರೆ, ಅವರ ಕ್ರಿಕೆಟ್ ವೃತ್ತಿ ಜೀವನದಲ್ಲಿ ಏನೆಲ್ಲಾ ಕಷ್ಟಗಳು ಎದುರಾದವು ಎಂದು ಈ ಲೇಖನದ ಕೊನೆಯಲ್ಲಿರುವ ವಿಡಿಯೋ ಮೂಲಕ ನೋಡಿ ತಿಳಿದುಕೊಳ್ಳಿ. ಹೌದು, ದೀಪಿಕಾ ಅವರ ಕಥೆ ಕೇಳಿದರೆ, ಎಷ್ಟೆಲ್ಲಾ ಸಾಧನೆ ಮಾಡಿದರೂ ಯಾಕೆ ಸರ್ಕಾರ ಇವರನ್ನು ನಿರ್ಲಕ್ಷ್ಯ ಮಾಡುತ್ತಿದೆ ಎನ್ನುವ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕೇಳಿ ಬರುತ್ತದೆ. ಈ ವಿಡಿಯೋ ನೋಡಿ, ಹಾಗೆ ಇವರ ಕಷ್ಟದ ಜರ್ನಿ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ಧನ್ಯವಾದಗಳು.