ಕಾಂಗ್ರೆಸ್‌ನಲ್ಲಿ ಆಡಿಯೋ ಬಾಂಬ್ - ಸ್ವಪಕ್ಷದ ಅಭ್ಯರ್ಥಿ ಸೋಲಿಸಲು ಜಮೀರ್ ಸ್ಕೆಚ್? ರಸ್ತೆಗಿಳಿದ ದಾವಣಗೆರೆ ನಾಯಕರು!!

ರಾಜ್ಯ ರಾಜಕಾರಣದಲ್ಲಿ ಸದ್ಯ ಹೊಸ ಸಚಿವ ಸಂಪುಟ ರಚನೆಯದ್ದೇ ಹವಾ ಜೋರಾಗಿರುವ ಬೆನ್ನಲ್ಲೇ, ಅತ್ತ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್ ಅವರಿಗೆ ದೊಡ್ಡದೊಂದು ಶಾಕ್ ಎದುರಾಗಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಇತ್ತೀಚಿನ ಉಪಚುನಾವಣೆ ಮ್ಯಾಟರ್‌ಗೆ ಸಂಬಂಧಿಸಿದಂತೆ ಜಮೀರ್ ಅಹ್ಮದ್ ಅವರದ್ದೇ ಎನ್ನಲಾದ ಆಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಈ ಆಡಿಯೋ ಬಾಂಬ್‌ನಿಂದಾಗಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ಈಗ ಜಗಳ ರಸ್ತೆಗೇ ಬಂದಿದ್ದು, ಸ್ಥಳೀಯ ನಾಯಕರು ಜಮೀರ್ ವಿರುದ್ಧ ಕೆಂಡಕಾರುತ್ತಿದ್ದಾರೆ.

ಸುರೇಶ್ ಗೃಹದಲ್ಲಿ ಜಮೀರ್ ಪ್ರತ್ಯಕ್ಷ | Photo Credit: https://x.com/DKSureshINC
ಸುರೇಶ್ ಗೃಹದಲ್ಲಿ ಜಮೀರ್ ಪ್ರತ್ಯಕ್ಷ | Photo Credit: https://x.com/DKSureshINC

ಅಸಲಿಗೆ ಆಡಿಯೋದಲ್ಲೇನಿದೆ?

ವೈರಲ್ ಆಗಿರೋ ಆಡಿಯೋ ಕ್ಲಿಪ್ ಪ್ರಕಾರ, ಮಾಜಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರು ಕರ್ನಾಟಕ ಮುಸ್ಲಿಂ ಅಭಿವೃದ್ಧಿ ನಿಗಮದ (KMDC) ಮಾಜಿ ನಿರ್ದೇಶಕ ಮೊಹಮ್ಮದ್ ಸಿರಾಜ್ ಅವರಿಗೆ ಫೋನ್ ಮಾಡಿ, "ಯಾವುದೇ ಕಾರಣಕ್ಕೂ ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬಾರದು, ಅವರನ್ನು ಸೋಲಿಸಲೇಬೇಕು" ಅಂತ ಇನ್‌ಸ್ಟ್ರಕ್ಷನ್ ಕೊಟ್ಟಿದ್ದಾರಂತೆ! ಈ ಆಡಿಯೋ ಲೀಕ್ ಆಗ್ತಿದ್ದಂತೆ ದಾವಣಗೆರೆ ಕಾಂಗ್ರೆಸ್ ನಾಯಕರು ಒಬ್ರೊಬ್ಬರೇ ಎದ್ದು ನಿಂತು ಜಮೀರ್ ವಿರುದ್ಧ ಬ್ಯಾಟಿಂಗ್ ಶುರು ಮಾಡಿದ್ದಾರೆ.

ಜಮೀರ್‌ನ ಮೊದಲು ಪಾರ್ಟಿಯಿಂದ ಆಚೆ ಹಾಕಿ!

ಈ ವಿಚಾರವಾಗಿ ದಾವಣಗೆರೆಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಮತ್ತು ದಾವಣಗೆರೆಯ ಮಾಜಿ ಮೇಯರ್ ಚಮನ್ ಸಾಬ್, ಜಮೀರ್ ವಿರುದ್ಧ ಭರ್ಜರಿ ಆಕ್ರೋಶ ಹೊರಹಾಕಿದ್ದಾರೆ. "ಕಾಂಗ್ರೆಸ್‌ನಲ್ಲೇ ಇದ್ದುಕೊಂಡು ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ಪ್ಲಾನ್ ಮಾಡಿರೋ ಜಮೀರ್ ಅಹ್ಮದ್ ಖಾನ್ ಅವರನ್ನು ತಕ್ಷಣವೇ ಕಾಂಗ್ರೆಸ್‌ನಿಂದ ಹೊರಹಾಕಬೇಕು" ಎಂದು ಹೈಕಮಾಂಡ್‌ಗೆ ಖಡಕ್ ಆಗಿ ಒತ್ತಾಯಿಸಿದ್ದಾರೆ.

ಹಣದ ಹೊಳೆ ಹರಿಸಿದ ಎಸ್‌ಡಿಪಿಐ, ಬಸವರಾಜ್ ಪ್ರಶ್ನೆ

ಸುದ್ದಿಗಾರರ ಜೊತೆ ಮಾತನಾಡಿದ ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಮಡಿಕೇರಿಯಿಂದ ಇಲ್ಲಿಗೆ ಬಂದಿದ್ದ ಎಸ್‌ಡಿಪಿಐ (SDPI) ಅಭ್ಯರ್ಥಿ ಇಡೀ ಕ್ಷೇತ್ರದಲ್ಲಿ ನೀರಿನ ತರ ಹಣ ಹಂಚಿದ್ದಾರೆ. ದಾವಣಗೆರೆಗೆ ಬರಲು ಕಾಸಿಲ್ಲದ ವ್ಯಕ್ತಿಗೆ ಕೋಟಿ ಕೋಟಿ ರೂಪಾಯಿ ಎಲ್ಲಿಂದ ಬಂತು? ಆ ಅಭ್ಯರ್ಥಿ ಪ್ರತಿ ವೋಟ್‌ಗೆ ಬರೋಬ್ಬರಿ 2,000 ರೂಪಾಯಿ ಹಂಚಿದ್ದಾರೆ ಅಂತ ನಮ್ಮ ಕಾಂಗ್ರೆಸ್ ಕಾರ್ಯಕರ್ತರೇ ನನಗೆ ಬಂದು ಹೇಳಿದ್ದಾರೆ. ಇಷ್ಟೊಂದು ದುಡ್ಡಿನ ಬ್ಯಾಕಪ್ ಕೊಟ್ಟವರು ಯಾರು? ಎಂದು ನೇರವಾಗಿ ಜಮೀರ್ ಕಡೆಗೆ ಬೆರಳು ತೋರಿಸಿದ್ದಾರೆ.

ಅಷ್ಟೇ ಅಲ್ಲ, ಈಗ ಸಿಕ್ಕಿಬಿದ್ದ ತಕ್ಷಣ ಇದು ಇತ್ತೀಚಿನ 'AI (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ'ದ ಕರಾಮತ್ತು, ನನ್ನ ಧ್ವನಿ ಅಲ್ಲ ಅಂತ ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ನೋಡಬೇಡಿ. ಈ ಆಡಿಯೋ ಕ್ಲಿಪ್ ಅನ್ನು ತಕ್ಷಣವೇ ಎಫ್‌ಎಸ್‌ಎಲ್ (FSL) ಲ್ಯಾಬ್ ತನಿಖೆಗೆ ಕಳುಹಿಸಬೇಕು ಎಂದು ಡಿಮ್ಯಾಂಡ್ ಮಾಡಿದ್ದಾರೆ. ಇತ್ತ ಮಾಜಿ ಮೇಯರ್ ಚಮನ್ ಸಾಬ್ ಒಂದು ಹೆಜ್ಜೆ ಮುಂದೆ ಹೋಗಿ, "ನಿಮ್ಮ ಆಡಿಯೋ ನಕಲಿ ಅನ್ನೋದಾದ್ರೆ ಜಮೀರ್ ಅವರೇ, ನೀವು ದೇವರ ಮುಂದೆ ಬಂದು ಪ್ರಮಾಣ ಮಾಡಿ ಹೇಳಿ ನೋಡೋಣ" ಅಂತ ಓಪನ್ ಚಾಲೆಂಜ್ ಹಾಕಿದ್ದಾರೆ.

ಚಾಮರಾಜಪೇಟೆಯಿಂದ ಬಂದಿದ್ರು ಗ್ಯಾಂಗ್

ಸ್ಥಳೀಯ ನಾಯಕರ ಪ್ರಕಾರ, ಚುನಾವಣೆ ಸಮಯದಲ್ಲಿ ಜಮೀರ್ ಅವರ ಕ್ಷೇತ್ರವಾದ ಚಾಮರಾಜಪೇಟೆಯ ಕಾರ್ಯಕರ್ತರು ದಾವಣಗೆರೆಗೆ ಬಂದು ಬೀಡು ಬಿಟ್ಟಿದ್ದರು. ಅವರು ಕಾಂಗ್ರೆಸ್ ಪರ ಕೆಲಸ ಮಾಡುವ ಬದಲು ಎಸ್‌ಡಿಪಿಐ ಪರ ಪ್ರಚಾರ ಮಾಡಿದ್ದಾರಂತೆ. ಬಿಜೆಪಿಗೆ ಗೆಲುವು ಸಿಗುವಂತೆ ಮಾಡುವುದೇ ಇವರ ಒನ್-ಲೈನ್ ಅಜೆಂಡಾ ಆಗಿತ್ತು ಎಂದು ಸ್ಥಳೀಯ ನಾಯಕರು ಗಂಭೀರ ಆರೋಪ ಮಾಡಿದ್ದಾರೆ.

ಸುರೇಶ್ ಗೃಹದಲ್ಲಿ ಜಮೀರ್ ಪ್ರತ್ಯಕ್ಷ

ಇತ್ತ ಆಡಿಯೋ ಲೀಕ್ ಆಗಿ ದಾವಣಗೆರೆಯಲ್ಲಿ ಬೆಂಕಿ ಹೊತ್ತಿಕೊಂಡ ಬೆನ್ನಲ್ಲೇ, ಬೆಂಗಳೂರಿನಲ್ಲಿ ಡೀಲ್ ನಡೀತಿದೆ. ಮಾಜಿ ಸಂಸದ ಡಿ.ಕೆ. ಸುರೇಶ್ ಅವರನ್ನು ಜಮೀರ್ ಅಹ್ಮದ್ ಖಾನ್ ದಿಢೀರನೆ ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಈ ಆಡಿಯೋ ಸೋರಿಕೆ ರಗಳೆಯನ್ನು ಹೇಗೆ ಮ್ಯಾನೇಜ್ ಮಾಡಬೇಕು ಮತ್ತು ಹೈಕಮಾಂಡ್ ಕೋಪದಿಂದ ಹೇಗೆ ಪಾರಾಗಬೇಕು ಅನ್ನೋದರ ಬಗ್ಗೆಯೇ ಇಬ್ಬರ ನಡುವೆ ಭರ್ಜರಿ ಚರ್ಚೆ ನಡೆದಿದೆ ಎನ್ನಲಾಗಿದೆ.

ಸಿಎಂ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುತ್ತಿರುವ ಇಂತದ್ದೇ ಸಂಭ್ರಮದ ಸಮಯದಲ್ಲಿ ಜಮೀರ್ ಅವರ ಈ ಆಡಿಯೋ ವಿವಾದ ಕಾಂಗ್ರೆಸ್ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಚಿವ ಸ್ಥಾನದ ರೇಸ್‌ನಲ್ಲಿದ್ದ ಜಮೀರ್‌ಗೆ ಈ ಆಡಿಯೋ ಕುತ್ತು ತರುತ್ತಾ ಅನ್ನೋದನ್ನ ಕಾದು ನೋಡಬೇಕು!

Latest News