Apr 16, 2026 Languages : ಕನ್ನಡ | English

ಹಾಲಿಡೇ ಎಂಜಾಯ್ ಮಾಡೋಕೆ ಹೋಗಿಲ್ಲ - ಟೀಕಾಕಾರರ ಬಾಯಿ ಮುಚ್ಚಿಸಿದ ಸಚಿವ ಜಮೀರ್ ಅಹ್ಮದ್!!

ರಾಜಕೀಯ ಅಂದಮೇಲೆ ಆರೋಪ-ಪ್ರತ್ಯಾರೋಪಗಳು ಕಾಮನ್. ಆದರೆ ಸಚಿವ ಜಮೀರ್ ಅಹ್ಮದ್ ಖಾನ್ ವಿಷಯಕ್ಕೆ ಬಂದರೆ ಅಲ್ಲಿ ಸ್ವಲ್ಪ 'ಮಸಾಲೆ' ಜಾಸ್ತಿ ಇರುತ್ತೆ! ಇತ್ತೀಚೆಗೆ ದಾವಣಗೆರೆ ಪ್ರಚಾರದಿಂದ ದೂರ ಉಳಿದು ಕೇರಳಕ್ಕೆ ಹೋಗಿದ್ದ ಜಮೀರ್ ವಿರುದ್ಧ ಪಕ್ಷದ ಒಳಗೆ ಮತ್ತು ಹೊರಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಈ ಬಗ್ಗೆ ಈಗ ಜಮೀರ್ ಅಹ್ಮದ್ ಅವರೇ ನೇರವಾಗಿ ಮೌನ ಮುರಿದಿದ್ದು, ವಿರೋಧಿಗಳಿಗೆ ಸರಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ.

ಕೇರಳ ಪ್ರವಾಸದ ಅಸಲಿ ಸತ್ಯ ಬಿಚ್ಚಿಟ್ಟ ಜಮೀರ್
ಕೇರಳ ಪ್ರವಾಸದ ಅಸಲಿ ಸತ್ಯ ಬಿಚ್ಚಿಟ್ಟ ಜಮೀರ್

"ಹಾಲಿಡೇ ಎಂಜಾಯ್ ಮಾಡೋಕೆ ಹೋಗಿಲ್ಲ"

ತಮ್ಮ ವಿರುದ್ಧ ಕೇಳಿಬಂದ ಟೀಕೆಗಳಿಗೆ ಬಿಸಿಬಿಸಿ ಉತ್ತರ ಕೊಟ್ಟಿರುವ ಜಮೀರ್, "ನಾನೇನು ಕೇರಳಕ್ಕೆ ಮೋಜು-ಮಸ್ತಿ ಮಾಡೋಕೆ ಅಥವಾ ಕಳ್ಳಾಟ ಆಡೋಕೆ ಹೋಗಿರಲಿಲ್ಲ. ಎಐಸಿಸಿ ನಾಯಕ ಕೆ.ಸಿ. ವೇಣುಗೋಪಾಲ್ ಅವರ ಸೂಚನೆಯಂತೆ ಹಗಲು-ರಾತ್ರಿ ಪಾರ್ಟಿ ಕೆಲಸ ಮಾಡೋಕೆ ಹೋಗಿದ್ದೆ. ನಾನೇನಾದರೂ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಹಾಲಿಡೇ ಎಂಜಾಯ್ ಮಾಡೋಕೆ ಹೋಗಿದ್ದರೆ ಅದು ತಪ್ಪು. ಆದರೆ ನಾನು ದಿನಕ್ಕೆ 350 ಕಿಲೋಮೀಟರ್ ಪ್ರಯಾಣ ಮಾಡಿ ಕಷ್ಟಪಟ್ಟು ಪ್ರಚಾರ ಮಾಡಿದ್ದೇನೆ" ಎಂದು ಗುಡುಗಿದ್ದಾರೆ.

ಅಷ್ಟೇ ಅಲ್ಲದೆ, ತಮ್ಮ ಆತ್ಮವಿಶ್ವಾಸವನ್ನು ಪ್ರದರ್ಶಿಸಿರುವ ಅವರು, "ನನ್ನ ಹಣೆಬರಹ ಬರೆಯಲು ಯಾರಿಂದಲೂ ಸಾಧ್ಯವಿಲ್ಲ. ನನ್ನನ್ನು ಯಾರೂ ಟಾರ್ಗೆಟ್ ಮಾಡೋಕೆ ಆಗಲ್ಲ" ಎಂದು ಖಡಕ್ ಆಗಿ ಹೇಳಿದ್ದಾರೆ.

ಸಿಎಂ ಜೊತೆ ಒಂದು ಗಂಟೆ ಚರ್ಚೆ!

ದಾವಣಗೆರೆ ಪ್ರಚಾರಕ್ಕೆ ಹೋಗದ ವಿಚಾರವಾಗಿ ಹೈಕಮಾಂಡ್ ಅಥವಾ ಸಿಎಂ ಗರಂ ಆಗಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದಕ್ಕೆ ಸ್ಪಷ್ಟನೆ ನೀಡಿರುವ ಜಮೀರ್, "ಸಿಎಂ ಅವರ ಜೊತೆ ನಾನು ಒಂದು ಗಂಟೆ ಮಾತನಾಡಿದ್ದೇನೆ. ನಾನೇನು ತಪ್ಪು ಮಾಡಿಲ್ಲ. ಕೇರಳದಲ್ಲಿ ಕೆಲಸ ಮುಗಿಸಿ ಬಾಗಲಕೋಟೆಗೆ ಬಂದೆ, ದಾವಣಗೆರೆಗೂ ಹೋಗಿದ್ದೆ. ಎಲ್ಲಿಗೆ ಕರೆದರೂ ಪ್ರಚಾರಕ್ಕೆ ಹೋಗಲು ನಾನು ಸಿದ್ಧನಿದ್ದೇನೆ. ನಾಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಕೂಡ ಭೇಟಿ ಮಾಡುತ್ತೇನೆ" ಎಂದಿದ್ದಾರೆ.

ತಮಿಳುನಾಡು, ಕೃಷ್ಣಗಿರಿ ಮತ್ತು ಹೊಸೂರು ಕಡೆಯೂ ಪ್ರಚಾರಕ್ಕೆ ಬೇಡಿಕೆ ಇರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಆಪ್ತರ ತಲೆದಂಡಕ್ಕೆ ಬೇಸರ

ಇದೇ ವೇಳೆ ಜಮೀರ್ ಅವರ ಆಪ್ತರೆಂದೇ ಗುರುತಿಸಿಕೊಂಡಿದ್ದ ನಸೀರ್ ಅಹ್ಮದ್ ಅವರನ್ನು ಪಕ್ಷದ ಜವಾಬ್ದಾರಿಯಿಂದ ಕೈಬಿಟ್ಟಿರುವುದು ಜಮೀರ್ ಅವರಿಗೆ ಸಖತ್ ನೋವು ತಂದಿದೆ. "ನಸೀರ್ ಅಹ್ಮದ್ ಅವರು ಪಾರ್ಟಿಯಲ್ಲಿ ಬಹಳ ಹಿರಿಯರು. ಅವರಿಗೆ ಹೀಗಾಗಿದ್ದು ನನಗೂ ಬಹಳ ಬೇಸರ ತಂದಿದೆ. ಅವರನ್ನು ಸಮಾಧಾನ ಮಾಡಲು ನಾನು ಪ್ರಯತ್ನಿಸುತ್ತಿದ್ದೇನೆ" ಎಂದು ತಮ್ಮ ಆಪ್ತ ಗೆಳೆಯನ ಪರವಾಗಿ ಬ್ಯಾಟ್ ಬೀಸಿದ್ದಾರೆ.

"ನಾನು ಜಾತಿ ರಾಜಕಾರಣ ಮಾಡಿಲ್ಲ"

ತಮ್ಮ ವಿರುದ್ಧ ಕೇಳಿಬರುತ್ತಿರುವ ಪರೋಕ್ಷ ಟೀಕೆಗಳಿಗೆ ಉತ್ತರಿಸಿದ ಅವರು, "ನಾನು ಪಕ್ಷದ ಒಬ್ಬ ಸಾಮಾನ್ಯ ಸೇವಕ. ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ಯಾರಾದರೂ ನನ್ನ ಮೇಲೆ ಆರೋಪ ಮಾಡುವುದಿದ್ದರೆ ನೇರವಾಗಿ ನನ್ನ ಹೆಸರು ಹೇಳಿ ಮಾಡಲಿ, ಅದನ್ನು ಬಿಟ್ಟು ಸುಮ್ಮನೆ ಪರೋಕ್ಷವಾಗಿ ಮಾತನಾಡುವುದರಲ್ಲಿ ಅರ್ಥವಿಲ್ಲ" ಎಂದು ಸವಾಲು ಹಾಕಿದ್ದಾರೆ.

ಜಮೀರ್ ಅಹ್ಮದ್ ಸದ್ಯಕ್ಕೆ ಫುಲ್ ಫಾರ್ಮ್‌ನಲ್ಲಿದ್ದಾರೆ. ಅವರ ಕೇರಳ ಪ್ರವಾಸದ ಸುತ್ತ ಎದ್ದಿದ್ದ ವಿವಾದದ ಹುತ್ತಕ್ಕೆ ಅವರೇ ಈಗ ಕಲ್ಲು ಹೊಡೆದಿದ್ದಾರೆ. ಮುಂದಿನ ದಿನಗಳಲ್ಲಿ ದೋಸ್ತಿ ಮತ್ತು ಕಾಂಗ್ರೆಸ್ ನಡುವಿನ ಈ 'ಪ್ರಚಾರದ ಜಗಳ' ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕು.

Latest News