Apr 16, 2026 Languages : ಕನ್ನಡ | English

ಎತ್ತಿನಹೊಳೆ ಯೋಜನೆ ಬಂದ್ ಆಗುತ್ತಾ? ಸೆಸ್ಕಾಂ ಅಧಿಕಾರಿಗಳು ಮಾಡಿದ ಆ ಒಂದು ನಿರ್ಧಾರದಿಂದ ನಡುಗಿದ ಸರ್ಕಾರ!!

ರಾಜ್ಯದ ಪ್ರತಿಷ್ಠಿತ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಈಗ ಸುದ್ದಿಯಲ್ಲಿದೆ. ಆದರೆ ಇದು ನೀರು ಹರಿಸುವ ವಿಷಯಕ್ಕಲ್ಲ, ಬದಲಾಗಿ ಉರಿಸಿದ ಕರೆಂಟ್ ಬಿಲ್ ಪಾವತಿಸದ ಕಾರಣಕ್ಕೆ! ಹೌದು, ಎತ್ತಿನಹೊಳೆ ಯೋಜನೆಗೆ ವಿದ್ಯುತ್ ಪೂರೈಕೆ ಮಾಡಿರುವ ಸೆಸ್ಕಾಂ (CESC) ಸಂಸ್ಥೆಗೆ ಸರ್ಕಾರದಿಂದ ಬರಬೇಕಾದ ಬಾಕಿ ಮೊತ್ತ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ.

232 ಕೋಟಿ ರೂ. ಬಾಕಿ ಉಳಿಸಿಕೊಂಡ ಎತ್ತಿನಹೊಳೆ | Photo Credit: x - Dr H C Mahadevappa(Buddha Basava Ambedkar Parivar) @CMahadevappa
232 ಕೋಟಿ ರೂ. ಬಾಕಿ ಉಳಿಸಿಕೊಂಡ ಎತ್ತಿನಹೊಳೆ | Photo Credit: x - Dr H C Mahadevappa(Buddha Basava Ambedkar Parivar) @CMahadevappa

ಕೋಟ್ಯಂತರ ರೂಪಾಯಿ ಬಿಲ್ ಬಾಕಿ

ಎತ್ತಿನಹೊಳೆ ಯೋಜನೆಯಡಿ ಹಾನುಬಾಳ್ಳು, ದೊಡ್ಡನಗರ, ಕುಂಬಾರಡಿ ಸೇರಿದಂತೆ ಹಲವು ಕಡೆ ನೀರನ್ನು ಎತ್ತುವ (ಪಂಪಿಂಗ್) ಕೇಂದ್ರಗಳಿವೆ. ಈ ಬೃಹತ್ ಪಂಪ್‌ಗಳನ್ನು ನಡೆಸಲು ಭಾರೀ ಪ್ರಮಾಣದ ವಿದ್ಯುತ್ ಬೇಕು. ಆದರೆ, ಕಳೆದ ಹಲವು ತಿಂಗಳುಗಳಿಂದ ಈ ಕೇಂದ್ರಗಳ ವಿದ್ಯುತ್ ಬಿಲ್ ಪಾವತಿಯಾಗಿಲ್ಲ. ಸದ್ಯದ ಲೆಕ್ಕಾಚಾರದ ಪ್ರಕಾರ, ಸರ್ಕಾರ ಸೆಸ್ಕಾಂಗೆ ಬರೋಬ್ಬರಿ 232.11 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ!

ವಿಶೇಷ ಏನೆಂದರೆ, ಪ್ರತಿ ತಿಂಗಳು ಈ ಯೋಜನೆಗೆ ಸುಮಾರು 8 ಕೋಟಿ ರೂಪಾಯಿ ಕರೆಂಟ್ ಬಿಲ್ ಬರುತ್ತದೆ. ಅಂದರೆ, ದಿನ ಕಳೆದಂತೆ ಈ ಬಾಕಿ ಮೊತ್ತ ಬೆಟ್ಟದಂತೆ ಬೆಳೆಯುತ್ತಲೇ ಸಾಗಿದೆ.

ನೋಟಿಸ್ ಕೊಟ್ಟರೂ ಕೇರ್ ಮಾಡ್ತಿಲ್ಲ

ಸೆಸ್ಕಾಂ ಅಧಿಕಾರಿಗಳು ಈಗಾಗಲೇ ಈ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಿ ಇಂಧನ ಇಲಾಖೆಯ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ. ಸಂಬಂಧಪಟ್ಟ ಇಲಾಖೆಗಳಿಗೆ ನೋಟಿಸ್ ಕೂಡ ನೀಡಲಾಗಿದೆ. ಆದರೆ, ಸರ್ಕಾರದ ಕಡೆಯಿಂದ ಮಾತ್ರ ಸರಿಯಾದ ಸ್ಪಂದನೆ ಸಿಗುತ್ತಿಲ್ಲ.

ಸಾಮಾನ್ಯ ಜನರು ಒಂದು ತಿಂಗಳು ಕರೆಂಟ್ ಬಿಲ್ ಕಟ್ಟದಿದ್ದರೆ ತಕ್ಷಣ ಮನೆಗೆ ಬಂದು ವೈಯರ್ ಕಟ್ ಮಾಡುವ ಇಲಾಖೆ, ಇಲ್ಲಿ ಮಾತ್ರ ಅಸಹಾಯಕವಾಗಿದೆ. ಸೆಸ್ಕಾಂ ಇಂಜಿನಿಯರ್ ಕೃಷ್ಣಪ್ಪ ಅವರು ಹೇಳುವಂತೆ, "ಇದು ಸರ್ಕಾರದ ಯೋಜನೆಯಾದ್ದರಿಂದ ನಮಗೆ ವಿದ್ಯುತ್ ಕಡಿತ ಮಾಡುವ ಅಧಿಕಾರವಿಲ್ಲ. ನಾವು ಕೇವಲ ನೋಟಿಸ್ ನೀಡಬಹುದು ಮತ್ತು ಮೇಲಧಿಕಾರಿಗಳ ಗಮನಕ್ಕೆ ತರಬಹುದು ಅಷ್ಟೇ."

ಸೆಸ್ಕಾಂಗೆ ಆರ್ಥಿಕ ಸಂಕಷ್ಟ

ಕೇವಲ ಎತ್ತಿನಹೊಳೆ ಮಾತ್ರವಲ್ಲ, ಹೊಳೆನರಸೀಪುರ ಮತ್ತು ಚನ್ನರಾಯಪಟ್ಟಣ ಭಾಗದ ಏತ ನೀರಾವರಿ ಯೋಜನೆಗಳು, ಗ್ರಾಮ ಪಂಚಾಯಿತಿಗಳ ಬೀದಿ ದೀಪದ ಬಿಲ್‌ಗಳು ಕೂಡ ಬಾಕಿ ಇವೆ. ಇಷ್ಟೊಂದು ದೊಡ್ಡ ಮೊತ್ತದ ಹಣ ವಸೂಲಿಯಾಗದಿದ್ದರೆ ಸೆಸ್ಕಾಂ ಸಂಸ್ಥೆ ನಡೆಸುವುದೇ ಕಷ್ಟವಾಗುತ್ತಿದೆ. ಜನರ ತೆರಿಗೆ ಹಣದಿಂದ ನಡೆಯುವ ಇಂತಹ ಯೋಜನೆಗಳಲ್ಲಿ ಹಣಕಾಸಿನ ನಿರ್ವಹಣೆ ಇಷ್ಟೊಂದು ಹದಗೆಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ಯೋಜನೆಯ ಮೊದಲ ಹಂತಕ್ಕೆ ಚಾಲನೆ ನೀಡಿದ್ದರು. ಯೋಜನೆ ಉದ್ಘಾಟನೆಯಾಗಿ ನೀರು ಹರಿಯಲು ಶುರುವಾಗಿದೆ ನಿಜ, ಆದರೆ ಆ ನೀರನ್ನು ಎತ್ತಲು ಬೇಕಾದ ವಿದ್ಯುತ್‌ಗೆ ಹಣ ನೀಡುವವರು ಯಾರು ಎಂಬ ಪ್ರಶ್ನೆ ಈಗ ಎದುರಾಗಿದೆ.

ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಈ ಬಾಕಿ ಹಣವನ್ನು ಪಾವತಿಸದಿದ್ದರೆ, ಸೆಸ್ಕಾಂ ಸಂಸ್ಥೆ ದಿವಾಳಿಯಾಗುವ ಹಂತಕ್ಕೆ ತಲುಪಿದರೂ ಆಶ್ಚರ್ಯವಿಲ್ಲ.