ಯಲಹಂಕ ರೈಲು ನಿಲ್ದಾಣದಲ್ಲಿ ಬ್ಯಾಗ್ ಕಳೆದುಕೊಂಡ ಯುವಕ - ಬಳಿಕ ಆರ್‌ಪಿಎಫ್ ಸಿಬ್ಬಂದಿ ಹುಡುಕಿದ್ದೆ ರೋಚಕ!!

ಬೆಂಗಳೂರು ಯಲಹಂಕ ರೈಲು ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಕಳೆದುಕೊಂಡಿದ್ದ 19 ಲಕ್ಷ ರೂಪಾಯಿ ಮೌಲ್ಯದ ಆಭರಣ ಮತ್ತು ನಗದು ಇರುವ ಬ್ಯಾಗ್‌ನ್ನು ಆರ್‌ಪಿಎಫ್ ಸಿಬ್ಬಂದಿ ಪತ್ತೆಹಚ್ಚಿ ಹಿಂತಿರುಗಿಸಿದ ಘಟನೆ ನಡೆದಿದೆ. 2026ರ ಫೆಬ್ರವರಿ 8ರಂದು ರಾತ್ರಿ 8.35ಕ್ಕೆ ಪ್ರಯಾಣಿಕನೊಬ್ಬ ತನ್ನ ಕೆಂಪು ಬಣ್ಣದ ಟ್ರಾಲಿ ಬ್ಯಾಗ್‌ನ್ನು ನಿಲ್ದಾಣದಲ್ಲಿ ಕಳೆದುಕೊಂಡಿದ್ದ. ತಕ್ಷಣವೇ ಆತ “ರೈಲ್ ಮದದ್” ಆಪ್ ಮೂಲಕ ದೂರು ಸಲ್ಲಿಸಿದ್ದ.

ಪ್ರಯಾಣಿಕರ ಸುರಕ್ಷತೆಗೆ ಸಾಕ್ಷಿಯಾದ ಆರ್‌ಪಿಎಫ್ ಸಿಬ್ಬಂದಿಯ ಕಾರ್ಯನಿಷ್ಠೆ!!
ಪ್ರಯಾಣಿಕರ ಸುರಕ್ಷತೆಗೆ ಸಾಕ್ಷಿಯಾದ ಆರ್‌ಪಿಎಫ್ ಸಿಬ್ಬಂದಿಯ ಕಾರ್ಯನಿಷ್ಠೆ!!

ಆರ್‌ಪಿಎಫ್ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ನಿಲ್ದಾಣದ 1ನೇ ಪ್ಲಾಟ್‌ಫಾರ್ಮ್‌ನಲ್ಲಿ ಶೋಧ ನಡೆಸಿದರು. ಅಲ್ಲಿ ವಾರಸುದಾರರಿಲ್ಲದ ಕೆಂಪು ಬಣ್ಣದ ಟ್ರಾಲಿ ಬ್ಯಾಗ್ ಪತ್ತೆಯಾಯಿತು. ಅದನ್ನು ಸುರಕ್ಷಿತವಾಗಿ ಆರ್‌ಪಿಎಫ್ ಪೋಸ್ಟ್‌ಗೆ ತರಲಾಯಿತು. ಬ್ಯಾಗ್ ಪರಿಶೀಲಿಸಿದಾಗ ಸುಮಾರು 17 ಲಕ್ಷ ರೂಪಾಯಿ ಮೌಲ್ಯದ 100 ಗ್ರಾಂ ಚಿನ್ನಾಭರಣಗಳು ಹಾಗೂ 2 ಲಕ್ಷ ರೂಪಾಯಿ ನಗದು ಪತ್ತೆಯಾಯಿತು. ನಂತರ ದೂರು ಸಲ್ಲಿಸಿದವರ ರೈಲ್ ಮದದ್ ಉಲ್ಲೇಖದ ವಿವರಗಳು ಮತ್ತು ಆಧಾರ್ ಕಾರ್ಡ್ ಪರಿಶೀಲಿಸಿ, ಸೂಕ್ತ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಿ ಬ್ಯಾಗ್ ಹಿಂತಿರುಗಿಸಲಾಯಿತು.

ಆರ್‌ಪಿಎಫ್ ಸಿಬ್ಬಂದಿಯ ತ್ವರಿತ ಮತ್ತು ಪ್ರಾಮಾಣಿಕ ಕ್ರಮವು ಪ್ರಯಾಣಿಕನ ಮೆಚ್ಚುಗೆಗೆ ಪಾತ್ರವಾಗಿದೆ. ಈ ಘಟನೆ ರೈಲು ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿಯ ಎಚ್ಚರಿಕೆ ಮತ್ತು ನಿಷ್ಠೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದೆ. ಯಲಹಂಕ ನಿಲ್ದಾಣದಲ್ಲಿ ನಡೆದ ಈ ಘಟನೆ, ಪ್ರಯಾಣಿಕರ ಸುರಕ್ಷತೆ ಮತ್ತು ನಂಬಿಕೆಯನ್ನು ಹೆಚ್ಚಿಸುವುದರ ಜೊತೆಗೆ ಆರ್‌ಪಿಎಫ್ ಸಿಬ್ಬಂದಿಯ ಕಾರ್ಯನಿಷ್ಠೆಗೆ ಸಾಕ್ಷಿಯಾಗಿದೆ. 

Latest News