ಖಾಸಗಿ ಕಾರ್ಯಕ್ರಮಗಳ ನೆಪ, ರಾಜಕೀಯದ ಜಪ - ರಾಯಚೂರಿನಲ್ಲಿ ಯತೀಂದ್ರ ಸಿದ್ದರಾಮಯ್ಯ ಬಿತ್ತಿದ್ರಾ ಹೊಸ ದಾಳ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಅವರು ಇತ್ತೀಚೆಗೆ ರಾಯಚೂರು ಜಿಲ್ಲೆಯನ್ನೇ ತಮ್ಮ ಸೆಂಟರ್ ಪಾಯಿಂಟ್ ಮಾಡಿಕೊಂಡ ಹಾಗೆ ಕಾಣ್ತಿದೆ. ಕಳೆದ ಕೇವಲ ಒಂದು ತಿಂಗಳಲ್ಲೇ ಬರೋಬ್ಬರಿ ನಾಲ್ಕು ಬಾರಿ ರಾಯಚೂರಿಗೆ ಭೇಟಿ ನೀಡಿರೋದು ಈಗ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ರಾಯಚೂರು, ಸಿಂಧನೂರು ಅಂತ ಸದ್ದಿಲ್ಲದೆ ರೌಂಡ್ಸ್ ಹಾಕ್ತಿರೋ ಯತೀಂದ್ರ ಅವರ ಈ ನಿರಂತರ ಪ್ರವಾಸದ ಹಿಂದೆ ದೊಡ್ಡ ರಾಜಕೀಯ ಗೇಮ್ ಪ್ಲಾನ್ ಇದೆಯಾ ಅನ್ನೋ ಕುತೂಹಲ ಎಲ್ಲರಲ್ಲೂ ಶುರುವಾಗಿದೆ.

ವರುಣಾ ಬಿಟ್ಟು ರಾಯಚೂರಿಗೆ ಬರ್ತಾರಾ ಜೂನಿಯರ್ ಸಿದ್ದರಾಮಯ್ಯ
ವರುಣಾ ಬಿಟ್ಟು ರಾಯಚೂರಿಗೆ ಬರ್ತಾರಾ ಜೂನಿಯರ್ ಸಿದ್ದರಾಮಯ್ಯ

ಖಾಸಗಿ ಕಾರ್ಯಕ್ರಮಗಳ ನೆಪ, ರಾಜಕೀಯದ ಜಪ?
ಯತೀಂದ್ರ ಅವರು ಜಿಲ್ಲೆಗೆ ಬರ್ತಿರೋದು ಮದುವೆ, ಮುಂಜಿ, ಗೃಹಪ್ರವೇಶದಂಥ ಖಾಸಗಿ ಕಾರ್ಯಕ್ರಮಗಳಿಗೆ ಅನ್ನೋದು ಮೇಲ್ನೋಟಕ್ಕೆ ಕಾಣುವ ವಿಚಾರ. ಆದರೆ ರಾಜಕಾರಣದಲ್ಲಿ ಯಾವುದೂ ಸುಮ್ಮನೆ ಆಗಲ್ಲ ಅಲ್ವಾ? ಕಳೆದ ಒಂದು ತಿಂಗಳಲ್ಲಿ ಮೂರ್ನಾಲ್ಕು ಬಾರಿ ರಾಯಚೂರು ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿ ಸ್ಥಳೀಯರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಮುಂದಿನ ತಿಂಗಳು ಜಿಲ್ಲೆಯಲ್ಲಿ ನಡೆಯಲಿರುವ ಕುರುಬ ಸಮಾಜದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೂ ಅವರು ಮುಖ್ಯ ಅತಿಥಿಯಾಗಿ ಬರುವ ಸಾಧ್ಯತೆ ದಟ್ಟವಾಗಿದೆ. ಈ ಸರಣಿ ಭೇಟಿಗಳು ಬರೀ ಸೌಜನ್ಯದ ಭೇಟಿಗಳಂತೂ ಖಂಡಿತ ಅಲ್ಲ ಅನ್ನೋದು ಸ್ಥಳೀಯ ನಾಯಕರ ಪಿಸುಮಾತು.

ಕುರುಬ ಸಮಾಜದ ವೋಟ್ ಬ್ಯಾಂಕ್ ಮತ್ತು ಕಲ್ಯಾಣ ಕರ್ನಾಟಕದ ಕನೆಕ್ಷನ್
ರಾಯಚೂರು ಜಿಲ್ಲೆಯಲ್ಲಿ ಕುರುಬ ಸಮಾಜದ ಜನಸಂಖ್ಯೆ ತುಂಬಾ ಹೆಚ್ಚಾಗಿದೆ. ಅಪ್ಪ ಸಿದ್ದರಾಮಯ್ಯ ಅವರಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ, ಅದರಲ್ಲೂ ವಿಶೇಷವಾಗಿ ರಾಯಚೂರಿನಲ್ಲಿ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ಸಿಎಂ ಸಿದ್ದರಾಮಯ್ಯ ಅವರನ್ನ ಈ ಭಾಗದ ಜನ ಎಷ್ಟು ಪ್ರೀತಿ ಮಾಡ್ತಾರೋ, ಈಗ ಅದೇ ಪ್ರೀತಿ ಮತ್ತು ಮಮತೆಯನ್ನ ಮಗ ಯತೀಂದ್ರ ಅವರ ಮೇಲೂ ತೋರಿಸುತ್ತಿದ್ದಾರೆ. ಹೋದ ಕಡೆಯಲ್ಲೆಲ್ಲಾ ಯತೀಂದ್ರ ಅವರಿಗೆ ಜನರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿರುವುದು ಇದಕ್ಕೆ ಸಾಕ್ಷಿ. ಸಮಾಜದ ಜನರನ್ನು ಒಗ್ಗೂಡಿಸುವ ಮತ್ತು ಅವರ ಬೆಂಬಲವನ್ನು ಗಟ್ಟಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಯತೀಂದ್ರ ಈ ಭಾಗಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎನ್ನಲಾಗಿದೆ.

ವರುಣಾ ಬಿಟ್ಟು ರಾಯಚೂರಿಗೆ ಬರ್ತಾರಾ ಜೂನಿಯರ್ ಸಿದ್ದರಾಮಯ್ಯ?
ಈಗ ಎಲ್ಲರ ತಲೆಯಲ್ಲಿ ಓಡ್ತಿರೋ ಅಸಲಿ ಪ್ರಶ್ನೆ ಇದೇ! ಮುಂದಿನ ಚುನಾವಣೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ಹಳೇ ಕ್ಷೇತ್ರ ವರುಣಾ ಜೊತೆಗೆ ರಾಯಚೂರಿನ ಯಾವುದಾದರೂ ಒಂದು ಕ್ಷೇತ್ರವನ್ನು ಆಯ್ದುಕೊಳ್ಳುತ್ತಾರಾ? ಹೌದು, ಸದ್ಯಕ್ಕೆ ರಾಜಕೀಯ ವಲಯದಲ್ಲಿ ಇಂಥದ್ದೊಂದು ಜೋರು ಚರ್ಚೆ ನಡೀತಿದೆ.

ಸ್ಥಳೀಯರ ಲೆಕ್ಕಾಚಾರ: "ಅಪ್ಪನಿಗೆ ರಾಜಕೀಯ ಮರುಜನ್ಮ ನೀಡಿದ ಬಾದಾಮಿ ತರಹ, ಮಗನಿಗೂ ಉತ್ತರ ಕರ್ನಾಟಕ ಅಥವಾ ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಂದು ಸೇಫ್ ಸೀಟ್ ರೆಡಿ ಮಾಡಿಕೊಳ್ಳುವ ತಂತ್ರಗಾರಿಕೆ ಇರಬಹುದು."

ಚುನಾವಣಾ ದೃಷ್ಟಿಯಿಂದಲೇ ಯತೀಂದ್ರ ಅವರು ರಾಯಚೂರು ಜಿಲ್ಲೆಯ ಮೇಲೆ ಇಷ್ಟೊಂದು ಆಸಕ್ತಿ ತೋರಿಸುತ್ತಿದ್ದಾರೆ, ಇಲ್ಲಿಂದಲೇ ಮುಂದಿನ ಭವಿಷ್ಯದ ರಾಜಕೀಯ ದಾಳ ಉರುಳಿಸಲು ತಯಾರಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಹೆಚ್ಚಿದ ಕುತೂಹಲ, ನಾಯಕರಲ್ಲಿ ನಡುಕ!
ಯತೀಂದ್ರ ಅವರ ಮೇಲಿಂದ ಮೇಲಿನ ರಾಯಚೂರು ಪ್ರವಾಸ ಕೇವಲ ಸಾರ್ವಜನಿಕರಲ್ಲಿ ಮಾತ್ರವಲ್ಲ, ಸ್ಥಳೀಯ ರಾಜಕಾರಣಿಗಳಲ್ಲೂ ಸಣ್ಣದೊಂದು ನಡುಕ ಹುಟ್ಟಿಸಿದೆ. ಯತೀಂದ್ರ ಅವರು ಇಲ್ಲಿಂದ ಸ್ಪರ್ಧೆ ಮಾಡ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ಅವರ ಈ ಹೈಪರ್ ಆಕ್ಟಿವ್ ಮೂವ್‌ಮೆಂಟ್‌ನಿಂದಾಗಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಹೊಸ ಕಳೆ ಬಂದಿರುವುದಂತೂ ನಿಜ.

ಒಟ್ಟಿನಲ್ಲಿ, ಸಿಎಂ ಪುತ್ರನ ರಾಯಚೂರು ಸವಾರಿ ಸದ್ಯಕ್ಕಂತೂ ಕಲ್ಯಾಣ ಕರ್ನಾಟಕದ ರಾಜಕೀಯ ಅಖಾಡದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಮುಂದಿನ ದಿನಗಳಲ್ಲಿ ಈ 'ರಾಯಚೂರು ಕನೆಕ್ಷನ್' ಯಾವ ತಿರುವು ಪಡೆದುಕೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ!

Latest News

Related News