May 6, 2026 Languages : ಕನ್ನಡ | English

ಖಾಕಿ ಲವ್ ಸ್ಟೋರಿ ಈಗ ಪೊಲೀಸ್ ಸ್ಟೇಷನ್ ಮೆಟ್ಟಿಲಿಗೆ - ಲೇಡಿ ಕಾನ್ಸ್ಟೇಬಲ್ ಮೇಲೆ PSI ಗಂಭೀರ ಆರೋಪ!!

ಪೊಲೀಸ್ ಇಲಾಖೆ ಅಂದ್ರೆ ಅಲ್ಲಿ ಶಿಸ್ತು, ಕಾನೂನು ಎಲ್ಲವೂ ಇರುತ್ತೆ. ಆದ್ರೆ ಅದೇ ಇಲಾಖೆಯ ಒಳಗಡೆ ಇಂತಹದೊಂದು ಸಿನಿಮೀಯ ಮಾದರಿಯ ಪ್ರೇಮ ಕಥೆ ನಡೀತಿದೆ ಅಂದ್ರೆ ಯಾರೂ ನಂಬಲಿಕ್ಕೆ ಸಾಧ್ಯವಿಲ್ಲ. ಎಂಟು ವರ್ಷಗಳ ಕಾಲ ಪ್ರೀತಿಸಿ, ಸಂಸಾರ ನಡೆಸಿ, ಈಗ ಮದುವೆ ಮಂಟಪ ಏರಲು ಸಿದ್ಧವಾಗಿರುವ ಮಹಿಳಾ ಪೇದೆಯ ವಿರುದ್ಧ ಪಿಎಸ್ಐ (PSI) ಒಬ್ಬರು ಕಣ್ಣೀರಿಡುತ್ತಾ ನ್ಯಾಯ ಕೇಳಲು ಬಂದಿದ್ದಾರೆ.

ಯಾದಗಿರಿ ಪಿಎಸ್ಐ ವೀರೇಶ್ ಕಣ್ಣೀರಿನ ಕಥೆ
ಯಾದಗಿರಿ ಪಿಎಸ್ಐ ವೀರೇಶ್ ಕಣ್ಣೀರಿನ ಕಥೆ

ಏನಿದು ಎಂಟು ವರ್ಷಗಳ 'ಸೀಕ್ರೆಟ್' ಕಹಾನಿ?

ಈ ಕಥೆಯ ನಾಯಕ ಪಿಎಸ್ಐ ವೀರೇಶ್ ಮತ್ತು ನಾಯಕಿ ಮಹಿಳಾ ಪೇದೆ ಜಯಶ್ರೀ (ಹೆಸರು ಬದಲಾಯಿಸಲಾಗಿದೆ). ಇಬ್ಬರೂ ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನವರು. ವೀರೇಶ್ ಅವರು ರಾಯಚೂರಿನಲ್ಲಿ ಪಿಎಸ್ಐ ಆಗಿದ್ದಾಗ ಈ ಪ್ರೇಮ ಸಲ್ಲಾಪ ಶುರುವಾಗಿತ್ತು. ವೀರೇಶ್ ಅವರ ಹೇಳಿಕೆಯ ಪ್ರಕಾರ, ಇವರಿಬ್ಬರ ನಡುವೆ ಕಳೆದ ಎಂಟು ವರ್ಷಗಳಿಂದ ಸಂಬಂಧವಿದೆ. "ನಾವಿಬ್ಬರೂ ಒಂದೇ ರೂಮ್‌ನಲ್ಲಿ ಗಂಡ-ಹೆಂಡತಿಯಂತೆ ಇದ್ದೆವು, ನಮ್ಮ ನಡುವೆ ದೈಹಿಕ ಸಂಪರ್ಕವೂ ಇತ್ತು" ಎಂದು ವೀರೇಶ್ ಬಹಿರಂಗವಾಗಿಯೇ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಆದರೆ ಈಗ ಟ್ವಿಸ್ಟ್ ಅಂದ್ರೆ, ಇದೇ ತಿಂಗಳ 7ನೇ ತಾರೀಖಿನಂದು ಈ ಮಹಿಳಾ ಪೇದೆಗೆ ಬೇರೊಬ್ಬನ ಜೊತೆ ಮದುವೆ ಫಿಕ್ಸ್ ಆಗಿದೆ. ಇದನ್ನ ಕೇಳಿದ ಪಿಎಸ್ಐ ವೀರೇಶ್ ಅವರಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ.

"35 ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ!"

ವೀರೇಶ್ ಅವರ ಆರೋಪ ಕೇವಲ ಪ್ರೀತಿಯ ಬಗ್ಗೆ ಮಾತ್ರವಲ್ಲ, ಹಣದ ವಿಷಯದಲ್ಲೂ ಇದೆ. "ಅವಳಿಗಾಗಿ, ಅವಳ ಆಸೆಗಳಿಗಾಗಿ ನಾನು ಬರೋಬ್ಬರಿ 35 ಲಕ್ಷದ 75 ಸಾವಿರ ರೂಪಾಯಿ ಖರ್ಚು ಮಾಡಿದ್ದೇನೆ. ಅವಳೇ ನನ್ನ ಹೆಂಡತಿ ಅಂತ ನಾನು ಎಲ್ಲೂ ಓಡಾಡುತ್ತಿದ್ದೆ. ಆದರೆ ಈಗ ಅವಳ ಮನೆಯವರು ನನ್ನ ಬಗ್ಗೆ ಕೆಟ್ಟದಾಗಿ ಹೇಳಿ, ಅವಳನ್ನು ನನ್ನಿಂದ ದೂರ ಮಾಡಿದ್ದಾರೆ" ಎಂದು ಅವರು ನೋವು ತೋಡಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ತನ್ನ ಗಮನಕ್ಕೆ ತರದೆ ಅಬಾರ್ಷನ್ ಮಾಡಿಸಿಕೊಂಡಿದ್ದಾಳೆ ಎಂಬ ಗಂಭೀರ ಆರೋಪವನ್ನೂ ವೀರೇಶ್ ಮಾಡಿದ್ದಾರೆ. "ನನಗೆ ಅವಳು ಬೇಕೇ ಬೇಕು, ಅವಳು ಬೇರೆಯವರ ಜೊತೆ ಮದುವೆಯಾಗುವುದನ್ನು ತಡೆಯಿರಿ" ಎಂದು ಅವರು ಅಧಿಕಾರಿಗಳ ಮುಂದೆ ಬೇಡಿಕೊಂಡಿದ್ದಾರೆ.

ಮದುವೆ ಮಂಟಪದ ಹೊಸ್ತಿಲಲ್ಲಿ ಹೈಡ್ರಾಮಾ!

ಇನ್ನೇನು ಎರಡು ದಿನಗಳಲ್ಲಿ ಮದುವೆ ನಡೆಯಬೇಕಿದೆ. ಮದುವೆಯ ಸಂಭ್ರಮದಲ್ಲಿ ಇರಬೇಕಾದ ಮಹಿಳಾ ಪೇದೆಗೆ ಈಗ ಈ ಪಿಎಸ್ಐ ಆರೋಪ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಎಂಟು ವರ್ಷಗಳ ಕಾಲ ಜೊತೆಗಿದ್ದು, ಈಗ ಸದ್ದಿಲ್ಲದೆ ಬೇರೆಯವರ ಜೊತೆ ಮದುವೆಗೆ ರೆಡಿಯಾಗಿದ್ದಾಳೆ ಎಂಬುದು ವೀರೇಶ್ ಅವರ ವಾದ.

ಇತ್ತ ಪಿಎಸ್ಐ ವೀರೇಶ್ ಅವರು ತನಗಾದ ಅನ್ಯಾಯಕ್ಕೆ ನ್ಯಾಯ ಬೇಕು ಎಂದು ಪಟ್ಟು ಹಿಡಿದಿದ್ದಾರೆ. "ನನ್ನ ಜೊತೆ ಇರುವುದಾಗಿ ಮಾತು ಕೊಟ್ಟು ಈಗ ಕೈಕೊಟ್ಟಿದ್ದಾಳೆ" ಎಂದು ಅವರು ಪ್ರತಿಯೊಂದು ವೇದಿಕೆಯಲ್ಲೂ ಹೇಳ್ತಿದ್ದಾರೆ. ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ಪೊಲೀಸ್ ವಲಯದಲ್ಲಿ ಈಗ ಇದೇ ದೊಡ್ಡ ಸುದ್ದಿಯಾಗಿದೆ.

ಪ್ರೀತಿ, ಪ್ರೇಮ ಅನ್ನೋದು ವೈಯಕ್ತಿಕ ವಿಷಯವಾದರೂ, ಇಲ್ಲಿ ಹಣದ ವ್ಯವಹಾರ ಮತ್ತು ನಂಬಿಕೆ ದ್ರೋಹದ ಆರೋಪ ಕೇಳಿಬಂದಿದೆ. ಅಧಿಕಾರಿಗಳೇ ಹೀಗೆ ಬೀದಿಗೆ ಬಂದು ಕಿತ್ತಾಡುತ್ತಿರುವುದು ಇಲಾಖೆಗೆ ಮುಜುಗರ ತಂದಿದೆ. ಮದುವೆ ನಿಲ್ಲುತ್ತಾ? ಅಥವಾ ಪಿಎಸ್ಐ ವೀರೇಶ್ ಅವರಿಗೆ ನ್ಯಾಯ ಸಿಗುತ್ತಾ? ಅನ್ನೋದನ್ನ ಕಾದು ನೋಡಬೇಕು.

"ಖಾಕಿ" ಹಾಕಿದವರ ಬಾಳಲ್ಲೂ ಇಂತಹ "ಕಣ್ಣೀರಿನ ಕಥೆ" ಇರುತ್ತೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಪ್ರೀತಿ ಮಾಡುವಾಗ ಇದ್ದ ಆಪ್ತತೆ, ಈಗ ಆರೋಪ-ಪ್ರತ್ಯಾರೋಪಗಳ ರೂಪ ಪಡೆದು ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದೆ.

Latest News