Feb 16, 2026 Languages : ಕನ್ನಡ | English

ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಆರ್ ಸಿಬಿ ಎದುರಿಸಲಿರುವ ಹರ್ಮನ್ ಪಡೆ - ಗೆದ್ದು ಫೈನಲ್ ಗೆ ಹೋಗುತ್ತಾ ಆರ್ ಸಿಬಿ?

ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಮೋಘ ಪ್ರದರ್ಶನ ನೀಡುತ್ತಿದ್ದು, ಲೀಗ್ ಹಂತದಲ್ಲಿ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಸೋಮವಾರ ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಮೃತಿ ಮಂಧಾನ ಪಡೆ ಜಯ ಸಾಧಿಸಿದರೆ, ನೇರವಾಗಿ ಫೈನಲ್‌ಗೆ ಪ್ರವೇಶಿಸುವ ಅವಕಾಶವನ್ನು ಪಡೆಯಲಿದೆ. ಮುಂಬೈ ಇಂಡಿಯನ್ಸ್ ಪಾಲಿಗೆ ಇದು ಮಾಡು ಇಲ್ಲವೆ ಮಡಿ ಪಂದ್ಯವಾಗಿದ್ದು, ಗೆಲುವು ಸಾಧಿಸಿದರೆ ಮುಂದಿನ ಹಂತದ ಕನಸು ಜೀವಂತವಾಗಲಿದೆ.

ಆರ್‌ಸಿಬಿ vs ಮುಂಬೈ ಇಂಡಿಯನ್ಸ್ ಮಹತ್ವದ ಪಂದ್ಯ ಇಂದು
ಆರ್‌ಸಿಬಿ vs ಮುಂಬೈ ಇಂಡಿಯನ್ಸ್ ಮಹತ್ವದ ಪಂದ್ಯ ಇಂದು

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸತತ ಮೂರು ಸೋಲುಗಳನ್ನು ಕಂಡು, ಗೆಲುವಿನ ಹಳಿಗೆ ಮರಳಲು ಹೊಸ ತಂತ್ರ ರೂಪಿಸಿದೆ. ಆರ್‌ಸಿಬಿ ಕಳೆದ ಪಂದ್ಯದಲ್ಲಿ ಸೋತಿದ್ದರೂ, ಈಗಾಗಲೇ 6 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಮುಂಬೈ ತಂಡ ಈ ಪಂದ್ಯದಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಕಾಣುತ್ತಿದೆ.

ಆರ್‌ಸಿಬಿ ತಂಡ ತನ್ನ ಏಳನೇ ಪಂದ್ಯದಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸುವುದು ಅತ್ಯಗತ್ಯ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮಾಡಿದ ತಪ್ಪುಗಳನ್ನು ಸರಿಪಡಿಸಿ ಆಡಿದರೆ ಜಯ ಸಾಧಿಸುವ ಸಾಧ್ಯತೆ ಹೆಚ್ಚಿದೆ. ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧಾನ ಮತ್ತು ಗ್ರೇಸ್ ಹ್ಯಾರಿಸ್ ಭರ್ಜರಿ ಜೊತೆಯಾಟ ನೀಡಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ನಾಡಿನ್ ಡಿ ಕ್ಲರ್ಕ್, ರಾಧಾ ಯಾದವ್, ರಿಚಾ ಘೋಷ್ ತಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ತಕ್ಕಂತೆ ಬ್ಯಾಟ್ ಮಾಡಬೇಕಿದೆ. ಬೌಲರ್‌ಗಳು ಬಿಗುವಿನ ದಾಳಿ ನಡೆಸಿ ಎದುರಾಳಿಗಳನ್ನು ಒತ್ತಡಕ್ಕೆ ತಳ್ಳುವುದು ಅಗತ್ಯ.

ವಡೋದರಾದ ಕೋಟಂಬಿ ಕ್ರೀಡಾಂಗಣದ ಪಿಚ್ ಕಡಿಮೆ ಬೌನ್ಸ್ ಹೊಂದಿದ್ದು, ಬೌಲರ್‌ಗಳಿಗೆ ಅನುಕೂಲ ನೀಡುತ್ತದೆ. ವಿಶೇಷವಾಗಿ ಸ್ಪಿನ್ ಬೌಲರ್‌ಗಳಿಗೆ ಸಹಾಯವಾಗುವ ಸಾಧ್ಯತೆ ಇದೆ. ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಮಾಡುವುದು ಉತ್ತಮ ನಿರ್ಧಾರವಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಗ್ರೇಸ್ ಹ್ಯಾರಿಸ್, ಸ್ಮೃತಿ ಮಂಧಾನ, ಜಾರ್ಜಿಯಾ ವೋಲ್, ಗೌತಮಿ ನಾಯಕ್, ರಿಚಾ ಘೋಷ್, ರಾಧಾ ಯಾದವ್, ನಾಡಿನ್ ಡಿ ಕ್ಲರ್ಕ್, ಪೂಜಾ ವಸ್ತ್ರಾಕರ್/ಸಾಯಲಿ ಸತ್ಗರೆ, ಅರುಂಧತಿ ರೆಡ್ಡಿ, ಶ್ರೇಯಾಂಕ ಪಾಟೀಲ್ ಮತ್ತು ಲಾರೆನ್ ಬೆಲ್ ಇರಬಹುದು. ಮುಂಬೈ ಇಂಡಿಯನ್ಸ್ ತಂಡದಲ್ಲಿ ಹೇಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್, ಅಮೆಲಿಯಾ ಕೆರ್/ನಿಕೋಲಾ ಕೇರಿ ಸೇರಿದಂತೆ ಬದಲಾವಣೆಗಳ ಸಾಧ್ಯತೆ ಇದೆ.

ಮಹಿಳಾ ಪ್ರೀಮಿಯರ್ ಲೀಗ್‌ನ 16ನೇ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಹಾಗೂ ಆನ್‌ಲೈನ್‌ನಲ್ಲಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ನೀವು ವೀಕ್ಷಿಸಬಹುದು. ಪಂದ್ಯ ಇಂದು ಸಂಜೆ 7.30ಕ್ಕೆ ಆರಂಭವಾಗಲಿದ್ದು, ಟಾಸ್ ಅರ್ಧ ಗಂಟೆ ಮೊದಲು ನಡೆಯಲಿದೆ.

Latest News