ಬಡ ಬಾಲಕಿಯ ಬ್ಯಾಂಕ್ ಖಾತೆಗೆ ಜಮೆಯಾಯ್ತು ಬರೋಬ್ಬರಿ 759 ಕೋಟಿ ರೂ. - ಇಡೀ ಜಿಲ್ಲೆಯೇ ದಂಗು!!

ಬಡತನದ ಬೇಗೆಯಲ್ಲಿ ಬೆಳೆಯುತ್ತಿರುವ ಆ ಕುಟುಂಬಕ್ಕೆ ಪ್ರತಿ ತಿಂಗಳು ಬರುವ ಕೆಲವು ನೂರು ರೂಪಾಯಿಗಳ ಸ್ಕಾಲರ್‌ಶಿಪ್ ಹಣವೇ ದೊಡ್ಡ ಆಸರೆ. ಮಕ್ಕಳ ಶಾಲಾ ವೆಚ್ಚ, ಪುಸ್ತಕ, ಬಟ್ಟೆಗಳಿಗಾಗಿ ಆ ಹಣವನ್ನೇ ಆ ತಾಯಿ ನಂಬಿಕೊಂಡಿರುತ್ತಾರೆ. ಆದರೆ, ಎಂದಿನಂತೆ ಕೇವಲ 900 ರೂಪಾಯಿ ಸ್ಕಾಲರ್‌ಶಿಪ್ ಹಣವನ್ನು ಡ್ರಾ ಮಾಡಲು ಎಟಿಎಂ ಕೇಂದ್ರಕ್ಕೆ ತೆರಳಿದ್ದ ಬಾಲಕಿಗೆ ಕಾದಿತ್ತು ಜನ್ಮದಲ್ಲೇ ಮರೆಯಲಾಗದ ಅಚ್ಚರಿ! ಆಕೆಯ ಬ್ಯಾಂಕ್ ಖಾತೆಯಲ್ಲಿ ಕಾಣಿಸುತ್ತಿದ್ದ ಮೊತ್ತ ಒಂದಲ್ಲ, ಎರಡಲ್ಲ. ಬರೋಬ್ಬರಿ 759 ಕೋಟಿ ರೂಪಾಯಿ!

ಕೂಚ್ ಬಿಹಾರ್‌ನಲ್ಲಿ ಬ್ಯಾಂಕ್ ಸರ್ವರ್ ಪವಾಡ | Photo Credit: CANVA
ಕೂಚ್ ಬಿಹಾರ್‌ನಲ್ಲಿ ಬ್ಯಾಂಕ್ ಸರ್ವರ್ ಪವಾಡ | Photo Credit: CANVA

ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ಜಿಲ್ಲೆಯಲ್ಲಿ ನಡೆದಿರುವ ಈ ರೋಚಕ ಹಾಗೂ ಅಷ್ಟೇ ಆತಂಕಕಾರಿ ಘಟನೆ ಈಗ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ. ತಾಂತ್ರಿಕ ದೋಷವೋ ಅಥವಾ ಮತ್ಯಾವುದೋ ಗಲಿಬಿಲಿಯೋ, ಒಟ್ಟಿನಲ್ಲಿ ರಾತ್ರೋರಾತ್ರಿ ಬಡ ಬಾಲಕಿಯೊಬ್ಬಳು ಕಾಗದದ ಮೇಲೆ ಕೋಟ್ಯಧಿಪತಿಯಾದ ಕಥೆ ಇದು.

ಕಡು ಬಡತನದಲ್ಲಿ ಅರಳಿದ ಪ್ರತಿಭೆ; ಶೂ ಖರೀದಿಸಲು ಕಾಯುತ್ತಿದ್ದ ಬಾಲಕಿ

ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ಜಿಲ್ಲೆಯ ಅತ್ಯಂತ ಹಿಂದುಳಿದ ಹಳ್ಳಿಯೊಂದರಲ್ಲಿ ಈ ಬಡ ಕುಟುಂಬ ವಾಸಿಸುತ್ತಿದೆ. ಕುಟುಂಬದ ಆರ್ಥಿಕ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ತಂದೆ ಹೊಟ್ಟೆಪಾಡಿಗಾಗಿ ದೂರದ ಕೇರಳಕ್ಕೆ ವಲಸೆ ಹೋಗಿ ಅಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ಇತ್ತ ತಾಯಿ ಕೂಡ ಸ್ಥಳೀಯವಾಗಿ ಸಿಗುವ ಸಣ್ಣಪುಟ್ಟ ಕೂಲಿ ಕೆಲಸಗಳನ್ನು ಮಾಡಿಕೊಂಡು ಇಬ್ಬರು ಮಕ್ಕಳನ್ನು ಸಾಕುತ್ತಿದ್ದಾರೆ. ದಿನದ ಮೂರು ಹೊತ್ತಿನ ಊಟವನ್ನು ಹೊಂದಿಸುವುದೇ ಈ ಕುಟುಂಬಕ್ಕೆ ದೊಡ್ಡ ಸವಾಲು.

ಇಂತಹ ಕಡು ಬಡತನದ ನಡುವೆಯೂ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂದು ತಾಯಿ ಶ್ರಮಿಸುತ್ತಿದ್ದಾರೆ. ಸದ್ಯ 7ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ಸುಪರ್ಣ ರಾಯ್‌ಗೆ ಸರ್ಕಾರದಿಂದ ಬರುವ ಮಾಸಿಕ ಸ್ಕಾಲರ್‌ಶಿಪ್ ಹಣವೇ ವಿದ್ಯಾಭ್ಯಾಸಕ್ಕೆ ಪ್ರಮುಖ ಆಸರೆಯಾಗಿತ್ತು. ಇತ್ತೀಚೆಗೆ ಸುಪರ್ಣಳ ಶಾಲಾ ಶೂ ಹರಿದುಹೋಗಿತ್ತು. ಬದಲಿ ಶೂ ಖರೀದಿಸಲು ಪೋಷಕರ ಬಳಿ ಹಣವಿರಲಿಲ್ಲ. ಹೀಗಾಗಿ ಜುಲೈ ತಿಂಗಳಿನಲ್ಲಿ ಜಮೆಯಾಗುವ 900 ರೂಪಾಯಿ ಸ್ಕಾಲರ್‌ಶಿಪ್ ಹಣದಲ್ಲೇ ಹೇಗಾದರೂ ಮಾಡಿ ಹೊಸ ಶೂ ಖರೀದಿಸಬೇಕು ಎಂದು ಬಾಲಕಿ ಹಾಗೂ ಆಕೆಯ ತಾಯಿ ನಿರ್ಧರಿಸಿದ್ದರು.

ಎಟಿಎಂನಲ್ಲಿ ಕಂಡ ಆ ಒಂದು ನಂಬರ್

ಸರ್ಕಾರದಿಂದ ಸ್ಕಾಲರ್‌ಶಿಪ್ ಹಣ ಜಮೆಯಾಗುವ ನಿಗದಿತ ದಿನಾಂಕದ ಮರುದಿನವೇ ಬಾಲಕಿ ಸುಪರ್ಣ ರಾಯ್ ತನ್ನ ಸಹೋದರನ ಜೊತೆ ಅತ್ಯಂತ ಉತ್ಸಾಹದಿಂದ ಸ್ಥಳೀಯ ಎಟಿಎಂ ಕೇಂದ್ರಕ್ಕೆ ತೆರಳಿದ್ದಾಳೆ. ಮೊದಲು ಖಾತೆಗೆ 900 ರೂಪಾಯಿ ಬಂದಿದೆಯೇ ಇಲ್ಲವೇ ಎಂದು ಪರಿಶೀಲಿಸಲು ಬ್ಯಾಲೆನ್ಸ್ ಎನ್‌ಕ್ವೈರಿ (Balance Enquiry) ಆಪ್ಷನ್ ಒತ್ತಿದ್ದಾಳೆ.

ಆಗ ಸ್ಕ್ರೀನ್ ಮೇಲೆ ಮೂಡಿದ ನಂಬರ್ ನೋಡಿ ಇಬ್ಬರಿಗೂ ಒಂದು ಕ್ಷಣ ತಲೆಸುತ್ತು ಬಂದಂತಾಗಿದೆ. ಅಲ್ಲಿ 900 ರೂಪಾಯಿಗಳ ಬದಲಿಗೆ 759,69,51,951 ರೂಪಾಯಿ (ಬರೋಬ್ಬರಿ 759 ಕೋಟಿಗೂ ಅಧಿಕ) ಬ್ಯಾಲೆನ್ಸ್ ತೋರಿಸುತ್ತಿತ್ತು!

"ನಮಗೆ ಕಣ್ಣು ಕಾಣಿಸುತ್ತಿಲ್ಲವೇನೋ ಅಥವಾ ಎಟಿಎಂ ಮಿಷನ್ ಕೆಟ್ಟುಹೋಗಿರಬಹುದು ಎಂದುಕೊಂಡೆವು. 900 ರೂಪಾಯಿ ಜಾಗದಲ್ಲಿ ಇಷ್ಟೊಂದು ದೊಡ್ಡ ನಂಬರ್ ನೋಡಿದ ತಕ್ಷಣವೇ ಇಬ್ಬರಿಗೂ ಭಯ ಶುರುವಾಯಿತು," ಎಂದು ಬಾಲಕಿಯ ಸಹೋದರ ಆ ಕ್ಷಣವನ್ನು ನೆನೆಸಿಕೊಂಡಿದ್ದಾನೆ.

ಇದು ಖಂಡಿತಾ ತಾಂತ್ರಿಕ ದೋಷವಿರಬಹುದು ಎಂದು ಭಾವಿಸಿದ ಅವರು, ಕಾರ್ಡ್ ಅನ್ನು ಹೊರಗೆ ತೆಗೆದು ಮತ್ತೆ ಹಾಕಿ ದೃಢಪಡಿಸಿಕೊಳ್ಳಲು ನಿರ್ಧರಿಸಿದರು. ಹೀಗೆ ಒಂದಲ್ಲ, ಎರಡಲ್ಲ... ಸತತ ನಾಲ್ಕು ಬಾರಿ ಕಾರ್ಡ್ ಹಾಕಿ ಬ್ಯಾಲೆನ್ಸ್ ಚೆಕ್ ಮಾಡಿದರೂ ಎಟಿಎಂ ಸ್ಕ್ರೀನ್ ಮಾತ್ರ ಅದೇ 759 ಕೋಟಿ ರೂಪಾಯಿಗಳ ಮೊತ್ತವನ್ನು ಪ್ರದರ್ಶಿಸುತ್ತಿತ್ತು. ಕೊನೆಗೆ ಬಾಲಕಿ ತನಗೆ ಅಗತ್ಯವಿದ್ದ 900 ರೂಪಾಯಿಗಳನ್ನು ಮಾತ್ರ ಡ್ರಾ ಮಾಡಿಕೊಂಡು, ಉಳಿದ ಹಣ ಹಾಗೇ ಇರಲಿ ಎಂದು ಅಲ್ಲಿಂದ ನೇರವಾಗಿ ಬ್ಯಾಂಕ್‌ನತ್ತ ಓಡಿದ್ದಾಳೆ.

ಬ್ಯಾಂಕ್ ಅಧಿಕಾರಿಗಳಿಗೂ ತಟ್ಟಿದ ಶಾಕ್

ಎಟಿಎಂನಿಂದ ನೇರವಾಗಿ ಬ್ಯಾಂಕ್ ಶಾಖೆಗೆ ತೆರಳಿದ ಬಾಲಕಿ ಮತ್ತು ಆಕೆಯ ಸಹೋದರ ಅಲ್ಲಿನ ಅಧಿಕಾರಿಗಳಿಗೆ ಮ್ಯಾನೇಜರ್ ಮುಖಾಂತರ ವಿಷಯ ತಿಳಿಸಿದ್ದಾರೆ. ಎಟಿಎಂ ಸ್ಲಿಪ್ ಅನ್ನು ಅಧಿಕಾರಿಗಳ ಕೈಗಿಟ್ಟಿದ್ದಾರೆ. ಆರಂಭದಲ್ಲಿ ಬ್ಯಾಂಕ್ ಸಿಬ್ಬಂದಿ ಇದನ್ನು ನಂಬಲು ಸಿದ್ಧರಿರಲಿಲ್ಲ. ಆದರೆ, ಬ್ಯಾಂಕ್‌ನ ಕಂಪ್ಯೂಟರ್ ವ್ಯವಸ್ಥೆಯೊಳಗೆ ಬಾಲಕಿಯ ಖಾತೆ ಸಂಖ್ಯೆಯನ್ನು ಹಾಕಿ ಪರಿಶೀಲಿಸಿದಾಗ ಅಧಿಕಾರಿಗಳೂ ಸಹ ದಂಗಾಗಿದ್ದಾರೆ.

ಹೌದು, ಬಾಲಕಿ ಸುಪರ್ಣ ರಾಯ್ ಖಾತೆಯಲ್ಲಿ ಅಷ್ಟೂ ಕೋಟಿ ರೂಪಾಯಿಗಳು ಇರುವುದು ನಿಜವಾಗಿತ್ತು! ತಕ್ಷಣವೇ ಎಚ್ಚೆತ್ತ ಬ್ಯಾಂಕ್ ವ್ಯವಸ್ಥಾಪಕರು ಹಿರಿಯ ಅಧಿಕಾರಿಗಳಿಗೆ ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಬ್ಯಾಂಕ್‌ಗೆ ಆಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬ್ಯಾಂಕ್‌ನ ಹಿರಿಯ ಮೂಲಗಳ ಪ್ರಕಾರ, ಇದು ನೂರಕ್ಕೆ ನೂರರಷ್ಟು ತಾಂತ್ರಿಕ ದೋಷದಿಂದ (Technical Glitch) ಆಗಿರುವ ಸಾಧ್ಯತೆ ಇದೆ. ಏಕೆಂದರೆ ಇಷ್ಟು ದೊಡ್ಡ ಮೊತ್ತವನ್ನು ಸಾಮಾನ್ಯ ಉಳಿತಾಯ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಮತ್ತು ಯಾರೂ ಸಹ ಇಷ್ಟು ದೊಡ್ಡ ಮೊತ್ತವನ್ನು ಈ ರೀತಿ ವರ್ಗಾಯಿಸುವುದಿಲ್ಲ. ಸಾಫ್ಟ್‌ವೇರ್ ಅಪ್‌ಡೇಟ್ ಅಥವಾ ಸರ್ವರ್ ಸಮಸ್ಯೆಯಿಂದಾಗಿ ಈ ರೀತಿ ಸಂಖ್ಯೆಗಳು ಅದಲುಬದಲಾಗಿರಬಹುದು ಎಂದು ಅಂದಾಜಿಸಲಾಗಿದೆ. ಸದ್ಯಕ್ಕೆ ತನಿಖೆ ಪ್ರಗತಿಯಲ್ಲಿದ್ದು, ಪೂರ್ಣ ವರದಿ ಬಂದ ಬಳಿಕವಷ್ಟೇ ನಿಖರ ಕಾರಣ ತಿಳಿಯಲಿದೆ.

'ನಮ್ಮಿಂದ ಆದಾಯ ತೆರಿಗೆ ಕಸಿದುಕೊಳ್ಳಬೇಡಿ' 

ಖಾತೆಗೆ ಕೋಟಿ ಕೋಟಿ ರೂಪಾಯಿ ಜಮೆಯಾದ ಸುದ್ದಿ ಹರಡುತ್ತಿದ್ದಂತೆಯೇ ಬಾಲಕಿಯ ತಾಯಿ ಸಂತೋಷ ಪಡುವುದಕ್ಕಿಂತ ಹೆಚ್ಚಾಗಿ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ ಅವರು ಬ್ಯಾಂಕ್ ಮತ್ತು ಸರ್ಕಾರದ ಬಳಿ ಕೈಮುಗಿದು ವಿನಂತಿಸಿಕೊಂಡಿದ್ದಾರೆ.

"ನಾವು ದಿನವಿಡೀ ಕಷ್ಟಪಟ್ಟು ಕೂಲಿ ಕೆಲಸ ಮಾಡಿದರೆ ಮಾತ್ರ ನಮಗೆ ಮೂರು ಹೊತ್ತಿನ ಊಟ ಸಿಗುತ್ತದೆ. ನಮ್ಮ ಇಡೀ ಜೀವನವೇ ಬಡತನದಲ್ಲಿ ಸಾಗುತ್ತಿದೆ. ಈ ಕೋಟಿ ಕೋಟಿ ದುಡ್ಡು ನಮ್ಮದಲ್ಲ, ನಮಗೆ ಇದರ ಆಸೆಯೂ ಇಲ್ಲ. ಆದರೆ ಈ ದುಡ್ಡಿನ ಹೆಸರಿನಲ್ಲಿ ಸರ್ಕಾರ ಅಥವಾ ಆದಾಯ ತೆರಿಗೆ (Income Tax) ಇಲಾಖೆಯವರು ಬಂದು ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಬಾರದು. ದಯವಿಟ್ಟು ನಮ್ಮಿಂದ ಯಾವುದೇ ತೆರಿಗೆಯನ್ನು ಕಸಿದುಕೊಳ್ಳಬೇಡಿ," ಎಂದು ತಾಯಿ ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ.

ಬಡ ಕುಟುಂಬದ ಮನೆಯತ್ತ ಹರಿದು ಬರುತ್ತಿರುವ ಜನಸಾಗರ

ವಿಷಯ ಇಡೀ ಜಿಲ್ಲೆಯಾದ್ಯಂತ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ, ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಊರುಗಳ ಜನರು ಈ ಬಡ ಕುಟುಂಬದ ಮನೆಯತ್ತ ತಂಡೋಪತಂಡವಾಗಿ ಧಾವಿಸುತ್ತಿದ್ದಾರೆ. ರಾತ್ರೋರಾತ್ರಿ ಕೋಟ್ಯಧಿಪತಿಯಾದ ಬಾಲಕಿಯನ್ನು ನೋಡಲು ಮತ್ತು ಬ್ಯಾಂಕ್ ಖಾತೆಯ ಪವಾಡವನ್ನು ಕೇಳಲು ಜನರ ದಂಡೇ ನೆರೆಯುತ್ತಿದೆ.

Latest News