ಧಾರವಾಡ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಹೈಕೋರ್ಟ್‌ನಿಂದ ಜಾಮೀನು ಲಭಿಸಿದ ಹಿನ್ನೆಲೆಯಲ್ಲಿ, ಅವರ ಪುತ್ರಿಯರಾದ ದೀಪಾಲಿ ಮತ್ತು ವೈಶಾಲಿ ಸೇರಿದಂತೆ ಸಂಪೂರ್ಣ 'ವಿ.ಕೆ. ಕುಟುಂಬ' ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಶೇಷ ಪೋಸ್ಟ್ ಸಾರ್ವಜನಿಕರ ಗಮನ ಸೆಳೆದಿದೆ.
ಬಹುಚರ್ಚಿತ ಯೋಗೀಶ್ ಗೌಡ ಕೊ*ಲೆ ಪ್ರಕರಣದಲ್ಲಿ ಸುದೀರ್ಘ ಕಾನೂನು ಹೋರಾಟದ ನಂತರ ಧಾರವಾಡ ಶಾಸಕರಿಗೆ ಕರ್ನಾಟಕ ಹೈಕೋರ್ಟ್ ರಿಲೀಫ್ ನೀಡಿದ್ದು, ಈ ಬೆಳವಣಿಗೆಯನ್ನು 'ನ್ಯಾಯ ಎತ್ತಿ ಹಿಡಿದ ನ್ಯಾಯಾಂಗ' ಎಂದು ಬಣ್ಣಿಸಿರುವ ಕುಟುಂಬಸ್ಥರು, ನ್ಯಾಯಾಲಯ ಹಾಗೂ ನಾಯಕರಿಗೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಇದರ ಜೊತೆಗೆ, ಬೆಂಬಲಿಗರು ಹಾಗೂ ಅಭಿಮಾನಿಗಳಿಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಶಾಂತಿ ಮತ್ತು ಸಂಯಮ ಕಾಯ್ದುಕೊಳ್ಳುವಂತೆ ಜವಾಬ್ದಾರಿಯುತ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪತ್ರವೊಂದನ್ನು ಹಂಚಿಕೊಂಡಿರುವ ಶಾಸಕರ ಪುತ್ರಿಯರು, "ಕಷ್ಟದ ಸಂದರ್ಭದಲ್ಲಿ ನ್ಯಾಯವನ್ನು ಎತ್ತಿಹಿಡಿದ ಗೌರವಾನ್ವಿತ ನ್ಯಾಯಾಂಗಕ್ಕೆ ನಮ್ಮ ಕುಟುಂಬದ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಸುದೀರ್ಘವಾದ ಈ ಕಠಿಣ ಕಾನೂನು ಪಯಣದಲ್ಲಿ ನಮ್ಮ ಜೊತೆಗೆ ನಿಂತು ಧೈರ್ಯ ತುಂಬಿದ ಪ್ರತಿಯೊಬ್ಬರಿಗೂ ನಾವು ಚಿರಋಣಿಯಾಗಿದ್ದೇವೆ" ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಈಗ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದಾದ್ಯಂತ ಶಾಸಕರ ಅಭಿಮಾನಿ ಬಳಗದಲ್ಲಿ ಭಾರಿ ವೈರಲ್ ಆಗುತ್ತಿದೆ.
ತಮ್ಮ ಸುದೀರ್ಘ ಕಷ್ಟದ ದಿನಗಳಲ್ಲಿ ಸಾಥ್ ನೀಡಿದ ರಾಜಕೀಯ ನಾಯಕರು ಹಾಗೂ ಪಕ್ಷದ ಮೇಲಿನ ಅಭಿಮಾನವನ್ನು ಸ್ಮರಿಸಿರುವ ಕುಟುಂಬಸ್ಥರು, "ಈ ಸವಾಲಿನ ಪಯಣದಲ್ಲಿ ನಮ್ಮೊಂದಿಗೆ ಅಚಲವಾದ ನಂಬಿಕೆ ಮತ್ತು ಬೆಂಬಲದೊಂದಿಗೆ ನಿಂತ ನಮ್ಮ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಪ್ರತಿಯೊಬ್ಬ ಬೆಂಬಲಿಗರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ನೀವು ತೋರಿದ ಪ್ರೀತಿ, ವಿಶ್ವಾಸ ಮತ್ತು ಬೆಂಬಲ ನಮಗೆ ಅತ್ಯಂತ ಅಮೂಲ್ಯವಾದದ್ದು" ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಇದೇ ವೇಳೆ, ಜಾಮೀನು ಸಿಕ್ಕ ತಕ್ಷಣ ಬೆಂಬಲಿಗರು ಉತ್ಸಾಹದಿಂದ ರಸ್ತೆಗಿಳಿದು ಸಂಭ್ರಮಿಸುವುದನ್ನು ತಡೆಯಲು ಕುಟುಂಬಸ್ಥರು ಮುಂಜಾಗ್ರತಾ ಹೆಜ್ಜೆ ಇಟ್ಟಿದ್ದಾರೆ. "ಈ ಶುಭ ಸಂದರ್ಭದಲ್ಲಿ ನಮ್ಮ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಒಂದು ವಿನಮ್ರ ಪ್ರಾರ್ಥನೆ ಇದೆ. ದಯವಿಟ್ಟು ಯಾವುದೇ ರೀತಿಯ ಸಂಭ್ರಮಾಚರಣೆ, ಪಟಾಕಿ ಸಿಡಿಸುವುದು, ಬೃಹತ್ ಮೆರವಣಿಗೆ ಅಥವಾ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುವಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಡಿ. ಈ ವಿಶೇಷ ಸಮಯದಲ್ಲಿ ನೀವು ನಮಗೆ ನೀಡಬಹುದಾದ ಅತ್ಯುತ್ತಮ ಬೆಂಬಲ ಮತ್ತು ಉಡುಗೊರೆ ಎಂದರೆ ಶಾಂತಿ, ಸಂಯಮ ಹಾಗೂ ಕಾನೂನಿಗೆ ಗೌರವವನ್ನು ಕಾಪಾಡುವುದು" ಎಂದು ಶಾಸಕರ ಪುತ್ರಿಯರು ಕೋರಿಕೊಂಡಿದ್ದಾರೆ.
ವಿಚಾರಣಾಧೀನ ಕೈದಿಯಾಗಿ ಶಾಸಕ ವಿನಯ್ ಕುಲಕರ್ಣಿ ಅವರು ಜೈಲು ಶಿಕ್ಷೆ ಅನುಭವಿಸುತ್ತಿದ್ದ ಹಾಗೂ ಪ್ರಕರಣದ ತನಿಖೆ ಎದುರಿಸುತ್ತಿದ್ದ ಸುದೀರ್ಘ ಅವಧಿಯಲ್ಲಿ, ಅವರ ಪುತ್ರಿಯರಾದ ದೀಪಾಲಿ ಮತ್ತು ವೈಶಾಲಿ ಅವರು ತಂದೆಯ ಅನುಪಸ್ಥಿತಿಯಲ್ಲಿ ಕುಟುಂಬದ ಸ್ಥೈರ್ಯವಾಗಿ ನಿಂತಿದ್ದರು.
ತಂದೆಯ ರಾಜಕೀಯ ಮತ್ತು ಜನಸೇವೆಯ ಪರಂಪರೆಯನ್ನು ಎತ್ತಿಹಿಡಿಯುತ್ತಾ, ಸಾಮಾಜಿಕ ಜಾಲತಾಣಗಳ ಮೂಲಕ ಸದಾ ಅಭಿಮಾನಿಗಳಿಗೆ ಧೈರ್ಯ ತುಂಬುವ ಭಾವನಾತ್ಮಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದರು. ಇದೀಗ ತಂದೆಗೆ ನ್ಯಾಯಾಲಯದಿಂದ ಜಾಮೀನು ಮಂಜೂರಾದ ಬೆನ್ನಲ್ಲೇ, ಅಭಿಮಾನಿಗಳು ಬೀದಿಗಿಳಿದು ಅತಿರೇಕದ ಸಂಭ್ರಮಾಚರಣೆ ನಡೆಸಿ ಸಾರ್ವಜನಿಕರಿಗೆ ತೊಂದರೆ ನೀಡಬಾರದು ಎನ್ನುವ ಉದ್ದೇಶದಿಂದ ಅತ್ಯಂತ ಪ್ರಬುದ್ಧ ಹಾಗೂ ಜವಾಬ್ದಾರಿಯುತ ಸಂದೇಶವನ್ನು ರವಾನಿಸಿದ್ದಾರೆ.
ವಿನಯ್ ಕುಲಕರ್ಣಿ ಅವರ ಪುತ್ರಿಯರು ಹಂಚಿಕೊಂಡಿರುವ ಈ ಸಂದೇಶಕ್ಕೆ ಸಾರ್ವಜನಿಕ ವಲಯದಲ್ಲಿ ಹಾಗೂ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶಾಸಕರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಕುಟುಂಬದ ಮನವಿಗೆ ಬೆಂಬಲ ಸೂಚಿಸುತ್ತಿದ್ದು, ಯಾವುದೇ ರೀತಿಯ ಸಾರ್ವಜನಿಕ ಮೆರವಣಿಗೆ ನಡೆಸದೆ ಶಾಂತಿ ಹಾಗೂ ಸಂಯಮ ಕಾಯ್ದುಕೊಳ್ಳುವುದಾಗಿ ಭರವಸೆ ನೀಡುತ್ತಿದ್ದಾರೆ. ಈ ಮೂಲಕ ವಿನಯ್ ಕುಲಕರ್ಣಿ ಅವರ ಬಿಡುಗಡೆಯ ಹರ್ಷದ ನಡುವೆಯೂ, ಕಾನೂನು ಮತ್ತು ಸಾರ್ವಜನಿಕ ಶಾಂತಿಗೆ ಆದ್ಯತೆ ನೀಡಿರುವ ಅವರ ಕುಟುಂಬದ ನಡೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.