ರಾಜಕೀಯ ಅಂದಮೇಲೆ ಅಲ್ಲಿ ಏಳು-ಬೀಳುಗಳು ಸಹಜ. ಆದರೆ, ಕುಟುಂಬದ ದೃಷ್ಟಿಯಲ್ಲಿ ಒಬ್ಬ ತಂದೆ ಯಾವತ್ತೂ ಹೀರೋನೇ. ಸದ್ಯ ಧಾರವಾಡದ ಯೋಗೀಶ್‌ಗೌಡ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಬಗ್ಗೆ ಅವರ ಮಗಳು ವೈಶಾಲಿ ಕುಲಕರ್ಣಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿರೋ ಒಂದು ಪೋಸ್ಟ್ ಈಗ ಉತ್ತರ ಕರ್ನಾಟಕದಾದ್ಯಂತ ಸಖತ್ ಸದ್ದು ಮಾಡ್ತಿದೆ.
ವಿದ್ಯಾರ್ಥಿ ನಾಯಕನಿಂದ ಜನನಾಯಕನವರೆಗೆ...
ವೈಶಾಲಿ ಕುಲಕರ್ಣಿ ಅವರು ತಮ್ಮ ತಂದೆಯ ಹಳೆಯ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಅವರ ಹಳೆಯ ದಿನಗಳನ್ನು ನೆನೆದಿದ್ದಾರೆ. "ನಮ್ಮ ತಂದೆ ಬರೀ ಒಬ್ಬ ರಾಜಕಾರಣಿ ಅಷ್ಟೇ ಅಲ್ಲ. ಅವರು ಒಬ್ಬ ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿ, ವಿದ್ಯಾರ್ಥಿ ದೆಸೆಯಿಂದಲೇ ನಾಯಕನಾಗಿ ಬೆಳೆದು ಬಂದವರು. ಸಾವಿರಾರು ಹಸುಗಳನ್ನು ಸಾಕಿ, ದೊಡ್ಡ ಡೈರಿ ನಡೆಸುತ್ತಿದ್ದವರು. ಅವ್ರು ಕಷ್ಟಪಟ್ಟು ಬೆಳೆದ ಹಾದಿಯನ್ನು ಇಡೀ ಉತ್ತರ ಕರ್ನಾಟಕದ ಜನ ನೋಡಿದ್ದಾರೆ. ಎಷ್ಟೋ ಯುವ ರೈತರಿಗೆ ನಮ್ಮಪ್ಪ ಇವತ್ತಿಗೂ ಇನ್ಸ್‌ಪಿರೇಷನ್" ಅಂತ ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.
"ಅವ್ರು ನಮ್ಮ ಮನೆ ಮಗನಂತೆ ಇದ್ದವರು"
ಅಧಿಕಾರದಲ್ಲಿದ್ದಾಗಲೂ ವಿನಯ್ ಕುಲಕರ್ಣಿ ಅವರು ಜನರ ಜೊತೆ ಎಷ್ಟು ಸಿಂಪಲ್ ಆಗಿ ಇರ್ತಿದ್ರು ಅನ್ನೋದನ್ನ ವೈಶಾಲಿ ನೆನಪು ಮಾಡಿಕೊಂಡಿದ್ದಾರೆ. "ನಮ್ಮ ಮನೆಗೆ ಬಂದವರನ್ನ ಅವರು ಯಾವತ್ತೂ ಬರಿಗೈಲಿ ಕಳಿಸಲಿಲ್ಲ. ಬಂದವರ ವಯಸ್ಸು ನೋಡದೆ ಎಲ್ಲರಿಗೂ ಗೌರವ ಕೊಡ್ತಿದ್ರು. ಎಷ್ಟೋ ಫ್ಯಾಮಿಲಿಗಳಿಗೆ ಅವರು ಕೇವಲ ಒಬ್ಬ ಲೀಡರ್ ಆಗಿರಲಿಲ್ಲ, ಅವರ ಮನೆಯವರಲ್ಲಿ ಒಬ್ಬರಂತೆ ಇದ್ರು. ಜನರಿಗಾಗಿಯೇ ಅವರು ತಮ್ಮ ಜೀವನವನ್ನ ಮುಡುಪಾಗಿಟ್ಟವರು. ನಮಗೆ ಅವ್ರೇ ಮಾರ್ಗದರ್ಶಕರು ಮತ್ತು ನಮ್ಮ ಅತಿದೊಡ್ಡ ಹೆಮ್ಮೆ" ಅಂತ ಭಾವುಕರಾಗಿದ್ದಾರೆ.
ನ್ಯಾಯದ ಮೇಲೆ ಭರವಸೆ ಇದೆ!
ತಂದೆಗೆ ಶಿಕ್ಷೆಯಾದ ಮೇಲೆ ಜನ ಹತ್ತಾರು ಮಾತಾಡ್ತಿದ್ದಾರೆ ಅನ್ನೋದು ಮಗಳಿಗೆ ಗೊತ್ತು. ಅದರ ಬಗ್ಗೆಯೂ ವೈಶಾಲಿ ನೇರವಾಗಿ ಮಾತನಾಡಿದ್ದಾರೆ. "ಸಮಾಜದಲ್ಲಿ ನಮ್ಮ ತಂದೆಯ ಬಗ್ಗೆ ಏನೇ ಚರ್ಚೆಗಳು ನಡೀತಿರಬಹುದು, ಬೇರೆ ಬೇರೆ ಅಭಿಪ್ರಾಯಗಳು ಇರಬಹುದು. ಆದರೆ, ನಮಗೆ ಅವರ ಮೇಲೆ ಪೂರ್ತಿ ನಂಬಿಕೆ ಇದೆ. ನ್ಯಾಯಾಂಗ ವ್ಯವಸ್ಥೆಯನ್ನು ನಾವು ಗೌರವಿಸ್ತೀವಿ. ಮೇಲ್ಮನವಿ ನ್ಯಾಯಾಲಯಗಳ ಮೇಲೆ ನಮಗೆ ವಿಶ್ವಾಸವಿದೆ, ಅಲ್ಲಿ ನಮಗೆ ನ್ಯಾಯ ಸಿಕ್ಕೇ ಸಿಗುತ್ತೆ" ಅಂತ ದೃಢವಾಗಿ ಹೇಳಿದ್ದಾರೆ.
"ಇದು ಕೂಡ ಕಳೆದುಹೋಗುತ್ತೆ..."
ಪೋಸ್ಟ್‌ನ ಕೊನೆಯಲ್ಲಿ ಮಗಳು ಕೊಟ್ಟಿರೋ ಧೈರ್ಯದ ಮಾತುಗಳು ಎಲ್ಲರ ಗಮನ ಸೆಳಿತಿದೆ. "ನಾವು ಈಗ ತುಂಬಾ ಕಷ್ಟದ ಸಮಯದಲ್ಲಿದ್ದೀವಿ ನಿಜ. ಆದರೆ ನಾವೆಲ್ಲರೂ ಒಟ್ಟಾಗಿ ನಿಂತಿದ್ದೀವಿ. ಈ ಕೆಟ್ಟ ಸಮಯ ಕೂಡ ಒಂದು ದಿನ ಕಳೆದುಹೋಗುತ್ತೆ. ನಮಗೆ ಸಪೋರ್ಟ್ ಮಾಡ್ತಿರೋ ಪ್ರತಿಯೊಬ್ಬರಿಗೂ ನಮ್ಮ ಧನ್ಯವಾದಗಳು" ಅಂತ ಹೇಳೋ ಮೂಲಕ ತಂದೆಯ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಏನಿದು ಪ್ರಕರಣ?
ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಬಿಜೆಪಿ ನಾಯಕ ಯೋಗೀಶ್‌ಗೌಡ ಗೌಡರ್ ಅವರ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಸದ್ಯಕ್ಕೆ ಕುಲಕರ್ಣಿ ಅವರು ಜೈಲುವಾಸ ಅನುಭವಿಸುತ್ತಿದ್ದಾರೆ.
ಒಬ್ಬ ಮಗಳಾಗಿ ವೈಶಾಲಿ ಬರೆದಿರೋ ಈ ಪತ್ರದಲ್ಲಿ ಅಪ್ಪನ ಮೇಲಿರೋ ಅಪಾರ ಪ್ರೀತಿ ಎದ್ದು ಕಾಣ್ತಿದೆ. ರಾಜಕೀಯ ಆಟ ಏನೇ ಇರಲಿ, ಒಬ್ಬ ಮಗಳು ತನ್ನ ತಂದೆಯ ಪರವಾಗಿ ನಿಂತಿರೋ ರೀತಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಕಮೆಂಟ್ಸ್ ಬರ್ತಿವೆ.