ಕರ್ನಾಟಕದ ಅಧಿಕಾರದ ಕೇಂದ್ರಬಿಂದು, ಶಕ್ತಿಸೌಧ ವಿಧಾನಸೌಧ. ಇಲ್ಲಿಗೆ ಎಂತಹ ಕಟ್ಟುನಿಟ್ಟಿನ ಭದ್ರತೆ ಇರುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಅಂತಹ ಭದ್ರತೆಯ ನಡುವೆಯೇ ಯುವಕನೊಬ್ಬ ಭಾರಿ ಮೊತ್ತದ ನಗದಿನೊಂದಿಗೆ ಒಳಗೆ ನುಗ್ಗಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಬುಧವಾರ ನಡೆದಿದೆ.
ಅಂದು ಮಧ್ಯಾಹ್ನ ವಿಧಾನಸೌಧದ ಕೆಂಗಲ್ ಗೇಟ್ ಮೂಲಕ ಯುವಕನೊಬ್ಬ ಅನುಮಾನಾಸ್ಪದವಾಗಿ ಪ್ರವೇಶಿಸಲು ಯತ್ನಿಸುತ್ತಿದ್ದ. ಭದ್ರತಾ ಸಿಬ್ಬಂದಿ ಆತನನ್ನು ತಡೆದು ಬ್ಯಾಗ್ ತಪಾಸಣೆ ಮಾಡಿದಾಗ, ಒಳಗೆ ಬರೋಬ್ಬರಿ 6 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ! ಇಷ್ಟು ದೊಡ್ಡ ಮೊತ್ತದ ಹಣವನ್ನು ಹಿಡಿದು ಆತ ಯಾಕೆ ಬಂದಿದ್ದ ಎಂಬುದು ಪೊಲೀಸರಿಗೆ ಅಚ್ಚರಿ ಮೂಡಿಸಿತು.
ಪೊಲೀಸರ ವಿಚಾರಣೆಯ ವೇಳೆ ಆ ಯುವಕ, "ನಾನು ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ಲೆಟರ್‌ಹೆಡ್ ಪಡೆಯಲು ಬಂದಿದ್ದೇನೆ" ಎಂದು ಹೇಳಿದ್ದಾನೆ. ಆದರೆ, ಶಾಸಕರ ಲೆಟರ್‌ಹೆಡ್‌ಗಾಗಿ 6 ಲಕ್ಷ ರೂಪಾಯಿ ನಗದು ಯಾಕೆ? ಎಂಬ ಪ್ರಶ್ನೆ ಉದ್ಭವವಾಯಿತು. "ಇಷ್ಟು ಹಣದೊಂದಿಗೆ ಒಳಗೆ ಹೋಗಲು ಅವಕಾಶವಿಲ್ಲ, ದಯವಿಟ್ಟು ವಾಪಸ್ ಹೋಗಿ" ಎಂದು ಪೊಲೀಸರು ಎಷ್ಟೇ ವಿನಂತಿಸಿದರೂ, ಆತ ಮಾತ್ರ "ನಾನು ಶಾಸಕರನ್ನು ನೋಡಲೇಬೇಕು" ಎಂದು ಹಠ ಹಿಡಿದು ನಿಂತಿದ್ದ. ಆತನ ಹಠಮಾರಿತನ ನೋಡಿದ ಪೊಲೀಸರಿಗೆ ಅನುಮಾನ ಬಲವಾಯಿತು. ಕೂಡಲೇ ಆತನನ್ನು ವಶಕ್ಕೆ ಪಡೆದು, ಎಸಿಪಿ ಕೃಷ್ಣಯ್ಯ ಅವರ ಕಚೇರಿಗೆ ಕರೆದೊಯ್ದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರ ವಿಚಾರಣೆಯ ವೇಳೆ ಆ ಯುವಕ ನೀಡಿದ ಹೇಳಿಕೆಗಳು ಮತ್ತಷ್ಟು ಗೊಂದಲ ಸೃಷ್ಟಿಸಿವೆ. "ನನ್ನ ದೊಡ್ಡಪ್ಪನಿಗೆ ಹುಷಾರಿಲ್ಲ, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಚಿಕಿತ್ಸೆಗಾಗಿ ಈ ಹಣ ತಂದಿದ್ದೆ. ಅದರ ಜೊತೆಗೆ ಶಾಸಕರ ಕೆಲಸವಿದ್ದಿದ್ದರಿಂದ ಇಲ್ಲಿಗೆ ಬಂದೆ" ಎಂದು ಆತ ಕಥೆ ಕಟ್ಟಿದ್ದಾನೆ. 6 ಲಕ್ಷ ರೂಪಾಯಿ ಹಣವನ್ನು ಹಿಡಿದುಕೊಂಡು ಆಸ್ಪತ್ರೆಗೆ ಹೋಗುವ ಬದಲು, ಶಾಸಕರ ಭೇಟಿಗೆ ಬಂದಿದ್ದೇಕೆ? ಎಂಬುದು ಪೊಲೀಸರಿಗೆ ಉತ್ತರ ಸಿಗದ ಪ್ರಶ್ನೆಯಾಗಿದೆ. ಸದ್ಯ ಪೊಲೀಸರು ಈ ಹಣದ ಅಸಲಿ ಮೂಲವೇನು? ಯಾರ ಹಣ? ಶಾಸಕರನ್ನು ಭೇಟಿಯಾಗಲು ಬಂದಿದ್ದ ಉದ್ದೇಶವೇನು? ಎಂಬೆಲ್ಲಾ ಆಯಾಮಗಳಲ್ಲಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ವಿಧಾನಸೌಧದಂತಹ ಅತೀ ಸೂಕ್ಷ್ಮ ಪ್ರದೇಶದಲ್ಲಿ ಇಂತಹ ಘಟನೆ ನಡೆದಿರುವುದು ಭದ್ರತಾ ಲೋಪವೇ ಎಂಬ ಚರ್ಚೆ ಕೂಡ ಶುರುವಾಗಿದೆ. ಹಣದ ಪ್ರಭಾವ ಬಳಸಿ ಒಳಗೆ ಹೋಗಲು ಯತ್ನಿಸಿದ್ದೇ ಅಥವಾ ನಿಜವಾಗಿಯೂ ಆತ ದಾರಿ ತಪ್ಪಿ ಬಂದಿದ್ದೇ ಎಂಬುದು ತನಿಖೆಯ ನಂತರವಷ್ಟೇ ತಿಳಿಯಲಿದೆ. ಯುವಕನ ಬಳಿ ಇದ್ದ ಹಣದ ಮೂಲದ ಬಗ್ಗೆಯೂ ಇದೀಗ ತೀವ್ರ ತನಿಖೆ ನಡೆಯುತ್ತಿದೆ.
ಶಾಸಕರ ಭೇಟಿ ಮತ್ತು 6 ಲಕ್ಷ ರೂಪಾಯಿ ನಗದಿನ ಕಥೆ ಸದ್ಯ ರಾಜಕೀಯ ಪಡಸಾಲೆಯಲ್ಲಿ ಹೊಸ ಸಂಚಲನ ಮೂಡಿಸಿದೆ. ಹಣದ ಬ್ಯಾಗ್ ಹಿಡಿದು ಬಂದಿದ್ದ ಆ ಯುವಕನ ಹಿಂದಿನ ಕೈಗಳಿವೆಯೇ ಅಥವಾ ಇದು ಕೇವಲ ಆತನೊಬ್ಬನ ನಿರ್ಧಾರವೇ ಎಂಬುದನ್ನು ಪೊಲೀಸರು ಬಯಲು ಮಾಡಬೇಕಿದೆ.