Feb 16, 2026 Languages : ಕನ್ನಡ | English

ವಿಧಾನಸೌಧದಲ್ಲೇ ಕಳ್ಳತನ!! 300 ಗ್ರಾಂ ಚಿನ್ನ, 1.5 ಲಕ್ಷ ನಗದು ಹಣ ಮಾಯ

ರಾಜ್ಯದ ಅತ್ಯಂತ ಭದ್ರತೆಯ ಪ್ರದೇಶ ಎನ್ನಲಾಗುವ ವಿಧಾನಸೌಧದಲ್ಲೇ ಕಳ್ಳತನ ನಡೆದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ರಾಜ್ಯ ಸರ್ಕಾರದ ಪ್ರಭಾವಿ ಸಚಿವರಾದ ಬೈರತಿ ಸುರೇಶ್ ಅವರ ಕಚೇರಿಯಲ್ಲೇ 300 ಗ್ರಾಂ ಚಿನ್ನಾಭರಣ ಹಾಗೂ 1.5 ಲಕ್ಷ ರೂಪಾಯಿ ನಗದು ಕಳ್ಳತನವಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಈಗ ಹಲವಾರು ಪ್ರಶ್ನೆಗಳನ್ನು ಎಬ್ಬಿಸಿದೆ.

ಸಚಿವ ಬೈರತಿ ಸುರೇಶ್ ಕಚೇರಿಯಿಂದ ಚಿನ್ನ ಕಳ್ಳತನ
ಸಚಿವ ಬೈರತಿ ಸುರೇಶ್ ಕಚೇರಿಯಿಂದ ಚಿನ್ನ ಕಳ್ಳತನ

ಶಕ್ತಿಸೌಧದಲ್ಲಿರುವ ಸಚಿವ ಬೈರತಿ ಸುರೇಶ್ ಅವರ ಕಚೇರಿಗೆ ನವೀನ್ ಎಂಬ ವ್ಯಕ್ತಿ ಕೆಲಸದ ನಿಮಿತ್ತ ಆಗಮಿಸಿದ್ದರು. ಈ ವೇಳೆ ತಮ್ಮ ಜೊತೆಗೆ ತಂದಿದ್ದ ಚಿನ್ನಾಭರಣ ಮತ್ತು ನಗದು ಹಣವಿರುವ ಬ್ಯಾಗ್ ಅನ್ನು ಕಚೇರಿಯಲ್ಲೇ ಮರೆತು ಹೋಗಿದ್ದಾರೆ. ಆ ದಿನ ಕೆಲಸ ಮುಗಿಸಿಕೊಂಡು ಹೊರಟ ನವೀನ್, ಬ್ಯಾಗ್ ಬಗ್ಗೆ ಗಮನ ಕೊಟ್ಟಿಲ್ಲ,  ಮರುದಿನ ಕಚೇರಿಗೆ ಬಂದು ನೋಡಿದಾಗ, ಚಿನ್ನ ಮತ್ತು ಹಣವಿದ್ದ ಬ್ಯಾಗ್ ಅಲ್ಲಿರಲಿಲ್ಲ. ಇದರಿಂದ ಆತಂಕಗೊಂಡ ನವೀನ್ ಈ ವಿಚಾರವನ್ನು ಸಂಬಂಧಪಟ್ಟವರಿಗೆ ತಿಳಿಸಿದ್ದು, ನಂತರ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ತಕ್ಷಣವೇ ತನಿಖೆಗೆ ಇಳಿದಿದ್ದಾರೆ.

ಪೊಲೀಸರು ಸಚಿವರ ಕಚೇರಿ ಹಾಗೂ ಸುತ್ತಮುತ್ತಲ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಡಿಪಿಎಆರ್ ಇಲಾಖೆಯ ಡಿ ಗ್ರೂಪ್ ನೌಕರನೊಬ್ಬ ಬ್ಯಾಗ್ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಆಧಾರದ ಮೇಲೆ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಈ ಘಟನೆಯ ಬಳಿಕ ವಿಧಾನಸೌಧದ ಭದ್ರತೆ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ. ಅಸಲಿಗೆ ವಿಧಾನಸೌಧದೊಳಗೆ ಇಷ್ಟೊಂದು ಪ್ರಮಾಣದ ಚಿನ್ನಾಭರಣ ಮತ್ತು ನಗದು ಹಣ ಹೇಗೆ ಪ್ರವೇಶಿಸಿತು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಮೆಟಲ್ ಡಿಟೆಕ್ಟರ್‌, ಭದ್ರತಾ ತಪಾಸಣೆಗಳು ಕೇವಲ ನೆಪಕ್ಕೇ ಸೀಮಿತವಾಗಿವೆಯಾ ಎಂಬ ಅನುಮಾನವೂ ವ್ಯಕ್ತವಾಗಿದೆ.

ಇನ್ನೊಂದೆಡೆ ದೂರು ನೀಡಿರುವ ನವೀನ್ ಯಾರು? ಅವರು ಯಾವ ಉದ್ದೇಶಕ್ಕಾಗಿ ಇಷ್ಟೊಂದು ಚಿನ್ನ ಮತ್ತು ಹಣವನ್ನು ತೆಗೆದುಕೊಂಡು ಬಂದಿದ್ದರು? ಈ ಚಿನ್ನಾಭರಣದ ಮೂಲ ಏನು? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ. ಪೊಲೀಸರು ಈ ಎಲ್ಲಾ ಅಂಶಗಳನ್ನೂ ತನಿಖೆಯ ಭಾಗವಾಗಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

Latest News