Mar 3, 2026 Languages : ಕನ್ನಡ | English

ವರ್ತೂರು ನಿವಾಸಿಗಳ ಆಕ್ರೋಶ – ಗಣರಾಜ್ಯೋತ್ಸವ ದಿನದಂದು ರಸ್ತೆ ಸ್ವಚ್ಛತಾ ಹೋರಾಟ

ಗಣರಾಜ್ಯೋತ್ಸವ ದಿನದಂದು ವರ್ತೂರು ನಿವಾಸಿಗಳು ತಮ್ಮ ಕೈಯಲ್ಲಿ ಪೊರಕೆ ಹಿಡಿದು ನೇರವಾಗಿ ರಸ್ತೆಗೆ ಇಳಿದ ಘಟನೆ ಸ್ಥಳೀಯ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಯಿತು. ಸರ್ಕಾರದ ಸಂಸ್ಥೆ GBA ಮಾಡಬೇಕಾದ ಕೆಲಸವನ್ನು ಸ್ಥಳೀಯರು ಸ್ವತಃ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

GBA ನಿರ್ಲಕ್ಷ್ಯಕ್ಕೆ ಪ್ರತಿಯಾಗಿ ಸ್ಥಳೀಯರ ಪೊರಕೆ ಹಿಡಿದ ಆಕ್ರೋಶ!!
GBA ನಿರ್ಲಕ್ಷ್ಯಕ್ಕೆ ಪ್ರತಿಯಾಗಿ ಸ್ಥಳೀಯರ ಪೊರಕೆ ಹಿಡಿದ ಆಕ್ರೋಶ!!

ಹೌದು, ರಸ್ತೆಯಲ್ಲಿದ್ದ ಕಸ, ಮಣ್ಣು, ಹಾಗೂ ಗುಂಡಿಗಳನ್ನು ನೋಡಿ ಬೇಸತ್ತ ನಿವಾಸಿಗಳು ಎಲ್ಲರೂ ಸೇರಿ ರಸ್ತೆ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾದರು ಎನ್ನಬಹುದು. ಕೇವಲ ಸ್ವಚ್ಛತೆ ಮಾತ್ರವಲ್ಲದೆ, ಗುಂಡಿಗಳನ್ನು ಮುಚ್ಚುವ ಕೆಲಸವನ್ನೂ ಅವರು ಕೈಗೊಂಡರು. “ನಾವು ಹಲವು ಬಾರಿ GBAಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ ಸ್ವತಃ ನಮ್ಮ ಹಣದಿಂದಲೇ ಈ ಕೆಲಸ ಮಾಡಬೇಕಾಯಿತು” ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸ್ಥಳೀಯರು ಒಟ್ಟಾಗಿ ಸೇರಿ ಮಾಡಿದ ಈ ಕಾರ್ಯವು ಜನರಲ್ಲಿ ಜಾಗೃತಿ ಮೂಡಿಸುವಂತಿತ್ತು. ಗಣರಾಜ್ಯೋತ್ಸವದ ದಿನದಂದು ದೇಶದ ಸ್ವಾತಂತ್ರ್ಯವನ್ನು ಆಚರಿಸುವುದರ ಜೊತೆಗೆ, ತಮ್ಮ ಹಕ್ಕು ಮತ್ತು ಹೊಣೆಗಾರಿಕೆಯನ್ನು ನೆನಪಿಸಿಕೊಂಡು ರಸ್ತೆ ಸ್ವಚ್ಛಗೊಳಿಸುವ ಮೂಲಕ ಅವರು ನಿಜವಾದ ನಾಗರಿಕ ಜವಾಬ್ದಾರಿಯನ್ನು ತೋರಿಸಿದರು.

ಈ ಘಟನೆ ಸ್ಥಳೀಯ ಆಡಳಿತದ ನಿರ್ಲಕ್ಷ್ಯವನ್ನು ಬಯಲಿಗೆಳೆದಿದೆ. ಜನರು ನಿರಂತರವಾಗಿ ಮನವಿ ಮಾಡಿದರೂ ಪ್ರತಿಕ್ರಿಯೆ ನೀಡದಿರುವುದು, ಸಾರ್ವಜನಿಕ ಸೇವೆಗಳ ಮೇಲೆ ಜನರ ವಿಶ್ವಾಸ ಕುಸಿಯುವಂತೆ ಮಾಡಿದೆ. “ನಮ್ಮ ತೆರಿಗೆ ಹಣವನ್ನು ಬಳಸಿಕೊಂಡು ರಸ್ತೆಗಳನ್ನು ನಿರ್ವಹಿಸಬೇಕಾದವರು ಕೆಲಸ ಮಾಡದಿದ್ದರೆ, ನಾವು ಏನು ಮಾಡಬೇಕು?” ಎಂಬ ಪ್ರಶ್ನೆ ನಿವಾಸಿಗಳಲ್ಲಿ ಮೂಡಿದೆ.

ಸ್ವಂತ ಹಣದಿಂದ ರಸ್ತೆ ಸ್ವಚ್ಛಗೊಳಿಸಿ, ಗುಂಡಿಗಳನ್ನು ಮುಚ್ಚಿದ ವರ್ತೂರು ನಿವಾಸಿಗಳ ಈ ಹೋರಾಟವು ಸಾಮಾಜಿಕ ಮಾಧ್ಯಮದಲ್ಲೂ ವೈರಲ್ ಆಗಿದೆ. ಅನೇಕರು ಇವರ ಕಾರ್ಯವನ್ನು ಮೆಚ್ಚಿ, “ಇದು ನಿಜವಾದ ಜನಶಕ್ತಿ” ಎಂದು ಪ್ರಶಂಶಿಸುತ್ತಿದ್ದಾರೆ. 

ಒಟ್ಟಾರೆ, ಗಣರಾಜ್ಯೋತ್ಸವ ದಿನದಂದು ನಡೆದ ಈ ಘಟನೆ ಜನರ ಆಕ್ರೋಶವನ್ನು ಮಾತ್ರವಲ್ಲ, ಅವರ ಏಕತೆಯನ್ನು ಕೂಡಾ ತೋರಿಸಿತು. ಸರ್ಕಾರದ ನಿರ್ಲಕ್ಷ್ಯವನ್ನು ಎದುರಿಸಿ, ಸ್ವತಃ ತಮ್ಮ ಪ್ರದೇಶವನ್ನು ಸುಧಾರಿಸಲು ಮುಂದಾದ ವರ್ತೂರು ನಿವಾಸಿಗಳ ಈ ಹೆಜ್ಜೆ, ಇತರ ಪ್ರದೇಶಗಳಿಗೂ ಮಾದರಿಯಾಗುವಂತದ್ದು ಎಂದು ಹೇಳಬಹುದು.  

Latest News