ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಕುತೂಹಲ ಕೆರಳಿಸಿದ್ದ "ಅಧಿಕಾರ ಹಸ್ತಾಂತರ" ಪ್ರಕ್ರಿಯೆ ಕೊನೆಗೂ ಅಂತ್ಯಕ್ಕೆ ಬಂದಿದೆ. ಹೈಕಮಾಂಡ್ ಮಟ್ಟದಲ್ಲಿ ನಡೆದ ಸುದೀರ್ಘ ಮ್ಯಾರಥಾನ್ ಚರ್ಚೆಗಳ ಬಳಿಕ, 64 ವರ್ಷದ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ 18ನೇ ಮುಖ್ಯಮಂತ್ರಿಯಾಗಿ ಬುಧವಾರ ಸಂಜೆ 4.05 ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಅತ್ಯಂತ ನಂಬಿಕಸ್ಥ ಮೂಲಗಳು ತಿಳಿಸಿವೆ.
ರಾಜಧಾನಿಯ ಲೋಕಭವನದ ಗಾಜಿನ ಮನೆಯಲ್ಲಿ ಅದ್ಧೂರಿ ಪ್ರಮಾಣವಚನ ಸಮಾರಂಭ ಆಯೋಜನೆಯಾಗಿದ್ದು, ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಡಿವಿಎಸ್ ಅವರಿಗೆ ಹಾಗೂ ಅವರ ಜೊತೆ ಪ್ರಮಾಣ ಸ್ವೀಕರಿಸಲಿರುವ 10 ರಿಂದ 15 ಸಚಿವರಿಗೆ ಪದವಿ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಲಿದ್ದಾರೆ.
ದಿಲ್ಲಿಯಲ್ಲಿ ನಡೆದ ಹೈಕಮಾಂಡ್ ಹೈ-ಡ್ರಾಮಾ!
ಕಳೆದ ಗುರುವಾರ ನವದೆಹಲಿಯಲ್ಲಿ ನಡೆದ ಮ್ಯಾರಥಾನ್ ಸಭೆಯ ಬಳಿಕ, ರಾಹುಲ್ ಗಾಂಧಿ ಅವರು ನೀಡಿದ ಸ್ಪಷ್ಟ ಸಂದೇಶದ ಮೇರೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮಂಗಳವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಮ್ಮುಖದಲ್ಲಿ ಹೊಸ ಸಚಿವ ಸಂಪುಟದ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.
ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಖರ್ಗೆ ಅವರ ನಿಷ್ಠಾವಂತ ಶಾಸಕರಿಗೆ ಸಚಿವ ಸ್ಥಾನ ಹಂಚಿಕೆಯಲ್ಲಿ ಸಮಾನ ಆದ್ಯತೆ ನೀಡಲು ಹೈಕಮಾಂಡ್ ಹರಸಾಹಸ ಪಟ್ಟಿದೆ.
ಸಚಿವರಾಗುವ ಸಂಭಾವ್ಯರ ಪಟ್ಟಿ ಇಲ್ಲಿದೆ:
ಹೊಸ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಮೊದಲ ಪಟ್ಟಿಯಲ್ಲಿ ಪ್ರಮುಖ ನಾಯಕರ ಹೆಸರುಗಳು ಮುಂಚೂಣಿಯಲ್ಲಿವೆ:
ಕೆ.ಜೆ. ಜಾರ್ಜ್, ಡಾ. ಜಿ. ಪರಮೇಶ್ವರ (ಡಿಸಿಎಂ ಹುದ್ದೆಗೂ ಇವರ ಹೆಸರು ಕೇಳಿಬರುತ್ತಿದೆ), ರಾಮಲಿಂಗ ರೆಡ್ಡಿ
ಕೃಷ್ಣ ಬೈರೇಗೌಡ, ಯು.ಟಿ. ಖಾದರ್, ಎಂ.ಬಿ. ಪಾಟೀಲ್
ಪ್ರಿಯಾಂಕ್ ಖರ್ಗೆ, ಡಾ. ಯತೀಂದ್ರ ಸಿದ್ದರಾಮಯ್ಯ, ಕೆ.ಎಚ್. ಮುನಿಯಪ್ಪ (ಅಥವಾ ಅವರ ಪುತ್ರಿ ರೂಪಕಲಾ ಶಶಿಧರ್)
ದಿನೇಶ್ ಗುಂಡೂರಾವ್ ಮತ್ತು ಈಶ್ವರ್ ಖಂಡ್ರೆ
ಗಮನಾರ್ಹ ಬದಲಾವಣೆಗಳು: ಸಿದ್ದರಾಮಯ್ಯ ಅವರ ಆಪ್ತ ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಿ, ಜೊತೆಗೆ ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನೂ ಕಟ್ಟುವ ಸಾಧ್ಯತೆಯಿದೆ. ಆದರೆ, ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಮೊದಲ ಪಟ್ಟಿಯಲ್ಲಿ ಸ್ಥಾನ ಸಿಗುವುದು ಡೌಟ್ ಎನ್ನಲಾಗಿದೆ. ಇತ್ತೀಚಿನ ಆಡಿಯೋ ಸೋರಿಕೆ ವಿವಾದದಿಂದಾಗಿ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಸಚಿವ ಸ್ಥಾನದ ಅವಕಾಶ ಕೈತಪ್ಪಿದೆ ಎನ್ನಲಾಗಿದೆ.
ಜೂನ್ 18 ರ ಬಳಿಕ 2ನೇ ಹಂತದ ವಿಸ್ತರಣೆ
ನಿಯಮಾವಳಿಗಳ ಪ್ರಕಾರ ರಾಜ್ಯ ಸಂಪುಟದಲ್ಲಿ ಸಿಎಂ ಒಳಗೊಂಡಂತೆ ಗರಿಷ್ಠ 34 ಸಚಿವರಾಗಬಹುದು. ಸದ್ಯಕ್ಕೆ 10-15 ಜನ ಮಾತ್ರ ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ಜೂನ್ 18 ರಂದು ನಡೆಯಲಿರುವ 4 ರಾಜ್ಯಸಭೆ ಹಾಗೂ 7 ವಿಧಾನ ಪರಿಷತ್ ಚುನಾವಣೆಗಳ ಬಳಿಕ ಉಳಿದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆದರೆ, ಹಳೆಯ ಸಂಪುಟದಲ್ಲಿದ್ದ ಹಲವು ಸಚಿವರಿಗೆ ಈ ಬಾರಿ ಕೋಕ್ ಸಿಗುವುದು ಗ್ಯಾರಂಟಿ ಆಗಿರುವುದರಿಂದ ಹೊಸಬರ ಲಾಬಿ ತಾರಕಕ್ಕೇರಿದೆ.
ಅಜ್ಜಯ್ಯನ ಹೆಸರಲ್ಲಿ ಡಿಕೆಶಿ ಪ್ರಮಾಣವಚನ?
ತೀವ್ರ ಧಾರ್ಮಿಕ ನಂಬಿಕೆಯುಳ್ಳ ಡಿ.ಕೆ. ಶಿವಕುಮಾರ್ ಅವರು ತಾವು ಅಪಾರವಾಗಿ ನಂಬುವ ಅಜ್ಜಯ್ಯ ಸ್ವಾಮಿ' ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಸಮಾರಂಭದಲ್ಲಿ ರಾಜ್ಯದ ಎಲ್ಲಾ ಧರ್ಮಗಳ ಪ್ರಮುಖ ಧರ್ಮಗುರುಗಳು ಉಪಸ್ಥಿತರಿದ್ದು ಆಶೀರ್ವದಿಸಲಿದ್ದಾರೆ. ಇಂಡಿಯಾ ಮೈತ್ರಿಕೂಟದ ಪ್ರಮುಖ ನಾಯಕರು ಮತ್ತು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.
ಸಿಂಗಾಪುರ ಮಾದರಿ ಬೆಂಗಳೂರು & ಡಿಕೆಶಿ ಹೊಸ ಘೋಷಣೆಗಳು!
ಬೆಂಗಳೂರಿನ ಪೋಸ್ಟರ್ ಬಾಯ್ ಎಂದೇ ಖ್ಯಾತರಾಗಿರುವ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಿರುವುದಕ್ಕೆ ಉದ್ಯಮ ವಲಯ ಹರ್ಷ ವ್ಯಕ್ತಪಡಿಸಿದೆ. ಸಿಂಗಾಪುರ ಮಾದರಿಯಲ್ಲಿ ಬೆಂಗಳೂರನ್ನು ಅಭಿವೃದ್ಧಿಪಡಿಸುವ ಅವರ ಕನಸನ್ನು ಕಂಡು, ಹಲವು ವ್ಯಾಪಾರ ದಿಗ್ಗಜರು ಈಗಾಗಲೇ ಶಿವಕುಮಾರ್ ಅವರನ್ನು ಮಾಜಿ ಸಿಎಂ ದಿವಂಗತ ಎಸ್.ಎಂ. ಕೃಷ್ಣ ಅವರಿಗೆ ಹೋಲಿಸುತ್ತಿದ್ದಾರೆ.
ಮುಖ್ಯಮಂತ್ರಿಯಾಗಿ ಸೀಟಿನಲ್ಲಿ ಕೂರುತ್ತಿದ್ದಂತೆಯೇ ಡಿಕೆಶಿ ರಾಜ್ಯದ ಜನತೆಗೆ ಕೆಲವು ಮಹತ್ವದ ಗಿಫ್ಟ್ ನೀಡಲಿದ್ದಾರೆ:
- ವಿದ್ಯಾರ್ಥಿ ರಥ: 'ಶಕ್ತಿ' ಯೋಜನೆಯ ಭಾರಿ ಜನದಟ್ಟಣೆಯಿಂದಾಗಿ ತೊಂದರೆ ಅನುಭವಿಸುತ್ತಿದ್ದ ವಿದ್ಯಾರ್ಥಿಗಳಿಗೆಂದೇ ಮೀಸಲಾದ ವಿಶೇಷ ಉಚಿತ ಬಸ್ ಸೇವೆ.
- ರೈತರಿಗೆ ಬಂಪರ್: ಡೈರಿ ರೈತರಿಗೆ ಹಾಲಿನ ಪ್ರೋತ್ಸಾಹ ಧನವನ್ನು ಲೀಟರ್‌ಗೆ 1 ರೂ. ಹೆಚ್ಚಳ.
- ಉದ್ಯೋಗ ಸೃಷ್ಟಿ: ಸರ್ಕಾರಿ ಖಾಲಿ ಹುದ್ದೆಗಳ ಭರ್ತಿಗೆ ಕಾಲಮಿತಿಯ ನೇಮಕಾತಿ ಪ್ರಕ್ರಿಯೆ ಘೋಷಣೆ.
2013 ರಲ್ಲಿ ಮುಖ್ಯಮಂತ್ರಿಯಾದ ಕೂಡಲೇ ಸಿದ್ದರಾಮಯ್ಯ ಅವರು 'ಅನ್ನ ಭಾಗ್ಯ' ಘೋಷಿಸಿ 'ಅನ್ನರಾಮಯ್ಯ'ಎನಿಸಿಕೊಂಡಿದ್ದರು. ಈಗ 2028 ರ ವಿಧಾನಸಭಾ ಚುನಾವಣೆಯವರೆಗಿನ (ಉಳಿದ 1 ವರ್ಷ 10 ತಿಂಗಳ ಅವಧಿಗೆ) ಮುಖ್ಯಮಂತ್ರಿಯಾಗಿ ಗದ್ದುಗೆ ಏರುತ್ತಿರುವ ಡಿ.ಕೆ. ಶಿವಕುಮಾರ್ ಅವರು ಯಾವ ರೀತಿ ಇತಿಹಾಸ ಸೃಷ್ಟಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.