ಅಮೆರಿಕದ ಸುಪ್ರೀಂ ಕೋರ್ಟ್ ನೀಡಿರುವ ಈ ಮಹತ್ವದ ತೀರ್ಪು ಜಾಗತಿಕ ವಾಣಿಜ್ಯದ ಭವಿಷ್ಯದ ಬಗ್ಗೆ ದೊಡ್ಡ ಸಂವಾದವನ್ನು ಹುಟ್ಟುಹಾಕಿದೆ. ಈ ವಿದ್ಯಮಾನಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವು ತನ್ನ ಮೊದಲ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಅಮೆರಿಕದ ಮುಂದಿನ ಪ್ರತಿಯೊಂದು ಆಡಳಿತಾತ್ಮಕ ನಡೆಯ ಮೇಲೆ ತೀವ್ರ ನಿಗಾ ಇಟ್ಟಿರುವುದಾಗಿ ಸ್ಪಷ್ಟಪಡಿಸಿದೆ.
ಇತ್ತೀಚೆಗಷ್ಟೇ ಅಮೆರಿಕದ ಸುಪ್ರೀಂ ಕೋರ್ಟ್, ಟ್ರಂಪ್ ಅವರು ಹೇರಿದ್ದ ಜಾಗತಿಕ ಸುಂಕಗಳು ಅಸಂವಿಧಾನಿಕ ಎಂದು ತೀರ್ಪು ನೀಡಿ ಅವುಗಳನ್ನ ರದ್ದುಗೊಳಿಸಿತ್ತು. ಅಮೆರಿಕದ ನ್ಯಾಯಾಲಯದ ತೀರ್ಪು ಮತ್ತು ಟ್ರಂಪ್ ಅವರ ಘೋಷಣೆಗಳನ್ನು ಭಾರತ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಇದರಿಂದ ಭಾರತದ ರಫ್ತು ಮತ್ತು ಆಮದು ವ್ಯವಹಾರಕ್ಕೆ ಎಷ್ಟು ತೊಂದರೆಯಾಗಬಹುದು ಅಥವಾ ಲಾಭವಾಗಬಹುದು ಎಂಬ ಬಗ್ಗೆ ತಜ್ಞರು ಈಗ ತನಿಖೆ ನಡೆಸುತ್ತಿದ್ದಾರೆ ಎಂದು ವಾಣಿಜ್ಯ ಸಚಿವಾಲಯ ಹೇಳಿದೆ.
ಸುಪ್ರೀಂ ಕೋರ್ಟ್‌ನಿಂದ ಹಿನ್ನಡೆ ಅನುಭವಿಸಿದರೂ ಪಟ್ಟು ಬಿಡದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮತ್ತೆ ಸುಂಕದ ಅಸ್ತ್ರವನ್ನು ಪ್ರಯೋಗಿಸಿದ್ದಾರೆ ಕೋರ್ಟ್ ತೀರ್ಪಿಗೆ ಸವಾಲು ಎಂಬಂತೆ, 'ಸೆಕ್ಷನ್ 122' ರ ಅಡಿಯಲ್ಲಿ ತಮ್ಮ ವಿಶೇಷ ಅಧಿಕಾರ ಬಳಸಿ ಜಾಗತಿಕವಾಗಿ ಎಲ್ಲಾ ದೇಶಗಳ ಮೇಲೆ ಶೇಕಡಾ 10 ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸುವುದಾಗಿ ಘೋಷಿಸಿದ್ದಾರೆ. ಈಗಾಗಲೇ ಜಾರಿಯಲ್ಲಿರುವ ಸುಂಕದ ದರಗಳಿಗೆ ಹೆಚ್ಚುವರಿಯಾಗಿ 10% ತೆರಿಗೆಯ ಹೊರೆ ಬೀಳಲಿದೆ ಎಂಬ ಮಾಹಿತಿಯನ್ನ ಅವರು ತಮ್ಮ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಮೂಲಕ ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ.
ಜಾಗತಿಕವಾಗಿ ಎಲ್ಲಾ ದೇಶಗಳ ಮೇಲೆ ಸುಂಕ ಹೇರುವುದಾಗಿ ಟ್ರಂಪ್ ಹೇಳಿದ್ದರೂ, ಭಾರತದ ವಿಷಯದಲ್ಲಿ ಭಾರತದ ಜೊತೆಗಿನ ಈಗಿನ ವ್ಯಾಪಾರ ವ್ಯವಹಾರಗಳಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಇದು ಭಾರತದ ರಫ್ತುದಾರರಿಗೆ ಸದ್ಯಕ್ಕೆ ನೆಮ್ಮದಿ ನೀಡುವಂತಹ ಒಂದು ಒಳ್ಳೆಯ ಸುದ್ದಿಯಾಗಿದೆ.
ಅಮೆರಿಕದೊಂದಿಗಿನ ವ್ಯಾಪಾರ ಸಂಬಂಧವು ಭಾರತಕ್ಕೆ ಬಹಳ ಮುಖ್ಯವಾಗಿದ್ದು, ಅಲ್ಲಿನ ಸುಂಕದ ಬದಲಾವಣೆಗಳು ನಮ್ಮ ಐಟಿ ಮತ್ತು ಫಾರ್ಮಾ ಕ್ಷೇತ್ರಗಳಿಗೆ ಸವಾಲಾಗಿ ಪರಿಣಮಿಸಿವೆ. ಈ ಸುಂಕದ ಸಂಘರ್ಷವು ರಾಜತಾಂತ್ರಿಕ ಮಾರ್ಗದಲ್ಲಿ ಅಂತ್ಯಗೊಳ್ಳಲಿದೆಯೇ ಅಥವಾ ಕಾನೂನು ಸಮರವಾಗಿ ಬದಲಾಗಲಿದೆಯೇ ಎಂದು ಕಾದು ನೋಡಬೇಕಿದೆ. ದೇಶದ ವ್ಯಾಪಾರ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ತಡೆಯಲು ಭಾರತ ಸರ್ಕಾರವು ಅಮೆರಿಕದ ಆಡಳಿತದ ಜೊತೆ ಸತತ ಸಂಪರ್ಕ ಕಾಯ್ದುಕೊಂಡಿದೆ.