Apr 14, 2026 Languages : ಕನ್ನಡ | English

ಕಾರ್ಮಿಕರಿಗೆ ಬಂಪರ್ ಗಿಫ್ಟ್: ಸಂಬಳದಲ್ಲಿ ಶೇ. 21 ರಷ್ಟು ಹೆಚ್ಚಳ; ಆದ್ರೆ 20 ಸಾವಿರ ರೂ. ಸಂಬಳದ ಕಥೆಯೇನು?

ಇವತ್ತು ಉತ್ತರ ಪ್ರದೇಶದ ಕಾರ್ಮಿಕ ವಲಯದಲ್ಲಿ ದೊಡ್ಡ ಸುದ್ದಿಯೊಂದು ಹರಿದಾಡುತ್ತಿದೆ. ನೋಯ್ಡಾದಲ್ಲಿ ಕಾರ್ಮಿಕರು ನಡೆಸಿದ ಬೃಹತ್ ಪ್ರತಿಭಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಯೋಗಿ ಆದಿತ್ಯನಾಥ್ ಸರ್ಕಾರ, ಕಾರ್ಮಿಕರ ಕನಿಷ್ಠ ವೇತನದಲ್ಲಿ ಭರ್ಜರಿ ಏರಿಕೆ ಮಾಡಿದೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ "ಕನಿಷ್ಠ ಸಂಬಳ 20,000 ರೂ." ಅನ್ನೋ ಸುದ್ದಿಯ ಅಸಲಿಯತ್ತೇ ಬೇರೆ ಇದೆ. ಏನಿದು ಪೂರ್ತಿ ಮ್ಯಾಟರ್? ಇಲ್ಲಿದೆ ನೋಡಿ ಕಂಪ್ಲೀಟ್ ರಿಪೋರ್ಟ್.

ಸರ್ಕಾರದ ಹೊಸ ಆದೇಶ: ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ!! | Photo Credit: https://x.com/ndtv
ಸರ್ಕಾರದ ಹೊಸ ಆದೇಶ: ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ!! | Photo Credit: https://x.com/ndtv

ಅಸಲಿಗೆ ಈ ಗಲಾಟೆ ಶುರುವಾಗಿದ್ದು ಪಕ್ಕದ ಹರಿಯಾಣ ರಾಜ್ಯದ ಒಂದು ನಿರ್ಧಾರದಿಂದ. ಹರಿಯಾಣ ಸರ್ಕಾರ ತನ್ನ ಕಾರ್ಮಿಕರಿಗೆ ಶೇ. 35 ರಷ್ಟು ಸಂಬಳ ಹೆಚ್ಚಳ ಮಾಡಿತ್ತು. ಇದನ್ನು ಕಂಡ ನೋಯ್ಡಾ ಮತ್ತು ಗಾಜಿಯಾಬಾದ್ ಕಾರ್ಮಿಕರು, "ಪಕ್ಕದ ರಾಜ್ಯದಲ್ಲಿ ಅಷ್ಟೊಂದು ಸಂಬಳ ಕೊಡುವಾಗ ನಮಗೇಕೆ ಇಲ್ಲ?" ಎಂದು ಬೀದಿಗೆ ಇಳಿದಿದ್ದರು. ಈ ಪ್ರತಿಭಟನೆ ಒಂದು ಹಂತದಲ್ಲಿ ಹಿಂಸಾಚಾರಕ್ಕೂ ತಿರುಗಿತ್ತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡ ಯುಪಿ ಸರ್ಕಾರ ಈಗ ಮಧ್ಯಂತರ ವೇತನ ಹೆಚ್ಚಳದ ಘೋಷಣೆ ಮಾಡಿದೆ.

ಸರ್ಕಾರದ ಹೊಸ ಆದೇಶದ ಪ್ರಕಾರ, ಏಪ್ರಿಲ್ 1 ರಿಂದಲೇ ಜಾರಿಗೆ ಬರುವಂತೆ ಅಕುಶಲ ಕಾರ್ಮಿಕರ ವೇತನದಲ್ಲಿ ಶೇ. 21 ರವರೆಗೆ ಹೆಚ್ಚಳ ಮಾಡಲಾಗಿದೆ.

  • ನೋಯ್ಡಾ ಮತ್ತು ಗಾಜಿಯಾಬಾದ್: ಇಲ್ಲಿನ ಅಕುಶಲ ಕಾರ್ಮಿಕರ ಸಂಬಳ 11,313 ರೂ. ಇತ್ತು, ಈಗ ಅದು 13,690 ರೂ. ಗೆ ಏರಿಕೆಯಾಗಿದೆ.
  • ಅರೆ-ಕುಶಲ ಕಾರ್ಮಿಕರು: ಇವರ ಸಂಬಳ 12,445 ರೂ. ಇಂದ 15,059 ರೂ. ಗೆ ಏರಿದೆ.
  • ಕುಶಲ ಕಾರ್ಮಿಕರು: ಇವರ ವೇತನ 13,940 ರೂ. ಇಂದ 16,668 ರೂ. ವರೆಗೆ ಹೆಚ್ಚಳ ಕಂಡಿದೆ.

ನಗರ ಪಾಲಿಕೆ ವ್ಯಾಪ್ತಿಯಲ್ಲಿ ಶೇ. 15 ರಷ್ಟು ಮತ್ತು ರಾಜ್ಯದ ಉಳಿದ ಭಾಗಗಳಲ್ಲಿ ಶೇ. 9 ರಷ್ಟು ಸಂಬಳ ಹೆಚ್ಚಳ ಮಾಡಲಾಗಿದೆ.

ಕಾರ್ಮಿಕರಿಗೆ ಕನಿಷ್ಠ 20,000 ರೂ. ಸಂಬಳ ಕೊಡಲಾಗುತ್ತಿದೆ ಅನ್ನೋ ಒಂದು ಸುದ್ದಿ ಹರಿದಾಡುತ್ತಿತ್ತು. ಆದರೆ ಇದನ್ನು ಸರ್ಕಾರ ಸ್ಪಷ್ಟವಾಗಿ ನಿರಾಕರಿಸಿದೆ. ನಾವು ಅಷ್ಟು ದೊಡ್ಡ ಮಟ್ಟದ ಹೆಚ್ಚಳ ಮಾಡಿಲ್ಲ, ಈಗ ಮಾಡಿರೋದು ಕೇವಲ ಮಧ್ಯಂತರ ಹೆಚ್ಚಳ ಮಾತ್ರ. ರಾಷ್ಟ್ರಮಟ್ಟದ ಲೇಬರ್ ಕೋಡ್ ಅಡಿಯಲ್ಲಿ ವೇತನ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಸರ್ಕಾರ ಹೇಳಿದೆ. ಮುಂದಿನ ತಿಂಗಳು 'ವೇಜ್ ಬೋರ್ಡ್' ರಚನೆಯಾದ ಮೇಲೆ ಪೂರ್ಣ ಪ್ರಮಾಣದ ವೇತನ ನಿರ್ಧಾರವಾಗಲಿದೆ.

ಕೇವಲ ಸಂಬಳ ಹೆಚ್ಚಳ ಅಷ್ಟೇ ಅಲ್ಲ, ಸಿಎಂ ಯೋಗಿ ಆದಿತ್ಯನಾಥ್ ಅವರು ಉದ್ಯಮಿಗಳಿಗೆ ಒಂದು ಖಡಕ್ ಸೂಚನೆ ಕೊಟ್ಟಿದ್ದಾರೆ. "ಕಾರ್ಮಿಕರಿಗೆ ಸಕಾಲಕ್ಕೆ ಸಂಬಳ ಕೊಡಬೇಕು, ಓವರ್ ಟೈಮ್ ಮಾಡಿದರೆ ಅದಕ್ಕೆ ತಕ್ಕ ಹಣ ನೀಡಬೇಕು, ವಾರದ ರಜೆ ಇರಬೇಕು ಮತ್ತು ಮುಖ್ಯವಾಗಿ ಮಹಿಳಾ ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಸುರಕ್ಷತೆ ಮತ್ತು ಗೌರವ ಸಿಗಬೇಕು" ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಪ್ರತಿಭಟನೆಯಲ್ಲಿ ನುಸುಳಿ ಗಲಾಟೆ ಮಾಡಿದ "ಹೊರಗಿನ ವ್ಯಕ್ತಿಗಳ" ವಿರುದ್ಧ ಕಠಿಣ ಕ್ರಮ ಜರುಗಿಸಲು ಪೊಲೀಸರಿಗೆ ಆದೇಶಿಸಿದ್ದಾರೆ.

ಬೆಲೆ ಏರಿಕೆಯ ಈ ಕಾಲದಲ್ಲಿ ಕಾರ್ಮಿಕರ ಈ ಹೋರಾಟಕ್ಕೆ ಒಂದು ಜಯ ಸಿಕ್ಕಿದೆ ಎನ್ನಬಹುದು. ಹರಿಯಾಣಕ್ಕೆ ಹೋಲಿಸಿದರೆ ಸಂಬಳ ಸ್ವಲ್ಪ ಕಡಿಮೆ ಅನಿಸಿದರೂ, ಯುಪಿ ಸರ್ಕಾರದ ಈ ಶೇ. 21 ರಷ್ಟು ಏರಿಕೆ ಕಾರ್ಮಿಕರ ಪಾಲಿಗೆ ಒಂದು ಮಟ್ಟದ ಸಮಾಧಾನ ತಂದಿದೆ.

Latest News