ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ಮುಂಬರುವ ಬಕ್ರೀದ್ ಹಬ್ಬಕ್ಕಾಗಿ ಅತ್ಯಂತ ಕಟ್ಟುನಿಟ್ಟಿನ ಹೊಸ ಗೈಡ್‌ಲೈನ್ಸ್ ಹೊರಡಿಸಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ಸಲುವಾಗಿ, ಹಬ್ಬದ ಆಚರಣೆಯ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ರಸ್ತೆಗಳ ಮೇಲೆ ನಮಾಜ್ ಮಾಡುವುದಕ್ಕಾಗಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ (ಕುರ್ಬಾನಿ) ನೀಡುವುದಕ್ಕಾಗಲಿ ಬಿಲ್ಕುಲ್ ಅನುಮತಿ ಇಲ್ಲ ಎಂದು ಯುಪಿ ಸರ್ಕಾರ ಖಡಕ್ ಆಗಿ ಹೇಳಿದೆ.
ರಾಜ್ಯದ ಉನ್ನತ ಮಟ್ಟದ ಆಡಳಿತ ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಾಮರ್ಶನಾ ಸಭೆ ನಡೆಸಿದ ಸಿಎಂ ಯೋಗಿ ಆದಿತ್ಯನಾಥ್, ಹಬ್ಬದ ಎಲ್ಲ ಧಾರ್ಮಿಕ ಆಚರಣೆಗಳು ಕಾನೂನು ಮತ್ತು ಸಾಂಪ್ರದಾಯಿಕ ಚೌಕಟ್ಟಿನೊಳಗೇ ನಡೆಯಬೇಕು ಎಂದು ಎಲ್ಲ ಜಿಲ್ಲಾಡಳಿತಗಳಿಗೆ ಸ್ಟ್ರಿಕ್ಟ್ ಆರ್ಡರ್ ಹಾಕಿದ್ದಾರೆ. ಈ ಹೊಸ ನಿಯಮಗಳ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
ರಸ್ತೆ ಬ್ಲಾಕ್ ಮಾಡಿ ನಮಾಜ್ ಮಾಡುವಂತಿಲ್ಲ!
ಸಿಎಂ ಯೋಗಿ ಆದಿತ್ಯನಾಥ್ ಅವರ ಹೊಸ ಆದೇಶದ ಪ್ರಕಾರ, ಮಸೀದಿಗಳು ಮತ್ತು ಈದ್ಗಾ ಮೈದಾನಗಳಂತಹ ಅಧಿಕೃತ ಧಾರ್ಮಿಕ ಸ್ಥಳಗಳಲ್ಲಿ ಮಾತ್ರ ಹಬ್ಬದ ನಮಾಜ್ ಸಲ್ಲಿಸಲು ಅವಕಾಶವಿರುತ್ತದೆ. ಯಾವುದೇ ಕಾರಣಕ್ಕೂ ಸಾರ್ವಜನಿಕ ರಸ್ತೆಗಳನ್ನು ಬ್ಲಾಕ್ ಮಾಡಿ ಪ್ರಾರ್ಥನೆ ಮಾಡುವಂತಿಲ್ಲ ಎಂದು ಪೊಲೀಸರಿಗೆ ಸೂಚಿಸಲಾಗಿದೆ.
ಒಂದು ವೇಳೆ ಮಸೀದಿಗಳಲ್ಲಿ ಜಾಗದ ಕೊರತೆ ಇದ್ದರೆ, ಅಗತ್ಯಕ್ಕೆ ತಕ್ಕಂತೆ ಬೇರೆ ಬೇರೆ ಶಿಫ್ಟ್‌ಗಳ ಆಧಾರದ ಮೇಲೆ (ಬೇರೆ ಬೇರೆ ಸಮಯದಲ್ಲಿ) ಪ್ರಾರ್ಥನೆ ಸಲ್ಲಿಸಬೇಕು ಎಂದು ಭಕ್ತರಿಗೆ ತಿಳಿಸಲಾಗಿದೆ. ಸಾರ್ವಜನಿಕರ ಸಂಚಾರಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು ಎನ್ನುವುದು ಸರ್ಕಾರದ ಕಟ್ಟುನಿಟ್ಟಿನ ನಿಲುವು.
ಪ್ರಾಣಿ ಬಲಿ ಹಾಗೂ ಮಾಂಸ ಮಾರಾಟಕ್ಕೆ ಬಿಗ್ ಬ್ರೇಕ್!
ಬಕ್ರೀದ್ ಹಬ್ಬದ ಪ್ರಮುಖ ಆಚರಣೆಯಾದ ಕುರ್ಬಾನಿ (ಪ್ರಾಣಿ ಬಲಿ) ವಿಚಾರದಲ್ಲೂ ಯುಪಿ ಸರ್ಕಾರ ಹಲವು ಕಠಿಣ ರೂಲ್ಸ್ ಜಾರಿಗೆ ತಂದಿದೆ;
ಅನಧಿಕೃತ ಜಾಗಗಳಲ್ಲಿ ಬಲಿ ನಿಷೇಧ - ರಸ್ತೆ ಬದಿ ಅಥವಾ ಸಾರ್ವಜನಿಕ ಜಾಗಗಳಲ್ಲಿ ಪ್ರಾಣಿ ಬಲಿ ನೀಡುವಂತಿಲ್ಲ. ಕೇವಲ ಮೊದಲೇ ನಿಗದಿಪಡಿಸಿದ ಮತ್ತು ಸಾಂಪ್ರದಾಯಿಕವಾಗಿ ಅನುಮೋದಿಸಲ್ಪಟ್ಟ ಜಾಗಗಳಲ್ಲಿ ಮಾತ್ರವೇ ಬಲಿ ನೀಡಲು ಅವಕಾಶವಿರುತ್ತದೆ.
ಕಸಾಯಿಖಾನೆಗಳ ಮೇಲೆ ಹದ್ದಿನಕಣ್ಣು - ರಾಜ್ಯದಲ್ಲಿ ಯಾವುದೇ ಇಲ್ಲೀಗಲ್ ಕಸಾಯಿಖಾನೆಗಳು ನಡೆಯದಂತೆ ತೀವ್ರ ನಿಗಾ ಇಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಲೈಸೆನ್ಸ್ ಹೊಂದಿರುವ ಕಸಾಯಿಖಾನೆಗಳೂ ಸಹ ತಮ್ಮ ಲಿಮಿಟ್‌ಗಿಂತ ಹೆಚ್ಚು ಪ್ರಾಣಿಗಳನ್ನು ಇಟ್ಟುಕೊಳ್ಳುವಂತಿಲ್ಲ.
ಬಹಿರಂಗ ಮಾರಾಟಕ್ಕೆ ಬ್ರೇಕ್ - ಹಬ್ಬದ ದಿನಗಳಲ್ಲಿ ಮಾಂಸವನ್ನು ಬಹಿರಂಗವಾಗಿ, ತೆರೆದ ಜಾಗದಲ್ಲಿ ಮಾರಾಟ ಮಾಡುವುದನ್ನು ತಡೆಯಲು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.
ತ್ಯಾಜ್ಯ ವಿಲೇವಾರಿ - ಪ್ರಾಣಿ ಬಲಿಯ ನಂತರ ಉಳಿಯುವ ತ್ಯಾಜ್ಯ ಮತ್ತು ಅವಶೇಷಗಳನ್ನು ತಕ್ಷಣವೇ ಕ್ಲೀನ್ ಮಾಡಲು ಸ್ಥಳೀಯ ಸಂಸ್ಥೆಗಳು ಹಾಗೂ ಮಹಾನಗರ ಪಾಲಿಕೆಗಳಿಗೆ ಸರ್ಕಾರ ಆದೇಶಿಸಿದೆ. ಯಾವುದೇ ರೀತಿಯ ಕೋಮು ಉದ್ವಿಗ್ನತೆ ಸೃಷ್ಟಿಯಾಗದಂತೆ ಇಡೀ ಆಡಳಿತ ಯಂತ್ರ ಅಲರ್ಟ್ ಆಗಿದೆ.
ಈ ವರ್ಷ ಮೇ 28ಕ್ಕೆ ಬಕ್ರೀದ್ ಹಬ್ಬದ ಸಡಗರ
ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ಹಾಗೂ ಪ್ರಮುಖ ಹಬ್ಬಗಳಲ್ಲಿ ಒಂದಾದ ಬಕ್ರೀದ್, ತ್ಯಾಗ ಮತ್ತು ಬಲಿದಾನದ ಸಂಕೇತವಾಗಿದೆ. ಅಲ್ಲಾಹನ ಮೇಲಿನ ಅಪಾರ ಭಕ್ತಿಗಾಗಿ ಪ್ರವಾದಿ ಇಬ್ರಾಹಿಂ ಅವರು ತಮ್ಮ ಸ್ವಂತ ಪುತ್ರನನ್ನೇ ತ್ಯಾಗ ಮಾಡಲು ಸಿದ್ಧರಾದ ಐತಿಹಾಸಿಕ ಘಟನೆಯ ನೆನಪಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಂದಿನಿಂದ ಈ ಪವಿತ್ರ ದಿನದಂದು ಮುಸ್ಲಿಂ ಬಾಂಧವರು ಪ್ರಾಣಿ ಬಲಿ ನೀಡುವ ಮೂಲಕ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಸಾಮಾನ್ಯವಾಗಿ ಚಂದ್ರನ ದರ್ಶನದ ಆಧಾರದ ಮೇಲೆ ಬಕ್ರೀದ್ ದಿನಾಂಕ ನಿರ್ಧಾರವಾಗುತ್ತದೆ. ಈ ವರ್ಷ ನಿರೀಕ್ಷಿತ ಸಮಯಕ್ಕೆ 'ಧುಲ್ ಹಿಜ್ಜಾ' ಮಾಸದ ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ, ಭಾರತದ ಬಹುತೇಕ ಭಾಗಗಳಲ್ಲಿ ಮುಂಬರುವ ಮೇ 28ರ ಗುರುವಾರದಂದು ಸಡಗರದ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ. ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬ ಆಚರಿಸಲು ಸರ್ಕಾರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ!