ಉಡುಪಿ ಜಿಲ್ಲೆಯ ಉದ್ಯಾವರದಲ್ಲಿ ವೃದ್ಧ ರೋಗಿಗೆ ತುರ್ತು ಪರಿಸ್ಥಿತಿಯಲ್ಲಿ 108 ಆಂಬುಲೆನ್ಸ್ ಸಿಗದೆ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ. ರಾತ್ರಿ 7:00 ಗಂಟೆಗೆ ಕರೆ ಮಾಡಿದರೂ ಆಂಬುಲೆನ್ಸ್ ತಲುಪದೆ, ರಾತ್ರಿ 9:30 ಕಳೆದರೂ ಸಹಾಯ ದೊರಕದ ಘಟನೆ ನಡೆದಿದೆ. ಅಸ್ವಸ್ಥಗೊಂಡಿದ್ದ ವೃದ್ಧ ರೋಗಿಗೆ ತಕ್ಷಣ ಚಿಕಿತ್ಸೆ ಅಗತ್ಯವಿದ್ದರೂ, 108 ಆಂಬುಲೆನ್ಸ್ ತಡವಾಗಿ ಬರುತ್ತದೆ ಎಂಬ ಮಾಹಿತಿ ಕುಟುಂಬಸ್ಥರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿಗೆ ವಿಷಯ ತಿಳಿಸಲಾಯಿತು. ಅವರು ತಕ್ಷಣ ಮಾನವೀಯತೆ ಮೆರೆದಿದ್ದು, ತಮ್ಮ ಗೂಡ್ಸ್ ಟೆಂಪೋದಲ್ಲಿ ಮಂಚವನ್ನು ಇರಿಸಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದರು.
ಸಮಯಕ್ಕೆ ದೊರಕದ ಆಂಬುಲೆನ್ಸ್ ಸೇವೆ ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ. ಕಳೆದ ಒಂದು ವರ್ಷದಿಂದ ಈ ಸಮಸ್ಯೆ ಮುಂದುವರಿದಿದ್ದರೂ ಪರಿಹಾರ ಸಿಗದಿರುವುದನ್ನು ಸ್ಥಳೀಯರು ಆರೋಪಿಸಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಆಂಬುಲೆನ್ಸ್ ತಡವಾಗಿ ಬರುವುದು ಸಾರ್ವಜನಿಕರ ಜೀವದ ಜೊತೆ ಆಟವಾಡುವಂತಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶು ಶೆಟ್ಟಿ ತಮ್ಮ ಮಾನವೀಯ ಕಾರ್ಯದಿಂದ ವೃದ್ಧರ ಜೀವ ಉಳಿಸಿದರೂ, ಸರ್ಕಾರದ ತುರ್ತು ಸೇವೆಗಳ ನಿರ್ಲಕ್ಷ್ಯವನ್ನು ಪ್ರಶ್ನಿಸಿದ್ದಾರೆ. “ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡ ಬೇಡಿ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆ 108 ಆಂಬುಲೆನ್ಸ್ ಸೇವೆಯ ಕಾರ್ಯಕ್ಷಮತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಸಾರ್ವಜನಿಕರ ಜೀವ ರಕ್ಷಣೆಗಾಗಿ ತುರ್ತು ಸೇವೆಗಳು ಸಮಯಕ್ಕೆ ತಲುಪುವಂತೆ ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.