ಸೋಶಿಯಲ್ ಮೀಡಿಯಾದಲ್ಲಿ 'ಹೀರೋ' ಆಗಬೇಕು ಅನ್ನೋ ಹುಚ್ಚು ಈ ಬಾರಿ ಮೂವರು ಸಹೋದರರ ಪ್ರಾಣವನ್ನೇ ಬಲಿ ತಗೊಂಡಿದೆ. ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿರೋ ಈ ಘಟನೆ ಕೇವಲ ಸುದ್ದಿಯಲ್ಲ, ಇದು ಇವತ್ತಿನ ಯುವಜನತೆಗೆ ಒಂದು ದೊಡ್ಡ ಎಚ್ಚರಿಕೆ ಗಂಟೆ. ಹದಿನೈದು ಸೆಕೆಂಡ್‌ನ ವಿಡಿಯೋಗಾಗಿ ಜೀವವನ್ನೇ ಪಣಕ್ಕಿಟ್ಟ ಆ ಯುವಕರು ಇಂದು ಹೆ*ಣವಾಗಿ ಮನೆಗೆ ಮರಳಿದ್ದಾರೆ.
ಏಪ್ರಿಲ್ 14ರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಮಧ್ಯಪ್ರದೇಶದ ಮೌಗಂಜ್ ಸಮೀಪದ ರಾಷ್ಟ್ರೀಯ ಹೆದ್ದಾರಿ 135ರಲ್ಲಿ ಈ ಭೀಕರ ಘಟನೆ ಸಂಭವಿಸಿದೆ. 17 ವರ್ಷದ ಅವಳಿ ಸಹೋದರರಾದ ಉಪಲಕ್ಷ್ಯ ಮತ್ತು ಹೇಮರಾಜ್ ಕೋಲ್, ತಮ್ಮ 22 ವರ್ಷದ ಅಣ್ಣ ಅಮ್ರೀಶ್ ಕೋಲ್ ಜೊತೆ ಒಂದೇ ಬೈಕ್‌ನಲ್ಲಿ ಹೊರಟಿದ್ದರು. ಬೈಕ್ ಮೇಲೆ ಈ ಸಹೋದರರು ಸಖತ್ ಸ್ಟಂಟ್ ಮಾಡ್ತಾ, ರೀಲ್ಸ್‌ಗಾಗಿ ಪೋಸ್ ಕೊಡ್ತಾ ವೇಗವಾಗಿ ಹೋಗ್ತಿದ್ರು.
ಅವರ ಹಿಂದೆ ಬರುತ್ತಿದ್ದ ಸ್ನೇಹಿತರು ಆ ಸ್ಟಂಟ್‌ಗಳನ್ನ ತಮ್ಮ ಫೋನ್‌ನಲ್ಲಿ ಶೂಟ್ ಮಾಡ್ತಿದ್ರು. ಬೈಕ್ ಚಲಾಯಿಸುವಾಗ ಈ ಸಹೋದರರು ಹೆಲ್ಮೆಟ್ ಧರಿಸಿರಲಿಲ್ಲ, ಜೊತೆಗೆ ಬೈಕ್ ಮೇಲೆ ಮೂವರು ಸವಾರರಿದ್ದರು. ಅತಿಯಾದ ವೇಗ ಮತ್ತು ಸ್ಟಂಟ್ ಮಾಡುವ ಹಪಾಹಪಿಯಲ್ಲಿ, ರಸ್ತೆಯ ಪಕ್ಕದಲ್ಲಿ ನಿಂತಿದ್ದ ಇಟ್ಟಿಗೆ ತುಂಬಿದ ಲಾರಿಗೆ ಇವರ ಬೈಕ್ ಜೋರಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಚಲಾಯಿಸುತ್ತಿದ್ದ ಮೂವರು ಸಹೋದರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಕೇಳಿಬಂದಿದೆ. ವಿಡಿಯೋ ಮಾಡುತ್ತಾ ಇವರ ಹಿಂದೆಯೇ ಬರುತ್ತಿದ್ದ ಸ್ನೇಹಿತರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಪೊಲೀಸ್ ಇಲಾಖೆ ತಕ್ಷಣ ಸ್ಥಳಕ್ಕೆ ಬಂದಿದ್ದು, ತನಿಖೆ ವೇಳೆ ಆ ಯುವಕರ ಬಳಿ ಒಂದು ಅಕ್ರಮ ಪಿಸ್ತೂಲ್ ಕೂಡ ಪತ್ತೆಯಾಗಿದೆ ಎಂದು ತಿಳಿಸಿದೆ.
ಸೋಶಿಯಲ್ ಮೀಡಿಯಾ ವ್ಯೂಸ್‌ಗಾಗಿ ಇಂತಹ ಅಪಾಯಕಾರಿ ಕೆಲಸ ಮಾಡಿದ್ದೇ ಈ ದುರಂತಕ್ಕೆ ಕಾರಣ ಅಂತ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಮೂವರು ಗಂಡು ಮಕ್ಕಳನ್ನು ಕಳೆದುಕೊಂಡ ಆ ತಂದೆ-ತಾಯಿಯ ಆಕ್ರಂದನ ಅಲ್ಲಿ ನೆರೆದಿದ್ದವರ ಕಣ್ಣಲ್ಲಿ ನೀರು ತರಿಸುವಂತಿತ್ತು.
ಸೋಶಿಯಲ್ ಮೀಡಿಯಾ ಅನ್ನೋದು ನಮ್ಮ ಕೌಶಲ ತೋರಿಸೋಕೆ ಇರಬೇಕೇ ಹೊರತು, ಪ್ರಾಣ ಕಳೆದುಕೊಳ್ಳೋಕೆ ಅಲ್ಲ. ಹೆದ್ದಾರಿಗಳು ಸ್ಟಂಟ್ ಮಾಡೋ ಜಾಗವಲ್ಲ, ನ್ಯಾಷನಲ್ ಹೈವೇಗಳಲ್ಲಿ ದೊಡ್ಡ ದೊಡ್ಡ ವಾಹನಗಳು ಓಡಾಡುತ್ತಿರುತ್ತವೆ. ಅಲ್ಲಿ ಒಂದು ಸಣ್ಣ ಬ್ಯಾಲೆನ್ಸ್ ತಪ್ಪಿದರೂ ಪ್ರಾಣ ಉಳಿಯೋದು ಕಷ್ಟ. ವ್ಯೂಸ್‌ಗಿಂತ ಜೀವ ಮುಖ್ಯ, ನೀವು ಮಾಡುವ ರೀಲ್ಸ್ ವೈರಲ್ ಆಗಬಹುದು, ಸಾವಿರಾರು ಲೈಕ್ಸ್ ಬರಬಹುದು. ಆದರೆ ನೀವು ಹೋದ ಮೇಲೆ ಆ ಲೈಕ್ಸ್ ಮತ್ತು ಕಾಮೆಂಟ್‌ಗಳಿಂದ ಏನು ಪ್ರಯೋಜನ? ಮೂವರು ಮಕ್ಕಳನ್ನು ಒಂದೇ ಸಮಯದಲ್ಲಿ ಕಳೆದುಕೊಂಡ ಆ ತಂದೆ-ತಾಯಿಯ ಸ್ಥಿತಿ ಏನಾಗಿರಬೇಡ? ನಿಮ್ಮ ಕ್ಷಣಿಕ ಖುಷಿ ಅವರ ಇಡೀ ಜೀವನವನ್ನು ಅಂಧಕಾರಕ್ಕೆ ದೂಡಬಹುದು.
Shocking footage captures a tr@gic accident in Madhya Pradesh: Three young boys on a motorcycle, none wearing helmets, with one waving country-made gun. Just seconds later, they slammed into a stationary truck parked roadside - kiIIing all three instantlypic.twitter.com/hR1KxbhUGF
— Piyush Rai (@Benarasiyaa) April 19, 2026
ಕೊನೆಯ ಮಾತು: ವೀರಾವೇಶ ತೋರಿಸೋಕೆ ರೈಲ್ವೇ ಟ್ರ್ಯಾಕ್, ಹೈವೇಗಳನ್ನು ಬಳಸಬೇಡಿ. ಸಾಹಸ ಮಾಡಲೇಬೇಕು ಅಂದ್ರೆ ಅದಕ್ಕೇ ಆದ ಸುರಕ್ಷಿತ ಜಾಗಗಳಿವೆ, ಅಲ್ಲಿ ತೋರಿಸಿ. ಲೈಕ್ಸ್ ಮತ್ತು ವ್ಯೂಸ್‌ಗಳ ‘ಹಸಿವಿಗೆ’ ನಿಮ್ಮ ಕುಟುಂಬದ ನೆಮ್ಮದಿಯನ್ನು ಬಲಿ ಕೊಡಬೇಡಿ.