Mar 1, 2026 Languages : ಕನ್ನಡ | English

ಜೀವ ಭಯವಿಲ್ಲದೆ ಕೋಟೆಯ ತುತ್ತ ತುದಿಗೆ ಏರಿದ ಹುಚ್ಚು ಹುಡುಗರು - ರಿಲ್ಸ್ ಗಾಗಿ ಹೀಗೆಲ್ಲಾ ಮಾಡ್ತರ?

ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿರುವ ಐತಿಹಾಸಿಕ ಕಲ್ಯಾಣ ಕೋಟೆ ಇಂದು ಯುವಕರ ಹುಚ್ಚಾಟದಿಂದ ಸುದ್ದಿಯಾಗಿದೆ. ಸಾವಿನ ಹಂಗು ತೊರೆದು, ಇನ್‌ಸ್ಟಾಗ್ರಾಮ್ ರೀಲ್ಸ್‌ಗಾಗಿ ಕಾಲೇಜು ವಿದ್ಯಾರ್ಥಿಗಳು ಕೋಟೆಯ ತುದಿಯಲ್ಲಿ ನಿಂತು ವಿಡಿಯೋಗಳನ್ನು ಮಾಡುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಬೀದರ್ ಜಿಲ್ಲೆಯ ಐತಿಹಾಸಿಕ ಕೋಟೆಯಲ್ಲಿ ಯುವಕರ ಸಾಹಸ
ಬೀದರ್ ಜಿಲ್ಲೆಯ ಐತಿಹಾಸಿಕ ಕೋಟೆಯಲ್ಲಿ ಯುವಕರ ಸಾಹಸ

10ನೇ ಶತಮಾನದಲ್ಲಿ ಕಲ್ಯಾಣ ಚಾಳುಕ್ಯರು ನಿರ್ಮಿಸಿದ ಈ ಕೋಟೆ ಪ್ರತಿದಿನ ನೂರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದರೆ, ಸೂಕ್ತ ಭದ್ರತೆ ಮತ್ತು ನಿಯಂತ್ರಣ ಇಲ್ಲದ ಕಾರಣದಿಂದ ಕೋಟೆಯ ತುದಿಯಲ್ಲಿ ಬೇಕಾಬಿಟ್ಟಿ ಓಡಾಟ, ಫೋಟೋಶೂಟ್ ಹಾಗೂ ರೀಲ್ಸ್ ಚಿತ್ರೀಕರಣ ನಡೆಯುತ್ತಿದೆ. ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಕಂಟಕವಾಗುವ ಪರಿಸ್ಥಿತಿ ಉಂಟಾಗಬಹುದು ಎಂಬ ಭಯ ಸ್ಥಳೀಯರಲ್ಲಿ ವ್ಯಕ್ತವಾಗಿದೆ. 

ಯುವಕರು ಮೋಜು ಮಸ್ತಿ ನೆಪದಲ್ಲಿ ಕೋಟೆಯ ತುದಿಯಲ್ಲಿ ನಿಂತು ವಿಡಿಯೋಗಳನ್ನು ಮಾಡುತ್ತಿರುವುದು, “ವೀವ್ಸ್” ಮತ್ತು “ಲೈಕ್ಸ್” ಗಳಿಗಾಗಿ ಜೀವವನ್ನು ಪಣಕ್ಕಿಡುವಂತಾಗಿದೆ. ಇಂತಹ ಘಟನೆಗಳು ಪ್ರವಾಸಿಗರ ಸುರಕ್ಷತೆಗೆ ಅಪಾಯ ಉಂಟುಮಾಡುತ್ತವೆ. ಸ್ಥಳೀಯರು ಹಾಗೂ ಹಿರಿಯರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, “ಕೋಟೆ ನಮ್ಮ ಐತಿಹಾಸಿಕ ಹೆಮ್ಮೆ. ಅದನ್ನು ರೀಲ್ಸ್‌ಗಾಗಿ ಅಪಾಯದ ಸ್ಥಳವನ್ನಾಗಿಸಬಾರದು” ಎಂದು ಹೇಳಿದ್ದಾರೆ.

ಜಿಲ್ಲಾಡಳಿತವು ತಕ್ಷಣ ಕ್ರಮ ಕೈಗೊಂಡು, ಕೋಟೆಯ ಆವರಣದಲ್ಲಿ ಭದ್ರತೆ ಹೆಚ್ಚಿಸಿ, ಇಂತಹ ಹುಚ್ಚಾಟಕ್ಕೆ ಕಡಿವಾಣ ಹಾಕಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ. ಪ್ರವಾಸಿಗರ ಸುರಕ್ಷತೆಗಾಗಿ ಗಾರ್ಡ್‌ಗಳನ್ನು ನಿಯೋಜಿಸುವುದು, ಪ್ರವೇಶ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯವಾಗಿದೆ.

ಹೌದು, ಐತಿಹಾಸಿಕ ಬಸವಕಲ್ಯಾಣ ಕೋಟೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕ. ಅದನ್ನು ಕೇವಲ ಸಾಮಾಜಿಕ ಜಾಲತಾಣದ ವೀವ್ಸ್‌ಗಾಗಿ ಅಪಾಯದ ಸ್ಥಳವನ್ನಾಗಿಸುವುದು ಸರಿಯಲ್ಲ. ಯುವಕರಿಗೆ ಜವಾಬ್ದಾರಿಯುತ ನಡೆ ಅಗತ್ಯ, ಜೊತೆಗೆ ಆಡಳಿತವು ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಇಂತಹ ಘಟನೆಗಳಿಗೆ ಕಡಿವಾಣ ಬೀಳಬಹುದು.

Latest News