ಕೇರಳ ರಾಜ್ಯ ಸರಕಾರ ಅಲ್ಲಿನ ಖಾಸಗಿ ನೌಕರರಿಗೋಸ್ಕರ ಮಹತ್ತರ ನಿರ್ಧಾರ ಕೈಗೊಂಡಿದೆ. ಅದುವೇ "ರೈಟ್ ಟು ಡಿಸ್ಕನೆಟ್ ". ಇದು ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬರ ಕಾನೂನು ಹಕ್ಕು ಎಂಬ ಸಾರಾಂಶ ಕೇರಳ ಕಾನೂನು ಎತ್ತಿ ಹಿಡಿದಿದೆ. ಕೆಲಸದ ಸಮಯ ಮುಗಿದ ಮೇಲೆ ನೌಕರರಿಗೆ ಕಚೇರಿಗಳು ಯಾವುದೇ ತೊಂದರೆ ನೀಡುವಂತಿಲ್ಲ, ಹಾಗೆ ಯಾವುದೇ ಕಾಲ್ಸ್ ಹಾಗು ಮೆಸೇಜ್ ಇಮೇಲ್ ಮೂಲಕ ಅಥವಾ ಯಾವ ಆನ್ಲೈನ್ ಮೀಟಿಂಗ್ ಮಾಡಬಾರದು ಎಂದು ಹೊಸ ಹೆಜ್ಜೆಯ ಆದೇಶ ಹೊರಡಿಸಿದೆ. ಇದು ನೌಕರರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀಳುತ್ತದೆ, ಕೆಲಸ ಎಷ್ಟ್ಯು ಮುಖ್ಯವೋ ಅಷ್ಟೇ ಮುಖ್ಯ ಅವರ ಅರೋಗ್ಯ ಕೂಡ ಎಂದು ಹೇಳಿದೆ.
ಕಚೇರಿ ಸಮಯದ ನಂತರ ನೌಕರರು ಫೋನ್ ಕಾಲ್ ಅಥವಾ ಮೆಸೇಜ್ ಗೆ ಪ್ರತಿಕ್ರಿಯೆ ನೀಡದೆ ಹೋದರೂ ಅವರನ್ನು ಕೆಲಸದಿಂದ ತೆಗೆಯುವಂತಿಲ್ಲ, ಅವರಿಗೆ ಹುದ್ದೆಯ ಇಳಿಕೆ, ಅಥವಾ ಅವರ ಕೆಲಸದ ಸ್ಥಾನ ಬದಲಾವಣೆ ಮಾಡಬಾರದು, ಆ ಭಯ ಕೂಡ ಅವರಿಗೆ ಈ ಆದೇಶದ ಮೂಲಕ ಇರದು ಎಂದು ತಿಳಿಸಿದ್ದು ಈ ಮಹತ್ತರ ನಿರ್ಧಾರ ಕೈಗೊಂಡಿದೆ ಕೇರಳ ಸರ್ಕಾರ. ಇದು ನಮ್ಮ ಇಂಡಿಯಾದಲ್ಲೇ ಈ ಮಹತ್ತರ ಕಾರ್ಯ ಕೈಗೊಂಡ ಮೊದಲ ರಾಜ್ಯ ಕೇರಳ ಆಗಿ ಹೊರಹೊಮ್ಮಿದೆ. ಕೆಲಸ ಹಾಗು ಆರೋಗ್ಯದ ಸಮತೋಲನ ಕಾಪಾಡಬೇಕು ಎನ್ನುವ ನಿಟ್ಟಿನಲ್ಲಿ ಈ "ರೈಟ್ ಟು ಡಿಸ್ಕನೆಕ್ಟ್" ಎಂಬ ಹೆಜ್ಜೆ ಇಟ್ಟಿದೆ. ಇದು ಭಾರತ ದೇಶದ ಉಳಿದ ರಾಜ್ಯಗಳು ಸಹ ಈ ಆದೇಶ ಹಿಂಬಾಲಿಸಿದರೆ ಒಳಿತು ಎಂಬುದು ಕೆಲವರ ಅಭಿಪ್ರಾಯ.
ಅಸಲಿಗೆ ಈ "ರೈಟ್ ಟು ಡಿಸ್ಕನೆಕ್ಟ್" ಕಾನೂನು ಎಂದರೆ ಕೆಲಸದ ಸಮಯದ ಹೊರಗೆ ಉದ್ಯೋಗಿಗಳು ತಮ್ಮ ಕೆಲಸ ಸಂಬಂಧಿತ ಕರೆಗಳು, ಇಮೇಲ್‌ಗಳು ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸಬೇಕಾದ ಬಾಧ್ಯತೆಯಿಂದ ಮುಕ್ತರಾಗುವ ಹಕ್ಕು ಎಂದು ಕೇಳಿ ಬಂದಿದೆ. ಇದು ಉದ್ಯೋಗಿಗಳ ಮಾನಸಿಕ ಆರೋಗ್ಯ ಹಿನ್ನೆಲೆಯಲ್ಲಿ, ಅವರ ಅರೋಗ್ಯ ಹಿತದೃಷ್ಟಿಯಿಂದ, ಅವರ ವೈಯಕ್ತಿಕ ಜೀವನ ಮತ್ತು ಕೆಲಸ-ಜೀವನ ಸಮತೋಲನವನ್ನು ಕಾಪಾಡಲು ರೂಪಿಸಲಾದ ಮಹತ್ವದ ಹಕ್ಕಾಗಿದ್ದು ಜೊತೆಗೆ ಇದು ದೊಡ್ಡ ಹೆಜ್ಜೆ ಎನ್ನಲಾಗಿದೆ. ಡಿಜಿಟಲ್ ಯುಗದಲ್ಲಿ "ಎಂದಿಗೂ ಆನ್‌ಲೈನ್" ಸಂಸ್ಕೃತಿ ಹೆಚ್ಚುತ್ತಿರುವುದರಿಂದ ಉದ್ಯೋಗಿಗಳು ಕೆಲಸದ ಸಮಯದ ಹೊರಗೂ ನಿರಂತರವಾಗಿ ಸಂಪರ್ಕದಲ್ಲಿರಬೇಕಾದ ಒತ್ತಡಕ್ಕೆ ಪ್ರತಿದಿನ ಹೆಚ್ಚು ಒಳಗಾಗುತ್ತಿದ್ದಾರೆ. ಇದರಿಂದ ಬರ್ನ್‌ಔಟ್, ಒತ್ತಡ, ಮತ್ತು ಕುಟುಂಬ ಜೀವನದ ಅಸಮತೋಲನ ಉಂಟಾಗುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು "ರೈಟ್ ಟು ಡಿಸ್ಕನೆಕ್ಟ್" ಕಾನೂನು ಅನೇಕ ದೇಶಗಳಲ್ಲಿ ಚರ್ಚೆಗೆ ಬಂದಿದೆ.
ಭಾರತದಲ್ಲಿ 2019ರಲ್ಲಿ ಲೋಕಸಭೆಯಲ್ಲಿ "ರೈಟ್ ಟು ಡಿಸ್ಕನೆಕ್ಟ್ ಬಿಲ್" ಪ್ರಸ್ತಾಪಿಸಲಾಯಿತು. ಈ ಬಿಲ್ ಪ್ರಕಾರ, ಉದ್ಯೋಗಿಗಳು ಕೆಲಸದ ಸಮಯದ ಹೊರಗೆ ಕರೆಗಳು ಅಥವಾ ಇಮೇಲ್‌ಗಳಿಗೆ ಪ್ರತಿಕ್ರಿಯಿಸದ ಹಕ್ಕು ಹೊಂದಿರುತ್ತಾರೆ. ಜೊತೆಗೆ, ಉದ್ಯೋಗಿಗಳ ಕಲ್ಯಾಣಕ್ಕಾಗಿ "Employees’ Welfare Authority" ಸ್ಥಾಪನೆ ಮಾಡುವುದನ್ನು ಬಿಲ್‌ನಲ್ಲಿ ಸೂಚಿಸಲಾಗಿದೆ. ಇದು ಕೇರಳದಲ್ಲಿ ಚಾಲ್ತಿಗೆ ಬರುತ್ತಿರುವುದು ದೇಶದಲ್ಲೇ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂತರರಾಷ್ಟ್ರೀಯದಲ್ಲಿ ನೋಡುವುದಾದರೆ, ಫ್ರಾನ್ಸ್, ಸ್ಪೇನ್, ಮತ್ತು ಇಟಲಿ ದೇಶಗಳಲ್ಲಿ ಈ ಕಾನೂನು ಈಗಾಗಲೇ ಜಾರಿಯಲ್ಲಿದೆ. ಫ್ರಾನ್ಸ್‌ನಲ್ಲಿ 2017ರಿಂದಲೇ ಉದ್ಯೋಗಿಗಳಿಗೆ ಕೆಲಸದ ಸಮಯದ ಹೊರಗೆ ಸಂಪರ್ಕ ಕಡಿತಗೊಳಿಸುವ ಹಕ್ಕು ನೀಡಲಾಗಿದೆ. ಇದರಿಂದ ಉದ್ಯೋಗಿಗಳ ಮಾನಸಿಕ ಆರೋಗ್ಯ ಸುಧಾರಣೆ, ಕೆಲಸದ ಉತ್ಪಾದಕತೆ ಹೆಚ್ಚಳ ಕಂಡುಬಂದಿದೆ.
ಈ ಕಾನೂನು ಜಾರಿಯಾದರೆ ಉದ್ಯೋಗಿಗಳಿಗೆ ಮಾನಸಿಕ ಶಾಂತಿ ದೊರೆಯುತ್ತದೆ. ಕುಟುಂಬ ಜೀವನಕ್ಕೆ ಹೆಚ್ಚಿನ ಸಮಯ ಸಿಗುತ್ತದೆ, ಉತ್ಪಾದಕತೆ ಮತ್ತು ಸೃಜನಶೀಲತೆ ಹೆಚ್ಚುತ್ತದೆ, ಅತಿಯಾದ ಕೆಲಸದ ಒತ್ತಡದಿಂದ ಮುಕ್ತಿ ಸಿಕ್ಕಂತಾಗಿದೆ. ಇದಕ್ಕೆ ವಿರುದ್ಧವಾಗಿ ಕೆಲವು ಸವಾಲುಗಳು ಕೂಡ ಕೇಳಿಬಂದಿದ್ದು, ಈ ಕಾನೂನು ಜಾರಿಗೆ ಕೆಲವು ಸವಾಲು ಅಡ್ಡ ನಿಂತಿವೆ ಎನ್ನಬಹುದು. ಐಟಿ ಮತ್ತು ಸ್ಟಾರ್ಟ್‌ಅಪ್ ಕ್ಷೇತ್ರಗಳಲ್ಲಿ 24x7 ಕೆಲಸದ ಸಂಸ್ಕೃತಿ ಇರುವುದರಿಂದ ಕಂಪನಿಗಳು ಇದನ್ನು ಅನುಸರಿಸಲು ಹಿಂಜರಿಯಬಹುದು. ಜೊತೆಗೆ, ಜಾಗತಿಕ ಗ್ರಾಹಕರೊಂದಿಗೆ ಕೆಲಸ ಮಾಡುವ ಸಂಸ್ಥೆಗಳು ಸಮಯ ವ್ಯತ್ಯಾಸದ ಕಾರಣದಿಂದ ನಿರಂತರ ಸಂಪರ್ಕದಲ್ಲಿರಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಏನಾಗುತ್ತದೆಯೋ ಕಾದು ನೋಡೋಣ.