May 6, 2026 Languages : ಕನ್ನಡ | English

ದಳಪತಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ - ಮೇ 7ಕ್ಕೆ ತಮಿಳುನಾಡಿನ ನೂತನ ಸಿಎಂ ಆಗಿ ವಿಜಯ್ ಪ್ರಮಾಣ ವಚನ!!

ತಮಿಳುನಾಡು ರಾಜಕೀಯದಲ್ಲಿ ಈಗ ಸಂಚಲನವೋ ಸಂಚಲನ! ದಳಪತಿ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷ ಈಗ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ. ಹೌದು, ಬಹುದಿನಗಳ ಕುತೂಹಲಕ್ಕೆ ತೆರೆ ಬಿದ್ದಿದ್ದು, ನಟ ವಿಜಯ್ ಅವರು ಮೇ 7 ರಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಬಗ್ಗೆ ಸ್ವತಃ ವಿಜಯ್ ಅವರೇ ತಮಿಳುನಾಡು ರಾಜ್ಯಪಾಲರಿಗೆ ಇಮೇಲ್ ಮೂಲಕ ಮಾಹಿತಿ ರವಾನಿಸಿದ್ದಾರೆ.

ತಮಿಳುನಾಡು ರಾಜಕೀಯದಲ್ಲಿ ಹೊಸ ಯುಗ | Photo Credit: https://x.com/yugendarjadi
ತಮಿಳುನಾಡು ರಾಜಕೀಯದಲ್ಲಿ ಹೊಸ ಯುಗ | Photo Credit: https://x.com/yugendarjadi

ಮೇ 7ಕ್ಕೆ ದಳಪತಿ ಪಟ್ಟಾಭಿಷೇಕ!

ತಮಿಳುನಾಡು ವಿಧಾನಸಭೆಯ ಇತ್ತೀಚಿನ ಬೆಳವಣಿಗೆಗಳ ಬೆನ್ನಲ್ಲೇ, ಟಿವಿಕೆ ಶಾಸಕಾಂಗ ಪಕ್ಷದ ನಾಯಕರಾಗಿ ವಿಜಯ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೇ 7ರಂದು ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ನಂತರ ಮುಂದಿನ 15 ದಿನಗಳ ಒಳಗಾಗಿ ವಿಧಾನಸಭೆಯಲ್ಲಿ ತಮ್ಮ ಬಹುಮತವನ್ನು ಸಾಬೀತುಪಡಿಸಬೇಕಿದೆ.

ಬಹುಮತಕ್ಕೆ 11 ಶಾಸಕರ ಕೊರತೆ: ವಿಜಯ್ ಪ್ಲ್ಯಾನ್ ಏನು?

ಸದ್ಯದ ಲೆಕ್ಕಾಚಾರದ ಪ್ರಕಾರ, ಟಿವಿಕೆ ಪಕ್ಷಕ್ಕೆ ಬಹುಮತ ಸಾಬೀತುಪಡಿಸಲು ಇನ್ನೂ 11 ಶಾಸಕರ ಬೆಂಬಲದ ಅವಶ್ಯಕತೆ ಇದೆ. ಈ ಮ್ಯಾಜಿಕ್ ನಂಬರ್ ತಲುಪಲು ವಿಜಯ್ ಅವರು ಈಗ 'ಮಿತ್ರರ' ಮೊರೆ ಹೋಗಿದ್ದಾರೆ. ಈ ನಿಟ್ಟಿನಲ್ಲಿ ಅವರು ಕಾಂಗ್ರೆಸ್ ಪಕ್ಷದ ಬೆಂಬಲ ಕೋರಿದ್ದಾರೆ ಎಂಬ ಸುದ್ದಿ ಈಗ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷ 5 ಶಾಸಕರನ್ನು ಹೊಂದಿದೆ. ವಿಜಯ್ ಅವರ ಮನವಿಯನ್ನು ತಮಿಳುನಾಡು ಕಾಂಗ್ರೆಸ್ ಘಟಕವು ಹೈಕಮಾಂಡ್ ಅಂಗಳಕ್ಕೆ ತಲುಪಿಸಿದೆ. ದೆಹಲಿಯ ಮಟ್ಟದಲ್ಲಿ ಚರ್ಚೆ ನಡೆದು, ಕಾಂಗ್ರೆಸ್ ಹೈಕಮಾಂಡ್ ಅಂತಿಮ ತೀರ್ಮಾನ ನೀಡಿದ ಮೇಲೆ ವಿಜಯ್ ಸರ್ಕಾರಕ್ಕೆ 'ಕೈ' ಬೆಂಬಲ ಸಿಗಲಿದೆಯೇ ಎಂಬುದು ಸ್ಪಷ್ಟವಾಗಲಿದೆ.

ಸಣ್ಣ ಪಕ್ಷಗಳ ಬೆಂಬಲಕ್ಕೂ ಕಸರತ್ತು

ಕೇವಲ ಕಾಂಗ್ರೆಸ್ ಮಾತ್ರವಲ್ಲದೆ, ಇತರೆ ಸಣ್ಣ ಪಕ್ಷಗಳ ಬೆಂಬಲ ಪಡೆಯಲು ಟಿವಿಕೆ ತಂತ್ರ ರೂಪಿಸಿದೆ.

ವಿಸಿಕೆ (VCK): 2 ಶಾಸಕರು

ಐಯುಎಂಎಲ್ (IUML): 2 ಶಾಸಕರು

ಸಿಪಿಐ (CPI): 2 ಶಾಸಕರು

ಈ ಪಕ್ಷಗಳ ತಲಾ ಇಬ್ಬರು ಶಾಸಕರ ಬೆಂಬಲ ಸಿಕ್ಕರೆ ವಿಜಯ್ ಸರ್ಕಾರ ಸುಗಮವಾಗಿ ಬಹುಮತ ಸಾಬೀತುಪಡಿಸಬಹುದಾಗಿದೆ. ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸಿ ಸರ್ಕಾರ ರಚಿಸಬೇಕು ಎಂಬುದು ವಿಜಯ್ ಅವರ ಉದ್ದೇಶವಾಗಿದ್ದು, ಈ ಬಗ್ಗೆ ಮಾತುಕತೆಗಳು ಚುರುಕುಗೊಂಡಿವೆ.

ಕಾಂಗ್ರೆಸ್ ಹೈಕಮಾಂಡ್ ನಿರ್ಧಾರವೇ ಅಂತಿಮ!

ಈಗಾಗಲೇ ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೂಡ ಜಾತ್ಯತೀತ ಶಕ್ತಿಗಳು ಒಂದಾಗಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ತಮಿಳುನಾಡಿನಲ್ಲಿ ವಿಜಯ್ ಅವರಿಗೆ ಕಾಂಗ್ರೆಸ್ ಬೆಂಬಲ ನೀಡುವ ಸಾಧ್ಯತೆ ದಟ್ಟವಾಗಿದೆ. ಆದರೆ, ಅಂತಿಮವಾಗಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನೊಳಗೊಂಡ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ವಿಜಯ್ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ.

ಬೆಳ್ಳಿತೆರೆಯಲ್ಲಿ ಮಿಂಚಿದ್ದ ದಳಪತಿ ವಿಜಯ್, ಈಗ ತಮಿಳುನಾಡಿನ ಆಡಳಿತ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ. ಮೇ 7ರ ಪ್ರಮಾಣ ವಚನ ಸಮಾರಂಭದ ಬಳಿಕ ನಡೆಯಲಿರುವ 15 ದಿನಗಳ 'ಬಹುಮತದ ಕಸರತ್ತು' ತಮಿಳುನಾಡು ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲಿದೆ.

Latest News