Apr 16, 2026 Languages : ಕನ್ನಡ | English

6 ಕಿಮೀ ದೂರಕ್ಕೆ ಸಿಕ್ಕಿದ್ದು ಕೇವಲ 35 ರೂ - ಸ್ವಿಗ್ಗಿ ಡೆಲಿವರಿ ಬಾಯ್ ಬಾಕ್ಸ್ ಎಳೆದುಕೊಂಡು ಹೋದ ವಿಡಿಯೋ ವೈರಲ್!!

ಸೋಶಿಯಲ್ ಮೀಡಿಯಾದಲ್ಲಿ ಈಗ ಒಂದು ವಿಡಿಯೋ ಸಖತ್ ವೈರಲ್ ಆಗ್ತಿದೆ. ಅದನ್ನು ನೋಡಿದ್ರೆ ಎಂತಹವರಿಗಾದರೂ ಒಂದು ಕ್ಷಣ ಬೇಸರ ಆಗುತ್ತೆ, ಜೊತೆಗೆ ಈ ದೊಡ್ಡ ಕಂಪನಿಗಳ ಮೇಲೆ ಸಿಟ್ಟು ಬರುತ್ತೆ. ಡೆಲಿವರಿ ಬಾಯ್ ಒಬ್ಬ ತನ್ನ ಬೆನ್ನ ಮೇಲಿರೋ ಸ್ವಿಗ್ಗಿ ಬಾಕ್ಸ್ ಅನ್ನ ರಸ್ತೆಯ ಮೇಲೆ ಎಳೆದುಕೊಂಡು ಹೋಗ್ತಿರೋ ದೃಶ್ಯವದು.

ಡೆಲಿವರಿ ಪಾರ್ಟ್ನರ್ಸ್ ಸ್ಥಿತಿ ನೋಡಿ ಕಂಪನಿಗಳ ವಿರುದ್ಧ ಕೆರಳಿದ ನೆಟ್ಟಿಗರು
ಡೆಲಿವರಿ ಪಾರ್ಟ್ನರ್ಸ್ ಸ್ಥಿತಿ ನೋಡಿ ಕಂಪನಿಗಳ ವಿರುದ್ಧ ಕೆರಳಿದ ನೆಟ್ಟಿಗರು

ವರದಿಗಳ ಪ್ರಕಾರ, ಆ ಡೆಲಿವರಿ ರೈಡರ್ ಬರೋಬ್ಬರಿ 6.2 ಕಿಲೋಮೀಟರ್ ದೂರ ಹೋಗಿ ಫುಡ್ ಡೆಲಿವರಿ ಮಾಡಿದ್ದಾನೆ. ಇವತ್ತಿನ ಕಾಲದಲ್ಲಿ 6 ಕಿಮೀ ಅಂದ್ರೆ ಬೆಂಗಳೂರಿನಂತಹ ಸಿಟಿಗಳಲ್ಲಿ ಟ್ರಾಫಿಕ್ ಮಧ್ಯೆ ಕನಿಷ್ಠ ಅರ್ಧ ಗಂಟೆ ಬೇಕು. ಅಷ್ಟು ದೂರ ಹೋಗಿ ಬಂದಿದ್ದಕ್ಕೆ ಆತನಿಗೆ ಸಿಕ್ಕಿರೋ ಸಂಬಳ ಎಷ್ಟು ಗೊತ್ತಾ? ಕೇವಲ 35 ರೂಪಾಯಿ! ಒಮ್ಮೆ ಯೋಚನೆ ಮಾಡಿ, ಲೀಟರ್ ಪೆಟ್ರೋಲ್ ಬೆಲೆ ನೂರು ರೂಪಾಯಿ ದಾಟಿದೆ. ಇನ್ನು ಗಾಡಿ ಸವಕಳಿ, ಆತನ ಶ್ರಮ ಎಲ್ಲವನ್ನೂ ಲೆಕ್ಕ ಹಾಕಿದರೆ, ಆ 35 ರೂಪಾಯಿಯಲ್ಲಿ ಆತನ ಕೈಗೆ ಉಳಿಯೋದಾದ್ರೂ ಏನು?

ಕಂಪನಿಗಳು ಕೋಟಿ ಕೋಟಿ ಲಾಭ ಮಾಡ್ತವೆ, ದೊಡ್ಡ ದೊಡ್ಡ ಆಫರ್‌ಗಳನ್ನ ಜನರಿಗೆ ಕೊಡ್ತವೆ. ಆದ್ರೆ ಮಳೆ, ಬಿಸಿಲು ಎನ್ನದೆ ಹಗಲು ರಾತ್ರಿ ಕಷ್ಟಪಟ್ಟು ಮನೆ ಮನೆಗೆ ಊಟ ತಲುಪಿಸೋ ಈ 'ಡೆಲಿವರಿ ಪಾರ್ಟ್ನರ್ಸ್' ಸ್ಥಿತಿ ಮಾತ್ರ ಹದಗೆಟ್ಟಿದೆ. ಕಾರ್ಮಿಕರನ್ನ ಹಿಂಡಿ ಹಿಪ್ಪೆ ಮಾಡಿ, ಅವರಿಗೆ ಕವಡೆ ಕಾಸು ಕೊಡೋದು ಎಷ್ಟರ ಮಟ್ಟಿಗೆ ಸರಿ? "ಇದು ಅನ್ಯಾಯ ಮಾತ್ರವಲ್ಲ, ಇದು ಹಗಲು ದರೋಡೆ" ಅಂತ ನೆಟ್ಟಿಗರು ಈ ವಿಡಿಯೋ ನೋಡಿ ಕಿಡಿಕಾರುತ್ತಿದ್ದಾರೆ.

ಹೊಟ್ಟೆ ಉರಿದಾಗ ಮನುಷ್ಯ ಏನು ಮಾಡ್ತಾನೆ?

ತನ್ನ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗದೇ ಇದ್ದಾಗ ಆ ರೈಡರ್ ಅನುಭವಿಸಿದ ಆಕ್ರೋಶ ಆ ವಿಡಿಯೋದಲ್ಲಿದೆ. ಡೆಲಿವರಿ ಬಾಕ್ಸ್ ಅನ್ನ ರಸ್ತೆಯ ಮೇಲೆ ಎಳೆಯುವ ಮೂಲಕ ಆತ ತನ್ನ ಅಸಹಾಯಕತೆಯನ್ನು ಹೊರಹಾಕಿದ್ದಾನೆ. "ನಮ್ಮ ಶ್ರಮಕ್ಕೆ ಬೆಲೆ ಇಲ್ಲದ ಮೇಲೆ ಈ ಕೆಲಸ ಯಾಕೆ?" ಅನ್ನೋ ಪ್ರಶ್ನೆ ಆತನ ನಡವಳಿಕೆಯಲ್ಲಿ ಎದ್ದು ಕಾಣುತ್ತಿತ್ತು.

ದೊಡ್ಡ ದೊಡ್ಡ ಆ್ಯಪ್‌ಗಳು ತಮ್ಮ ಪಾಲಿಸಿಯನ್ನ ಬದಲಾಯಿಸಿಕೊಳ್ಳಬೇಕಿದೆ. ದುಡಿಯೋ ಕೈಗಳಿಗೆ ಗೌರವಯುತವಾದ ಸಂಭಾವನೆ ಕೊಡದಿದ್ದರೆ, ಇಂತಹ ಆಕ್ರೋಶಗಳು ಮುಂದೊಂದು ದಿನ ಸ್ಫೋಟಗೊಳ್ಳೋದ್ರಲ್ಲಿ ಸಂಶಯವಿಲ್ಲ.

ಬಡವನ ಹೊಟ್ಟೆ ಮೇಲೆ ಹೊಡೆದು ಯಾವ ಕಂಪನಿಯೂ ಉದ್ದಾರ ಆಗಲ್ಲ ಅನ್ನೋದಕ್ಕೆ ಈ ವಿಡಿಯೋವೇ ಸಾಕ್ಷಿ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ಡೆಲಿವರಿ ರೈಡರ್ಸ್‌ಗೆ ಸಿಗುತ್ತಿರೋ ಹಣ ಸಾಕೇ? ಕಮೆಂಟ್ ಮಾಡಿ ತಿಳಿಸಿ.