Mar 1, 2026 Languages : ಕನ್ನಡ | English

ಮಂತ್ರಿ ಟ್ರ್ಯಾಂಕ್ವಿಲ್ ಮತ್ತು ರಾಯಲ್ ಪಾಲ್ಮ್ಸ್ ನಿವಾಸಿಗಳಿಗೆ ಶಾಕ್? ಕಾಲುವೆ ಮರುಸ್ಥಾಪನೆಗೆ ಕೋರ್ಟ್ ಆದೇಶಿಸಿದ್ದೇಕೆ?

ಸುಬ್ರಮಣ್ಯಪುರ ಕೆರೆಯ ಕಾಲುವೆಗಳನ್ನು ಅತಿಕ್ರಮಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಂತ್ರಿ ಟ್ರ್ಯಾಂಕ್ವಿಲ್ ಅಪಾರ್ಟ್‌ಮೆಂಟ್ ಮತ್ತು ರಾಯಲ್ ಪಾಲ್ಮ್ಸ್ ನಿವಾಸಿಗಳ ಸಂಘ ಸಲ್ಲಿಸಿದ್ದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ತಳ್ಳಿಹಾಕಿದೆ. ನ್ಯಾಯಮೂರ್ತಿ ಆರ್. ನಟರಾಜ್ ಅವರ ಪೀಠವು ಈ ಕುರಿತು ಮಹತ್ವದ ಆದೇಶ ನೀಡಿದ್ದು, ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಗೆ ಮಳೆನೀರಿನ ಕಾಲುವೆಗಳ (SWD) ಮರುಪರಿಶೀಲನೆ ನಡೆಸುವಂತೆ ಸೂಚಿಸಿದೆ. ಕೆರೆಗೆ ನೀರು ಹರಿಯುವ ದಾರಿಯಲ್ಲಿ ಉಂಟಾಗಿರುವ ಅಡೆತಡೆಗಳನ್ನು ನಿವಾರಿಸುವುದು ಈ ಆದೇಶದ ಮುಖ್ಯ ಉದ್ದೇಶವಾಗಿದೆ.

ಸುಬ್ರಮಣ್ಯಪುರ ಕೆರೆ – ಕಾಲುವೆ ಮರುಸ್ಥಾಪನೆಗಾಗಿ ಹೈಕೋರ್ಟ್ ಆದೇಶ!
ಸುಬ್ರಮಣ್ಯಪುರ ಕೆರೆ – ಕಾಲುವೆ ಮರುಸ್ಥಾಪನೆಗಾಗಿ ಹೈಕೋರ್ಟ್ ಆದೇಶ!

ಪರ್ಯಾಯ ಮಾರ್ಗಕ್ಕೆ ಅವಕಾಶ

ನ್ಯಾಯಾಲಯವು ಅರ್ಜಿದಾರರಿಗೆ ಒಂದು ಅವಕಾಶವನ್ನು ನೀಡಿದೆ. ಒಂದು ವೇಳೆ ಅಪಾರ್ಟ್‌ಮೆಂಟ್ ಸಂಕೀರ್ಣಗಳ ಅಡಿಯಲ್ಲಿ ಕಾಲುವೆ ಹರಿಯುತ್ತಿದ್ದರೆ, ಕೆರೆಗೆ ನೀರು ಮುಕ್ತವಾಗಿ ಹರಿಯಲು ಅರ್ಜಿದಾರರೇ ಯಾವುದಾದರೂ 'ಪರ್ಯಾಯ ಮಾರ್ಗ'ವನ್ನು ಸೂಚಿಸಬಹುದು. ಅರ್ಜಿದಾರರು ಇಂತಹ ಪರ್ಯಾಯ ನಕ್ಷೆಯನ್ನು ನೀಡಿದಲ್ಲಿ, ಜಿಬಿಎ ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಆದರೆ, ಅರ್ಜಿದಾರರು ಯಾವುದೇ ಪರ್ಯಾಯ ಮಾರ್ಗವನ್ನು ನೀಡದಿದ್ದಲ್ಲಿ, ತಜ್ಞರ ಸಮಿತಿಯು ನೀಡಿದ ವರದಿಯ ಆಧಾರದ ಮೇಲೆ ಮೂಲ ಕಾಲುವೆಗಳನ್ನು ಮರುಸ್ಥಾಪಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈ ವಿವಾದವು 2014 ರಿಂದಲೂ ನಡೆಯುತ್ತಿದೆ. ಬೆಂಗಳೂರು ದಕ್ಷಿಣ ತಾಲ್ಲೂಕಿನ ಗುಬ್ಬಲಾಲ ಗ್ರಾಮದಲ್ಲಿರುವ ಮಂತ್ರಿ ಟ್ರ್ಯಾಂಕ್ವಿಲ್ ನಿವಾಸ ಸಂಕೀರ್ಣದ ಮೇಲೆ ಯಾವುದೇ ಭಾಗವನ್ನು ಧ್ವಂಸಗೊಳಿಸಬಾರದು ಎಂದು ಬಿಬಿಎಂಪಿ ನೋಟಿಸ್ ವಿರುದ್ಧ ಈ ಹಿಂದೆ ಮಂತ್ರಿ ಡೆವಲಪರ್ಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅದೇ ರೀತಿ 2019ರಲ್ಲಿ ರಾಯಲ್ ಪಾಲ್ಮ್ಸ್ ನಿವಾಸಿಗಳೂ ಸಹ ಮಳೆನೀರು ಕಾಲುವೆ ಮರುಸ್ಥಾಪನೆಯ ಹೆಸರಿನಲ್ಲಿ ತಮ್ಮ ಹಕ್ಕುಗಳಿಗೆ ಚ್ಯುತಿ ಬರಬಾರದು ಎಂದು ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ವಾದದ ಪ್ರಕಾರ, 1995ರ ಸಮಗ್ರ ಅಭಿವೃದ್ಧಿ ಯೋಜನೆ (CDP) ಯಲ್ಲಿ ಈ ಜಾಗದಲ್ಲಿ ಕಾಲುವೆ ಇರುವ ಬಗ್ಗೆ ಉಲ್ಲೇಖವಿರಲಿಲ್ಲ ಮತ್ತು ಅನುಮೋದಿತ ಯೋಜನೆಯಂತೆಯೇ ಕಟ್ಟಡ ನಿರ್ಮಿಸಲಾಗಿದೆ ಎಂಬುದು ಅವರ ವಾದವಾಗಿತ್ತು.

ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಕೆರೆಯ ಅಳಿವು-ಉಳಿವಿನ ಬಗ್ಗೆ ಕಾಳಜಿ ವ್ಯಕ್ತಪಡಿಸಿದೆ. ಸುಬ್ರಮಣ್ಯಪುರ ಕೆರೆಯು ಸುಮಾರು 1 ಚದರ ಕಿಲೋಮೀಟರ್ ವಿಸ್ತೀರ್ಣದ ಕ್ಯಾಚ್ಮೆಂಟ್ ಪ್ರದೇಶವನ್ನು (ಜಲಾನಯನ ಪ್ರದೇಶ) ಹೊಂದಿದೆ. ಸರ್ವೆ ಸಂಖ್ಯೆ 7 ಮತ್ತು 11 ರ ಮೂಲಕ ಹರಿಯುತ್ತಿದ್ದ ನೈಸರ್ಗಿಕ ಕಾಲುವೆಗಳನ್ನು ಮುಚ್ಚಿ ಅಭಿವೃದ್ಧಿ ಮಾಡುವುದು ಕಾನೂನುಬಾಹಿರ ಮತ್ತು ಇದು ಸ್ಥಳೀಯ ನಿವಾಸಿಗಳ ಹಿತದೃಷ್ಟಿಯಿಂದ ಅಪಾಯಕಾರಿ ಎಂದು ನ್ಯಾಯಾಲಯ ಹೇಳಿದೆ. ಕಾಲುವೆಗಳ ಸುತ್ತ ಬಫರ್ ಪ್ರದೇಶವನ್ನು ಮೀಸಲಿಡುವುದು ಅನಿವಾರ್ಯವಾಗಿದ್ದು, ಕೆರೆಯ ಅಸ್ತಿತ್ವಕ್ಕಾಗಿ ಕಾಲುವೆಗಳ ಮರುಸ್ಥಾಪನೆ ಅಗತ್ಯವೆಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

Latest News