ಮಾರಿಕಾಂಬಾ ಮಹಾಜಾತ್ರೆ ಆರಂಭ - ಅಮ್ಮನ ರಥಾರೋಹಣ ಕ್ಷಣ, ಶಿರಸಿಯ ಬೀದಿಗಳಲ್ಲಿ ಭಕ್ತಿಯ ಮೆರವಣಿಗೆ!!

ದಕ್ಷಿಣ ಭಾರತದ ಖ್ಯಾತ ಕ್ಷೇತ್ರವಾದ ಶಿರಸಿಯಲ್ಲಿ ಈಗ ಮಾರಿಕಾಂಬಾ ದೇವಿಯ ಮಹಾಜಾತ್ರೆಯ ಸಡಗರ ಮನೆಮಾಡಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಜರುಗುವ ಈ ಅದ್ಧೂರಿ ಉತ್ಸವವನ್ನು ಕಣ್ತುಂಬಿಕೊಳ್ಳಲು ಕರ್ನಾಟಕದ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ, ಗೋವಾ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಂತಹ ಹೊರರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಶಿರಸಿಯತ್ತ ಧಾವಿಸುತ್ತಿದ್ದಾರೆ.

ಅಮ್ಮನ ರಥಾರೋಹಣ – ಶಿರಸಿಯ ಬೀದಿಗಳಲ್ಲಿ ಭಕ್ತಿಯ ಮೆರವಣಿಗೆ!!
ಅಮ್ಮನ ರಥಾರೋಹಣ – ಶಿರಸಿಯ ಬೀದಿಗಳಲ್ಲಿ ಭಕ್ತಿಯ ಮೆರವಣಿಗೆ!!

ಉತ್ತರ ಕನ್ನಡದ ಶಿರಸಿಯಲ್ಲಿ ಈಗ ಸಂಭ್ರಮದ ವಾತಾವರಣ ನೆಲೆಸಿದೆ. ದಕ್ಷಿಣ ಭಾರತದ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಶಿರಸಿ ಮಾರಿಕಾಂಬಾ ದೇವಿಯ ದ್ವೈವಾರ್ಷಿಕ ಮಹಾ ಜಾತ್ರೆಗೆ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಈ ಸಡಗರವು ಬರೀ ಒಂದು ಜಿಲ್ಲೆಗೆ ಮಾತ್ರವಲ್ಲದೆ, ದೇಶದ ಮೂಲೆ ಮೂಲೆಗಳಿಂದ ಬರುವ ಲಕ್ಷಾಂತರ ಭಕ್ತರ ಆಕರ್ಷಣೆಯ ಕೇಂದ್ರವಾಗಿದೆ. ಶಿರಸಿಯ ಮಹಾ ಜಾತ್ರೆಯ ಕಳೆ ಈಗ ಎಲ್ಲೆಡೆ ಹರಡಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಸುಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿಯ ಈ ಉತ್ಸವವು ಅತ್ಯಂತ ವೈಭವದಿಂದ ಆರಂಭವಾಗಿದ್ದು, ದೇವಿಯ ದರ್ಶನ ಪಡೆಯಲು ರಾಜ್ಯ ಹಾಗೂ ಹೊರರಾಜ್ಯಗಳಿಂದ ಭಕ್ತರ ಸಾಗರವೇ ಹರಿದುಬರುತ್ತಿದೆ.

ಜಾತ್ರೆಯ ಸಂಪ್ರದಾಯದಂತೆ ನಿನ್ನೆ ರಾತ್ರಿ ದೇವಸ್ಥಾನದ ಆವರಣದಲ್ಲಿ ದೇವಿಯ ‘ಕಲ್ಯಾಣೋತ್ಸವ’ ಅತ್ಯಂತ ವೈಭವೋಪೇತವಾಗಿ ನೆರವೇರಿತು. ನವವಧುವಿನಂತೆ ಶೃಂಗಾರಗೊಂಡಿದ್ದ ದೇವಿಯ ದರ್ಶನವು ಭಕ್ತರ ಪಾಲಿಗೆ ಕಣ್ಣಿಗೆ ಹಬ್ಬದಂತಿತ್ತು. ಇಂದು ಮುಂಜಾನೆ ಸರಿಯಾಗಿ 8:30ಕ್ಕೆ ದೇವಿ ರಥವನ್ನು ಏರುವ ‘ರಥಾರೋಹಣ’ ಕಾರ್ಯಕ್ರಮ ಜರುಗಿತು. ಅಲಂಕೃತಗೊಂಡ ಬೃಹತ್ ರಥದ ಮೇಲೆ ಅಮ್ಮನವರು ಆಸೀನರಾಗುತ್ತಿದ್ದಂತೆಯೇ, ನೆರೆದಿದ್ದ ಭಕ್ತಸಮೂಹದ ಹರ್ಷೋದ್ಗಾರ ಮತ್ತು ಜಯಘೋಷಗಳು ಗಗನಕ್ಕೇರಿದವು.

ಸದ್ಯ ಶಿರಸಿಯ ಪ್ರಮುಖ ರಸ್ತೆಗಳಲ್ಲಿ ದೇವಿಯ ರಥದ ಮೆರವಣಿಗೆ ಸಾಗುತ್ತಿದೆ. ಈ ಜಾತ್ರೆಯ ಒಂದು ವಿಶೇಷವೆಂದರೆ, ರಥ ಸಾಗುವಾಗ ಭಕ್ತರು ತಮ್ಮ ಹರಕೆ ತೀರಿಸಲು ಬಾಳೆಹಣ್ಣು, ಕೋಳಿ ಮತ್ತು ಅರಳುಗಳನ್ನು ರಥದತ್ತ ಎಸೆಯುತ್ತಾರೆ. ರಸ್ತೆಯ ಇಕ್ಕೆಲಗಳಲ್ಲಿ ನಿಂತಿರುವ ಸಾವಿರಾರು ಭಕ್ತರು "ಅಮ್ಮಾ ನಿನ್ನ ಕೃಪೆ ಇರಲಿ" ಎಂದು ಬೇಡಿಕೊಳ್ಳುತ್ತಾ ಭಕ್ತಿಯ ಸಾಗರದಲ್ಲಿ ಮಿಂದೇಳುತ್ತಿದ್ದಾರೆ.

ರಥದ ಮೆರವಣಿಗೆ ಮುಗಿದ ನಂತರ ದೇವಿಯನ್ನು ಜಾತ್ರಾ ಗದ್ದುಗೆಯ ಮೇಲೆ ಪ್ರತಿಷ್ಠಾಪಿಸಲಾಗುತ್ತದೆ. ಫೆಬ್ರವರಿ 24 ರಿಂದ ಮಾರ್ಚ್ 4 ರವರೆಗೆ ಒಟ್ಟು 9 ದಿನಗಳ ಕಾಲ ದೇವಿ ಇಲ್ಲಿಯೇ ಭಕ್ತರಿಗೆ ದರ್ಶನ ನೀಡುತ್ತಾಳೆ. ಈ ಸಮಯದಲ್ಲಿ ಶಿರಸಿಯಾದ್ಯಂತ ದೊಡ್ಡ ಸಂತೆಯ ಜೊತೆಗೆ ವಿವಿಧ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.

ಲಕ್ಷಾಂತರ ಜನ ಸೇರುತ್ತಿರುವುದರಿಂದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಬಿಗಿ ಭದ್ರತೆ ಮಾಡಿದೆ. ಭಕ್ತರಿಗಾಗಿ ಕುಡಿಯುವ ನೀರು, ನೆರಳು ಮತ್ತು ಆರೋಗ್ಯ ಸೇವೆಗಳ ವ್ಯವಸ್ಥೆಯನ್ನ ಮಾಡಲಾಗಿದೆ. ಜನರ ಸಂಸ್ಕೃತಿ ಮತ್ತು ಗಾಢವಾದ ನಂಬಿಕೆಯ ಪ್ರತೀಕವಾಗಿರುವ ಈ ಜಾತ್ರೆಗೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆಯಲು ಇದು ಸರಿಯಾದ ಸಮಯ. 

Latest News